ಸೌದಿಯಲ್ಲಿ ದ್ವಿತೀಯ ಹಂತದ ಸೌದೀಕರಣಕ್ಕೆ ಸಿದ್ಧತೆ

Update: 2018-11-09 06:35 GMT

ಮಂಗಳೂರು, ನ.8: ಪ್ರಮುಖ ಕೆಲಸ ಕಾರ್ಯಗಳಲ್ಲಿ ಸೌದಿ ಪ್ರಜೆಗಳೇ ತೊಡಗಿಸಿಕೊಳ್ಳಬೇಕು ಎಂಬ ಸೌದಿ ಅರೇಬಿಯಾ ಸರಕಾರದ ಕಾನೂನು ಬಿಗಿಯಾಗಿರುವ ಮಧ್ಯೆಯೇ ದ್ವಿತೀಯ ಹಂತದ ಸೌದೀಕರಣಕ್ಕೆ ಭರದ ಸಿದ್ಧತೆ ನಡೆದಿದೆ. ಈ ಹಿಂದೆ ನ.9ರಿಂದ ದ್ವಿತೀಯ ಹಂತದ ಸೌದೀಕರಣ ಆರಂಭಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ಮೂಲವೊಂದರ ಪ್ರಕಾರ ಈವರೆಗೆ ಆ ಬಗ್ಗೆ ನಿರ್ದಿಷ್ಟ ಸೂಚನೆ ಹೊರಬಿದ್ದಿಲ್ಲ. ದ್ವಿತೀಯ ಹಂತದ ಪ್ರಕಾರ ಮುಂದಿನ ದಿನಗಳಲ್ಲಿ ಇಲೆಕ್ಟ್ರಿಕ್ ಹಾಗೂ ಇಲೆಕ್ಟ್ರಾನಿಕ್ಸ್, ವಾಚ್ ಅಂಗಡಿಗಳು, ಆಪ್ಟಿಕಲ್ಸ್ ಹಾಗೂ ಮೆಡಿಕಲ್ ಶಾಪ್‌ಗಳಲ್ಲಿ ಸೌದಿಯ ಪ್ರಜೆಗಳು ಕೆಲಸ ಮಾಡುವುದು ಕಡ್ಡಾಯವಾಗಲಿದೆ.

ಮೊದಲ ಹಂತದಲ್ಲಿ ಸ್ಥಳೀಯ 12 ವಲಯದ ಉದ್ಯೋಗಗಳನ್ನು ಸೌದಿ ಪ್ರಜೆಗಳಿಗೆ ಕಡ್ಡಾಯಗೊಳಿಸಲಾಗಿತ್ತು. ಇದರನ್ವಯ ಸೆಪ್ಟಂಬರ್ 11ರಿಂದ ವಾಹನಗಳ ಶೋರೂಂ, ಆಟೋಮೊಬೈಲ್, ಸಿದ್ಧ ಉಡುಪುಗಳ ಮತ್ತು ಪೀಠೋಪಕರಣ ಮಳಿಗೆಗಳು ಹಾಗೂ ಮನೆ ಬಳಕೆ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಭಾರತೀಯರು ಅದರಲ್ಲೂ ಕರಾವಳಿ ಕರ್ನಾಟಕದ ಸಾಕಷ್ಟು ಮಂದಿ ಉದ್ಯೋಗ ಕಳಕೊಂಡು ತವರು ಮರಳುವಂತಾಗಿತ್ತು.

2017ರಲ್ಲಿ ಸೌದಿ ಅರೇಬಿಯಾದ ‘ವಿಷನ್-2030’ ಕಾರ್ಯತಂತ್ರದ ಭಾಗವಾಗಿ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು (ಎಂಎಲ್ಎಸ್‌ಡಿ) ನಿತಾಕತ್ ವ್ಯವಸ್ಥೆಗೆ ತಿದ್ದುಪಡಿ ಮಾಡಿತ್ತು. ಅದರಂತೆ ಸೌದಿಯ ಪ್ರಜೆಗಳಿಗೆ ರಾಷ್ಟ್ರೀಯ ಕಡ್ಡಾಯ ಉದ್ಯೋಗ ನೀತಿಯನ್ನು ಜಾರಿಗೊಳಿಸಿತು. ಆ ಪ್ರಕಾರ ಎಲ್ಲಾ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.70 ಮೀಸಲು ಕಡ್ಡಾಯ ಮತ್ತು ಉಳಿದ ಶೇ.30ನ್ನು ವಿದೇಶಿಗರಿಗೆ ನೀಡುವ ಕ್ರಮಕ್ಕೆ ಮುಂದಾಯಿತು. ಇದಕ್ಕೆ ಪೂರ್ವಭಾವಿಯಾಗಿ 2016ರಲ್ಲಿ ವಿದೇಶಿಗರಿಗೆ ಕೆಲಸದ ವೀಸಾ (ಇಕಾಮಾ) ಅರ್ಜಿಗಳನ್ನು ಶೇ.60ರಷ್ಟು ನಿರಾಕರಿಸಿ ವಿದೇಶಿಗರಿಗೆ ಬಿಸಿ ಮುಟ್ಟಿಸಿತ್ತು. ಇದನ್ನು ತಿಳಿದ ಅವಿಭಜಿತ ದ.ಕ. ಜಿಲ್ಲೆ ಸೇರಿದಂತೆ ಕರಾವಳಿಯ ಸಾವಿರಾರು ಕುಟುಂಬಸ್ಥರು ಆತಂಕಿತರಾಗಿದ್ದರು.

‘ನಿತಾಕತ್’ ನಿಯಮ ಬಿಗಿಗೊಳ್ಳುತ್ತಿದ್ದಂತೆಯೇ ದ.ಕ. ಜಿಲ್ಲೆಯ ಹಲವು ಗಲ್ಫ್ ಉದ್ಯೋಗಿಗಳು ಅಲ್ಲಿ ನೆಲೆ ನಿಲ್ಲಲಾಗದೆ ತವರೂರಿಗೆ ಮರಳಿದ್ದರು. ಇದರಿಂದ ಉದ್ಯೋಗಿಗಳು ಮಾತ್ರವಲ್ಲ ಅವರ ಕುಟುಂಬವೂ ಕಂಗಾಲಾಗಿತ್ತು. ಸೌದಿ ಅರೇಬಿಯಾ ಸರಕಾರದ ಹೊಸ ಕಾರ್ಮಿಕ ನೀತಿಯ ಪ್ರಕಾರ ಸ್ವತಂತ್ರ (ಫ್ರೀ) ವೀಸಾ ಹೊಂದಿದವರು ತಮಗಿಷ್ಟ ಬಂದಲ್ಲಿ ಕೆಲಸ ಮಾಡುವ ಅವಕಾಶವಿಲ್ಲ. ಅಂದರೆ ತಮ್ಮ ಆಯೋಜಕನ ಅಧೀನದಲ್ಲಿ ಮಾತ್ರ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಹಾಗೆಯೇ ಪ್ರತೀ ವರ್ಷದ ವೀಸಾ ನವೀಕರಣ ಶುಲ್ಕವನ್ನು ಹಲವು ಪಟ್ಟು ಏರಿಸಿತ್ತು. ಈ ನಿಯಮಗಳನ್ನು ಉಲ್ಲಂಘಿಸಿದವರನ್ನು ಕಡ್ಡಾಯವಾಗಿ ತವರೂರಿಗೆ ಕಳುಹಿಸಿಕೊಟ್ಟಿವೆ.

ಈ ಹಿಂದೆ ‘ಫ್ರೀ ವೀಸಾ’ದ ಮೇಲೆ ಹೋದವರು ಕನಿಷ್ಠ ಮೂರು ತಿಂಗಳ ಕಾಲ ಉದ್ಯೋಗವನ್ನು ಹುಡುಕಾಡಲು ಅವಕಾಶವಿತ್ತು. ಅದುವರೆಗೆ ಗೆಳೆಯರ, ಕುಟುಂಬಸ್ಥರ ರೂಂಗಳಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ನಿತಾಕತ್ ಈ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತ್ತು. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆಯಲ್ಲದೆ, ವಿದೇಶೀಯರಿಗೆ ಪ್ರತ್ಯೇಕ ತೆರಿಗೆ ವಿಧಿಸತೊಡಗಿದ ಕಾರಣ ಕುಟುಂಬ ಸಮೇತ ನೆಲೆಸಿದ್ದ ಮಧ್ಯಮ, ಶ್ರೀಮಂತ ವರ್ಗದವರೂ ತವರಿಗೆ ಮರಳಿದ್ದರು. ಇದೀಗ ದ್ವಿತೀಯ ಹಂತದ ಸೌದೀಕರಣದ ಸಿದ್ಧತೆ ಹಲವರ ನಿದ್ದೆಗೆಡಿಸಿವೆ.

ಈಗಲೂ ಪೊಲೀಸ್ ಅಧಿಕಾರಿಗಳು ಅನಿರೀಕ್ಷಿತವಾಗಿ ದಾಳಿ ಮಾಡಿ ತಪಾಸಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಊರಿಗೆ ಮರಳಿದ ಕೆಲವರು ವಾಪಸ್ ತೆರಳಲಿಲ್ಲ. ಅಂಗಡಿಯನ್ನೂ ತೆರೆದಿಲ್ಲ, ಅಂಗಡಿ -ಮಳಿಗೆಗಳಿಗೆ ಹೊಸ ಸಾಮಗ್ರಿಗಳನ್ನೂ ಹಾಕಿಲ್ಲ ಎನ್ನಲಾಗಿದೆ. ಅಲ್ಲದೆ ಸೌದೀಕರಣ ನಿಯಮ ಸಡಿಲಿಸಬಹುದು ಅಥವಾ ಹಿಂಪಡೆಯಬಹುದು ಎಂಬ ನಿರೀಕ್ಷೆಯಲ್ಲಿ ಹಲವರಿದ್ದರೂ ಯಾವುದೇ ಸೂಚನೆ ಹೊರಬೀಳದ ಕಾರಣ ನಿರಾಶರಾಗಿದ್ದಾರೆ. ಒಟ್ಟಿನಲ್ಲಿ ಸೌದೀಕರಣವು ತೂಗುಗತ್ತಿಯಂತೆ ಶ್ರಮಜೀವಿ ಯುವಕರ ಮೇಲೆ ನೇತಾಡುತ್ತಿವೆ.

ತೃತೀಯ ಹಂತ

2019ರ ಜನವರಿ 7ರಿಂದ ತೃತೀಯ ಹಂತದಲ್ಲಿ ಕಟ್ಟಡ ಕಾಮಗಾರಿ ವಸ್ತುಗಳ ಮಾರಾಟ ಮಳಿಗೆಗಳು, ವಾಹನದ ಬಿಡಿ ಭಾಗಗಳ ಮಾರಾಟ ಮಳಿಗೆ, ಕಾರ್ಪೆಟ್ ಮಾರಾಟ ಶಾಪ್‌ಗಳು, ಚಾಕಲೇಟ್, ಸಿಹಿತಿಂಡಿ ಮಾರಾಟ ಮಾಡುವ ಅಂಗಡಿ ಇತ್ಯಾದಿಗಳಲ್ಲಿ ಸೌದಿಯ ಪ್ರಜೆಗಳು ಕಾಣಿಸಿಕೊಳ್ಳಲಿದ್ದಾರೆ.

ಬಜೆಟ್‌ಗೆ ಸೀಮಿತಗೊಂಡ ಘೋಷಣೆ

ಉದ್ಯೋಗ ಕಳೆದುಕೊಂಡು ವಿದೇಶದಿಂದ ಮರಳುವವರಿಗೆ, ಊರಲ್ಲಿ ಸ್ವ ಉದ್ಯೋಗ ಮಾಡುವವರಿಗೆ ಆರ್ಥಿಕ ನೆರವು ನೀಡುವ ಬಗ್ಗೆ 2017ರ ಮಾರ್ಚ್ 15ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಶೇ.3ರ ಬಡ್ಡಿದರಲ್ಲಿ ಸಾಲ ಸೌಲಭ್ಯ ನೀಡುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದರು. ಕೇರಳ ಮಾದರಿಯ ಈ ಮಹತ್ವದ ಯೋಜನೆಯ ಬಗ್ಗೆ ಅನಿವಾಸಿ ಭಾರತೀಯ ಕನ್ನಡಿಗರು ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಆದರೆ ಅದು ಕೂಡಾ ಹುಸಿಗೊಂಡಿವೆ.

ಬೇಡಿಕೆಗೆ ಸಿಗದ ಸ್ಪಂದನೆ

ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯ ಇಂಡಿಯನ್ ಸೋಶಿಯಲ್ ಫೋರಂ ಸೌದಿ ಸಂಕಟದ ಬಗ್ಗೆ ವಿಸ್ತೃತ ಅಧ್ಯಯನ ವರದಿ ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಮಹತ್ವದ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದರೂ ಕೂಡಾ ಸರಕಾರದಿಂದ ಪೂರಕ ಸ್ಪಂದನೆ ಇನ್ನೂ ಸಿಕ್ಕಿಲ್ಲ.

ಸ್ಥಾಪನೆಯಾಗದ ನೋಂದಣಿ ಕೇಂದ್ರ

ಸೌದಿ ಅರೇಬಿಯಾದಿಂದ ಕೆಲಸ ಕಳೆದುಕೊಂಡು ತವರಿಗೆ ಮರಳುವವರ ಸಂಖ್ಯೆ, ಅವರ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಕೇಂದ್ರ ಸ್ಥಾಪಿಸುವುದಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದರು. ಅದು ಕೂಡಾ ಇದುವರೆಗೆ ಕಾರ್ಯಗತಗೊಂಡಿಲ್ಲ.

ವರದಿಗೆ ಸಿಗದ ಮನ್ನಣೆ

ಮಂಗಳೂರು ದಕ್ಷಿಣದ ಶಾಸಕರಾಗಿದ್ದ ಜೆ.ಆರ್.ಲೋಬೋ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿದ್ದಾಗ ರಾಜ್ಯದ ಅನಿವಾಸಿ ಭಾರತೀಯ ಸಮಿತಿಯನ್ನು ಕೇರಳದ ಸಮಿತಿಯ ಮಾದರಿಯಲ್ಲಿ ಬಲವರ್ಧನೆಗೊಳ್ಳಿಸಲು 2017ರ ಫೆಬ್ರವರಿಯಲ್ಲಿ ವರದಿಯೊಂದನ್ನು ಸಲ್ಲಿಸಿದ್ದರು. ಆದರೆ ಈ ವರದಿಗೆ ಮನ್ನಣೆ ಸಿಗಲೇ ಇಲ್ಲ.

Writer - ವರದಿ: ಹಂಝ ಮಲಾರ್

contributor

Editor - ವರದಿ: ಹಂಝ ಮಲಾರ್

contributor

Similar News