ದೀಪಾವಳಿ ಬಳಿಕ ವಾಯು ಗುಣಮಟ್ಟ ಮತ್ತಷ್ಟು ಕುಸಿತ

Update: 2018-11-09 03:44 GMT

ಹೊಸದಿಲ್ಲಿ, ನ.9: ಹಸಿರು ಪಟಾಕಿಗಳನ್ನು ಎರಡು ಗಂಟೆಗಳ ಸೀಮಿತ ಅವಧಿಯಲ್ಲಷ್ಟೇ ಸಿಡಿಸಿ ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಬಹುತೇಕ ಮಂದಿ ಧಿಕ್ಕರಿಸಿದ ಪರಿಣಾಮವಾಗಿ, ಉತ್ತರ ಭಾರತದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ತೀವ್ರ ಕುಸಿದಿದೆ.

ಉತ್ತರ ಪ್ರದೇಶದ ಗಾಝಿಯಾಬಾದ್, ದೆಹಲಿ ಮತ್ತು ಪಾಟ್ನಾದಲ್ಲಿ ಗಾಳಿ ಗುಣಮಟ್ಟ ತೀರಾ ಕುಸಿದಿದ್ದು, ಜನರಲ್ಲಿ ಉಸಿರಾಟದ ತೊಂದರೆ, ಕಫದಂಥ ಆರೋಗ್ಯ ಸಮಸ್ಯೆಗಳು ಉಲ್ಬಣಿಸಿವೆ. ದಟ್ಟವಾದ ಹೊಗೆಯುಕ್ತ ಮಂಜು ಆಗಸದಲ್ಲಿ ಕವಿದಿದೆ.

ರಾತ್ರಿ 8ರಿಂದ 10 ಗಂಟೆಯ ನಡುವೆ ಮಾತ್ರ ಪಟಾಕಿ ಸಿಡಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರೂ, ಬಹುತೇಕ ನಗರಗಳ ಜನ ಇದನ್ನು ಪಾಲಿಸಲಿಲ್ಲ. ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಪೊಲೀಸರು ಹಲವು ಮಂದಿ ವಿರುದ್ಧ ಪ್ರಕರಣ ದಾಖಲಿಸಿದರೂ ಇತರರ ಮೇಲೆ ಇದು ಪ್ರಭಾವ ಬೀರಲಿಲ್ಲ.

ದೆಹಲಿ, ಎನ್‌ಸಿಆರ್ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಕಳೆದ ವರ್ಷಕ್ಕಿಂತಲೂ ಕಳಪೆಯಾಗಿದ್ದು, ಪಿಎಂ 10 ಹಾಗೂ ಪಿಎಂ 2.3 ಮಾಲಿನ್ಯಕಾರಕ ಕಣಗಳ ಪ್ರಮಾಣ 2017ಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಪರಿಸರಸ್ನೇಹಿ ಪಟಾಕಿ ಸಿಡಿಸುವಂತೆ ಮತ್ತು ನಿರ್ದಿಷ್ಟ ಪ್ರದೇಶಗಳನ್ನಷ್ಟೇ ಪಟಾಕಿ ಸಿಡಿಸುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನೂ ದೇಶಾದ್ಯಂತ ಧಿಕ್ಕರಿಸಲಾಗಿದೆ.

ನವೆಂಬರ್ 10ರವರೆಗೂ ವಾಯು ಗುಣಮಟ್ಟದಲ್ಲಿ ಸುಧಾರಣೆಯಾಗುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಉಷ್ಣತೆ ಕುಸಿತ ಮತ್ತು ಗಾಳಿಯ ವೇಗ ಕುಸಿತಕ್ಕೂ ಇದು ಕಾರಣವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News