ವಿಶ್ವ ಚೆಸ್ ಚಾಂಪಿಯನ್‌ಶಿಪ್: ಕೊನೇರು ಹಂಪಿ ಅಭಿಯಾನ ಅಂತ್ಯ

Update: 2018-11-08 18:35 GMT

ಕ್ಯಾಂಟಿ ಮ್ಯಾನ್ಸಿಯಾಸ್, ನ.8: ಇಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಚೆಸ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಪೋಲಂಡ್‌ನ ಜೊಲಾಂಟ ಝವಸ್ಕ ಎದುರು ಸೋಲುವುದರೊಂದಿಗೆ ಗ್ರಾಂಡ್‌ಮಾಸ್ಟರ್ ಕೊನೇರು ಹಂಪಿ ಅವರ ವಿಶ್ವಕಪ್ ಅಭಿಯಾನ ಅಂತ್ಯಗೊಂಡಿದೆ.

ಪ್ರಥಮ ಸುತ್ತಿನಲ್ಲಿ ಡ್ರಾ ಸಾಧಿಸಿದ್ದ ಹಂಪಿ ದ್ವಿತೀಯ ಸುತ್ತಿನಲ್ಲಿ ಜಯದ ನಿರೀಕ್ಷೆಯಲ್ಲಿದ್ದರು. ಎರಡನೇ ಪಂದ್ಯದಲ್ಲಿ ಬಿಳಿ ಕಾಯಿಯೊಂದಿಗೆ ಆಡುವ ಅವಕಾಶ ದೊರೆತರೂ ಅದರ ಲಾಭ ಪಡೆಯಲು ಹಂಪಿ ವಿಫಲರಾದರು. ಕನಿಷ್ಠ ಡ್ರಾ ಸಾಧಿಸಿದರೂ ಟೈ ಬ್ರೇಕರ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ ಅದನ್ನೂ ಹಂಪಿ ಕೈಚೆಲ್ಲಿದರು. ಸುಮಾರು ಎರಡು ವರ್ಷದ ಅಂತರದ ಬಳಿಕ ಮತ್ತೆ ಚೆಸ್‌ರಂಗಕ್ಕೆ ಮರಳಿದ್ದರು. ಇದೀಗ ಮತ್ತೆ ವಿಶ್ವಚಾಂಪಿಯನ್ ಸ್ಪರ್ಧೆಯಲ್ಲಿ ಆಡುವ ಅವಕಾಶಕ್ಕಾಗಿ ಅವರು ಮತ್ತೆ ಎರಡು ವರ್ಷ ಕಾಯಬೇಕಾಗುತ್ತದೆ. ಇದೀಗ ಡಿ.ಹರಿಕಾ ಟೂರ್ನಿಯಲ್ಲಿ ಉಳಿದುಕೊಂಡಿರುವ ಭಾರತದ ಏಕೈಕ ಆಶಾಕಿರಣವಾಗಿದ್ದಾರೆ. ಹರಿಕಾ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಜಾರ್ಜಿಯಾದ ಬೆಲಾ ಕೊಟೆನಶ್ವಿಲಿ ಎದುರು ಡ್ರಾ ಸಾಧಿಸಿದ್ದು , ವಿಜೇತರನ್ನು ನಿರ್ಣಯಿಸಲು ಟೈಬ್ರೇಕರ್ ಪಂದ್ಯ ನಡೆಯಲಿದೆ. ಈ ಹಿಂದೆ ಎರಡು ಬಾರಿ ಟೂರ್ನಿಯಲ್ಲಿ ಹರಿಕಾ ಕಂಚಿನ ಪದಕ ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News