10ರಿಂದ 15 ಉದ್ಯಮಿಗಳ 3.50 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ ಮೋದಿ: ರಾಹುಲ್ ಆರೋಪ

Update: 2018-11-09 17:47 GMT

ಪಖಂಜೂರ್, ನ. 9: ಪ್ರಧಾನಿ ನರೇಂದ್ರ ಮೋದಿ ಹಾಗೂ ಚತ್ತೀಸ್‌ಗಢದ ಮುಖ್ಯಮಂತ್ರಿ ರಮಣ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇವರಿಬ್ಬರು ಅವರ ಉದ್ಯಮಿ ಗೆಳೆಯರ ಅನುಮತಿ ಇಲ್ಲದೆ ಯಾವುದೇ ಕೆಲಸ ಮಾಡಲಾರರು ಎಂದಿದ್ದಾರೆ.

ಚತ್ತೀಸ್‌ಗಢದಲ್ಲಿ ನವೆಂಬರ್ 12ರಂದು ನಡೆಯಲಿರುವ ಪ್ರಥಮ ಹಂತದ ಚುನಾವಣೆಯ ಮುನ್ನ ರಾಹುಲ್ ಗಾಂಧಿ, ಬಸ್ತಾರ್ ನೈಸರ್ಗಿಕ ಸಂಪನ್ಮೂಲದಿಂದ ಸಮೃದ್ಧವಾಗಿದೆ. ಆದರೆ, ಇದರಿಂದ ಸ್ಥಳೀಯ ಜನರಿಗೆ ಯಾವುದೇ ಲಾಭ ಸಿಗುತ್ತಿಲ್ಲ. ಇದರ ಲಾಭವೆಲ್ಲ ಮೋದಿ ಜಿ ಹಾಗೂ ಚತ್ತೀಸ್‌ಗಢ ಮುಖ್ಯಮಂತ್ರಿ ಅವರ ಕೆಲವು ಉದ್ಯಮಿ ಗೆಳೆಯರಿಗೆ ತಲುಪುತ್ತಿದೆ ಎಂದರು. ದಿಲ್ಲಿಯಲ್ಲಿ ಮೋದಿ ಜಿ ಅವರಿಗೆ 10ರಿಂದ 15 ಮಂದಿ ಉದ್ಯಮಿ ಗೆಳೆಯರಿದ್ದಾರೆ; ಅದೇ ರೀತಿ ಚತ್ತೀಸ್‌ಗಢ ಮುಖ್ಯಮಂತ್ರಿಗೆ 10ರಿಂದ 15 ಮಂದಿ ಉದ್ಯಮಿ ಗೆಳೆಯರಿದ್ದಾರೆ. ಈ 10ರಿಂದ 15 ಉದ್ಯಮಿ ಗೆಳೆಯರ ಅನುಮತಿ ಇಲ್ಲದೆ ಮೋದಿ ಜೀ ಹಾಗೂ ಸಿಂಗ್ ಅವರು ಯಾವುದೇ ಕಾರ್ಯ ಮಾಡಲಾರರು ಎಂದು ಅವರು ಆರೋಪಿಸಿದ್ದಾರೆ.

ಕಳೆದ ನಾಲ್ಕೂವರೆ ವರ್ಷದಲ್ಲಿ ಮೋದಿಜಿ ಅವರು 10ರಿಂದ 15 ಮಂದಿ ಉದ್ಯಮಿಗಳ 3.50 ಲಕ್ಷ ಕೋ. ರೂ. ಸಾಲ ಮನ್ನಾ ಮಾಡಿದ್ದಾರೆ ಎಂದು ಅವರು ಹೇಳಿದರು. ರಫೇಲ್ ಒಪ್ಪಂದ ಕುರಿತು ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಮೋದಿಜಿ ಅವರು ರಫೇಲ್ ಯುದ್ಧ ವಿಮಾನಗಳ ಗುತ್ತಿಗೆಯನ್ನು ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್‌ನಿಂದ ಕಸಿದುಕೊಂಡು ಅನಿಲ್ ಅಂಬಾನಿ ಅವರಿಗೆ ನೀಡಿದರು ಎಂದರು. ಯುಪಿಎ ಸರಕಾರದ ಅವಧಿಯಲ್ಲಿ 126 ರಪೇಲ್ ವಿಮಾನಗಳನ್ನು ಖರೀದಿಸಲಾಗಿತ್ತು. ಪ್ರತಿ ವಿಮಾನಕ್ಕೆ 526 ಕೋ. ರೂ. ನೀಡಲಾಗಿತ್ತು. ಆದರೆ, ಮೋದಿ ಸರಕಾರ ಪ್ರತಿ ವಿಮಾನಕ್ಕೆ 1,600 ಕೋ. ರೂ. ನೀಡಿದೆ. ಅಲ್ಲದೆ ಕೆಲವೇ ದಿನಗಳ ಹಿಂದೆ ಆರಂಭಿಸಿದ ಅಂಬಾನಿ ಸಮೂಹಕ್ಕೆ ಗುತ್ತಿಗೆ ನೀಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News