ತಂಪು ಕನ್ನಡಕಗಳ ಕುರಿತು ಆರು ಮಿಥ್ಯೆಗಳು

Update: 2018-11-08 10:45 GMT

ಸನ್‌ಗ್ಲಾಸ್ ಅಥವಾ ತಂಪು ಕನ್ನಡಕಗಳು ನಿಮಗೊಂದು ಸ್ಟೈಲ್ ನೀಡುತ್ತವೆ,ನಿಜ. ಆದರೆ ಅವುಗಳ ಮುಖ್ಯ ಕಾರ್ಯ ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ಕಾಪಾಡುವುದು ಮತ್ತು ಅಲ್ಟ್ರಾವಯಲೆಟ್(ಯುವಿ) ಅಥವಾ ಅತಿನೇರಳೆ ವಿಕಿರಣದ ವಿರುದ್ಧ ರಕ್ಷಣೆ ನೀಡುವುದಾಗಿದೆ. ನೀವು ಬಹುವಾಗಿ ಇಷ್ಟ ಪಡುವ ತಂಪು ಕನ್ನಡಕಗಳು ನಿಮ್ಮ ಕಣ್ಣುಗಳಿಗೆ ಅಗತ್ಯ ರಕ್ಷಣೆಯನ್ನು ನೀಡದಿರಬಹುದು. ಜನರು ಹೆಚ್ಚಿನ ಸಂದರ್ಭಗಳಲ್ಲಿ ತಪ್ಪು ತಂಪು ಕನ್ನಡಕಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗಾಗಿ ಭಾರೀ ಮೊತ್ತದ ದುಡ್ಡು ಪೋಲು ಮಾಡುತ್ತಾರೆ. ತಂಪು ಕನ್ನಡಕಗಳ ಕುರಿತು ಮಿಥ್ಯೆಗಳು ಮತ್ತು ಸರಿಯಾದ ಜೊತೆಯನ್ನು ಹೇಗೆ ಆಯ್ಕೆ ಮಾಡಬೇಕು ಎನ್ನುವ ಕುರಿತು ಅಗತ್ಯ ಮಾಹಿತಿಗಳಿಲ್ಲಿವೆ.

►ಎಲ್ಲ ತಂಪು ಕನ್ನಡಕಗಳು ಕಣ್ಣುಗಳಿಗೆ ರಕ್ಷಣೆಯನ್ನು ನೀಡುತ್ತವೆ

ಇದು ನಿಜವಲ್ಲ. ಎಲ್ಲ ತಂಪು ಕನ್ನಡಕಗಳೂ ಯುವಿ ಕಿರಣಗಳ ವಿರುದ್ಧ ಕಣ್ಣುಗಳಿಗೆ ಸಂಪೂರ್ಣ ರಕ್ಷಣೆಯನ್ನು ನೀಡುವುದಿಲ್ಲ. ಖರೀದಿಗೆ ಮುನ್ನ ಎಲ್ಲ ವಿವರಗಳನ್ನೂ ಪರಿಶೀಲಿಸಿ ಯುವಿ ಕಿರಣಗಳಿಂದ ಸಂಫೂರ್ಣ ರಕ್ಷಣೆಯನ್ನು ನೀಡುವ ತಂಪು ಕನ್ನಡಕಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಿದೆ. ಯುವಿ ಕಿರಣಗಳಿಂದ ರಕ್ಷಣೆ ನೀಡುವುದೂ ಹೆಚ್ಚುಕಡಿಮೆಯಿರಬಹುದು. ಕೆಲವು ತಂಪು ಕನ್ನಡಕಗಳಂತೂ ಯುವಿ ಕಿರಣಗಳ ವಿರುದ್ಧ ಕೊಂಚವೂ ರಕ್ಷಣೆಯನ್ನು ನೀಡುವುದಿಲ್ಲ.

► ಹೆಚ್ಚು ಗಾಢ ಬಣ್ಣದ ತಂಪು ಕನ್ನಡಕಗಳು ಉತ್ತಮ ರಕ್ಷಣೆಯನ್ನು ನೀಡುತ್ತವೆ

ಇದು ಜನರಲ್ಲಿ ಮನೆಮಾಡಿರುವ ಅತ್ಯಂತ ಸಾಮಾನ್ಯ ಮಿಥ್ಯೆಯಾಗಿದೆ. ಗಾಢಬಣ್ಣದ ತಂಪು ಕನ್ನಡಕಗಳು ವಾಸ್ತವದಲ್ಲಿ ಯುವಿ ಕಿರಣಗಳ ವಿರುದ್ಧ ರಕ್ಷಣೆ ನೀಡ ಕಣ್ಣುಗಳಿಗೆ ಹಾನಿಯನ್ನುಂಟು ಮಾಡಬಲ್ಲವು. ಏಕೆಂದರೆ ಲಘು ಛಾಯೆಯ ಕನ್ನಡಕಗಳಿಗೆ ಹೋಲಿಸಿದರೆ ಗಾಢ ಛಾಯೆಯ ಕನ್ನಡಕಗಳು ಕಣ್ಣುಗೊಂಬೆಯ ಹೆಚ್ಚಿನ ಹಿಗ್ಗುವಿಕೆಯನ್ನುಂಟು ಮಾಡುತ್ತವೆ. ಗಾಢ ಬಣ್ಣದ ಕನ್ನಡಕಗಳು ಸೂಕ್ತ ರಕ್ಷಣೆಯನ್ನು ಒದಗಿಸುತ್ತವೆ ಎಂದೇನಿಲ್ಲ. ಗ್ರೇ,ಆ್ಯಂಬರ್ ಮತ್ತು ಕಂದು ಛಾಯೆಯುಳ್ಳ ತಂಪು ಕನ್ನಡಕಗಳೂ ಹಾನಿಕಾರಕ ಕಿರಣಗಳನ್ನು ತಡೆಯುತ್ತವೆ. ಬಣ್ಣಗಳು ಸ್ಪಷ್ಟ ಗೋಚರತೆಯ ಮೇಲೂ ಪರಿಣಾಮವನ್ನುಂಟು ಮಾಡುತ್ತವೆ,ಹೀಗಾಗಿ ನಿಮ್ಮ ಅಗತ್ಯಕ್ಕನುಗುಣವಾಗಿ ತಂಪು ಕನ್ನಡಕಗಳನ್ನು ಆಯ್ಕೆ ಮಾಡಿಕೊಳ್ಳಿ.

► ದುಬಾರಿ ತಂಪು ಕನ್ನಡಕಗಳು ಮಾತ್ರ ಕಣ್ಣನ್ನು ರಕ್ಷಿಸುತ್ತವೆ

ಇದು ಜನರಲ್ಲಿ ಸಾಮಾನ್ಯವಾಗಿ ಬೇರೂರಿರುವ ತಪ್ಪುಗ್ರಹಿಕೆಯಾಗಿದೆ. ಕೆಲವು ಕಡಿಮೆದರದ ತಂಪು ಕನ್ನಡಕಗಳೂ ಕಣ್ಣುಗಳಿಗೆ ಉತ್ತಮ ರಕ್ಷಣೆಯನ್ನು ನೀಡಬಲ್ಲವು,ಹೀಗಾಗಿ ಇವುಗಳನ್ನು ಖರೀದಿಸಲು ಹೆಚ್ಚು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ತಂಪು ಕನ್ನಡಕಗಳು ನಿಮ್ಮ ಕಣ್ಣುಗಳಿಗೆ ರಕ್ಷಣೆಯನ್ನು ನೀಡಬಲ್ಲ ಸರಿಯಾದ ಗಾಜುಗಳನ್ನು ಹೊಂದಿರಬೇಕು. ದುಬಾರಿ ಬೆಲೆಯ ಎಲ್ಲ ಕನ್ನಡಕಗಳೂ ಒಳ್ಳೆಯವು ಎಂದೇನಿಲ್ಲ.

► ತಂಪು ಕನ್ನಡಕಗಳು ಶೈಲಿಗೆ ಮಾತ್ರ

ತಂಪು ಕನ್ನಡಕಗಳು ನಿಮ್ಮ ಶೈಲಿಯನ್ನು ಹೆಚ್ಚಿಸುತ್ತವೆ,ಆದರೆ ಅದು ನಿಮ್ಮ ಪಾಲಿಗೆ ಬೋನಸ್ ಮಾತ್ರ. ಸೂರ್ಯನ ಬಿಸಿಲು ಮತ್ತು ಅಪಾಯಕಾರಿ ಯುವಿ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುವುದು ಅದರ ಮುಖ್ಯ ಕೆಲಸವಾಗಿದೆ.

► ಬಿಸಿಲಿದ್ದಾಗ ಮಾತ್ರ ತಂಪು ಕನ್ನಡಕಗಳನ್ನು ಧರಿಸಬೇಕು

ಮೋಡ ಮುಸುಕಿದ ವಾತಾವರಣವಿದ್ದಾಗಲೂ ಯುವಿ ಕಿರಣಗಳು ಕಾಣಿಸಿಕೊಳ್ಳಬಹುದು ಮತ್ತು ನಮ್ಮ ಕಣ್ಣುಗಳಿಗೆ ಗಂಭೀರ ಹಾನಿಯನ್ನುಂಟು ಮಾಡಬಹುದು. ಬಿಸಿಲಿರಲಿ ಅಥವಾ ಮೋಡ ಮುಸುಕಿದ ವಾತಾವರಣವಿರಲಿ, ನೀವು ಮನೆಯಿಂದ ಹೊರಗೆ ಬೀಳುವಾಗಲೆಲ್ಲ ತಂಪು ಕನ್ನಡಕಗಳನ್ನು ಧರಿಸಬೇಕು. ಚಳಿಗಾಲದಲ್ಲಿ ಸೂರ್ಯನ ಬಿಸಿಲು ಬೇಸಿಗೆಯಷ್ಟೇ ಪ್ರಖರವಾಗಿರುವುದರಿಂದ ಯಾವುದೇ ಋತುವಿದ್ದರೂ ವರ್ಷವಿಡೀ ನಿಮ್ಮ ಕಣ್ಣುಗಳಿಗೆ ಸೂರ್ಯನ ಬಿಸಿಲಿನಿಂದ ರಕ್ಷಣೆ ಅಗತ್ಯವಾಗಿದೆ.

► ತಂಪು ಕನ್ನಡಕಗಳಿರುವುದು ವಯಸ್ಕರಿಗಾಗಿ ಮಾತ್ರ

ಮಕ್ಕಳಗೂ ತಂಪು ಕನ್ನಡಕಗಳ ಅಗತ್ಯವಿದೆ. ಅವರು ಆಟವಾಡುತ್ತ ಹೊರಗೆ ಹೆಚ್ಚಿನ ಕಾಲ ಕಳೆಯುತ್ತಿರುತ್ತಾರೆ. ಹೀಗಾಗಿ ಅವರು ಯುವಿ ಕಿರಣಗಳಿಗೆ ತೆರೆದುಕೊಳ್ಳುವ ಹೆಚ್ಚಿನ ಅವಕಾಶಗಳಿರುತ್ತವೆ. ನಿಮ್ಮ ಮಕ್ಕಳು ಮನೆಯಿಂದ ಹೊರಗೆ ಬೀಳುವಾಗ ತಂಪು ಕನ್ನಡಕಗಳನ್ನು ಧರಿಸಿರುವಂತೆ ನೋಡಿಕೊಳ್ಳಿ.

►► ತಂಪು ಕನ್ನಡಕಗಳ ಖರೀದಿಗೆ ಮುನ್ನ ಇವು ನಿಮ್ಮ ನೆನಪಿನಲ್ಲಿರಲಿ

ಯುವಿ ಕಿರಣಗಳು ಚರ್ಮಕ್ಕೆ ಅಪಾಯಕಾರಿಯಾಗಿವೆ,ಹಾಗೆಯೇ ನಿಮ್ಮ ಕಣ್ಣುಗಳಿಗೂ ಹಾನಿಯನ್ನುಂಟು ಮಾಡಬಲ್ಲವು. ತಂಪು ಕನ್ನಡಕಗಳನ್ನು ಖರೀದಿಸುವ ಮುನ್ನ ಅವು ಯುವಿ ಕಿರಣಗಳ ವಿರುದ್ಧ ರಕ್ಷಣೆಯನ್ನು ನೀಡುತ್ತವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಗರಿಷ್ಠ ಯುವಿ ರಕ್ಷಣೆಯನ್ನು ಒದಗಿಸುವಂತಹ ತಂಪು ಕನ್ನಡಕಗಳನ್ನೇ ಆಯ್ಕೆ ಮಾಡಿಕೊಳ್ಳಿ.

► ಅಳತೆ ಸರಿಯಾಗಿರಲಿ

ನಿಮ್ಮ ತಂಪು ಕನ್ನಡಕಗಳು ನಿಮಗೆ ಹೊಂದುವಂತಹ ಅಳತೆಯಲ್ಲಿದ್ದರೆ ನಿಮಗೆ ಗರಿಷ್ಠ ರಕ್ಷಣೆಯು ದೊರೆಯುತ್ತದೆ. ಅವು ನಿಮ್ಮ ಕಣ್ಣುಗಳನ್ನು ಪೂರ್ಣವಾಗಿ ಆವರಿಸಿಕೊಂಡಿರಬೇಕು.

► ಪೋಲರೈಸ್ಡ್ ಮಸೂರಗಳನ್ನು ಯತ್ನಿಸಿ ನೋಡಿ

ಪೋಲರೈಸ್ಡ್ ಮಸೂರಗಳು ಯುವಿ ಕಿರಣಗಳಿಂದ ಸಂಪೂರ್ಣ ರಕ್ಷಣೆಯನ್ನು ನೀಡದಿರಬಹುದು,ಆದರೆ ಬೆಳಕಿನ ತೀಕ್ಷ್ಣತೆಯನ್ನು ಕಡಿಮೆ ಮಾಡಬಲ್ಲವು. ನೀವು ಬೀಚ್‌ಗಳಿಗೆ ಭೇಟಿ ನೀಡುತ್ತಿದ್ದರೆ ಪೋಲರೈಸ್ಡ್ ಮಸೂರಗಳು ತುಂಬ ನೆರವಾಗಬಹುದು. ಬೆಳಕು ಪ್ರಖರವಾಗಿದ್ದರೆ ಅದನ್ನು ತಗ್ಗಿಸಲು ಇವುಗಳನ್ನು ಧರಿಸಿ.

► ಸರಿಯಾದ ಛಾಯೆಯನ್ನೇ ಆಯ್ಕೆ ಮಾಡಿಕೊಳ್ಳಿ

ಗಾಢ ಛಾಯೆಯ ತಂಪು ಕನ್ನಡಕಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಛಾಯೆ ಯಾವುದೇ ಇರಲಿ,ಅವು ಒದಗಿಸುವ ರಕ್ಷಣೆಯ ಮಟ್ಟವನ್ನು ಖಚಿತಪಡಿಸಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News