ಉನಾ: ಜಾತಿ ನಿಂದನೆ ಆಕ್ಷೇಪಿಸಿದ ಮೂವರು ದಲಿತರ ಮೇಲೆ ಹಲ್ಲೆ
ಉನಾ,ನ.9: ಜಾತಿ ನಿಂದನೆ ಆಕ್ಷೇಪಿಸಿದ ಮೂವರು ದಲಿತರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಗುಜರಾತ್‌ನ ಗಿರ್ ಸೋಮನಾಥ ಜಿಲ್ಲೆಯ ಉನ ಪಟ್ಟಣದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳು ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಮನು ಸೋಲಂಕಿ ಮತ್ತವರ ಸಂಬಂಧಿ ಭರತ್ ಸೋಲಂಕಿ ನಂದ್ರಕ್‌ಗೆ ಮರಳುತ್ತಿರುವ ವೇಳೆ ಈ ಘಟನೆ ನಡೆದಿದೆ.
ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಕುಡಿತದ ನಶೆಯಲ್ಲಿದ್ದ ನಾಲ್ವರು ಜಾತಿ ನಿಂದನೆ ಮಾಡಲು ಆರಂಭಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ತಮ್ಮ ಮೇಲೆ ಹಲ್ಲೆ ನಡೆಸಿದರು. ಆರೋಪಿಗಳಲ್ಲಿ ಒಬ್ಬಾತ ಮನು ಸೋಲಂಕಿಗೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಆರೋಪಿಗಳು ಮನು ಸೋಲಂಕಿಯ ಇನ್ನೊರ್ವ ಸಂಬಂಧಿಕನ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗಾಯಾಳುಗಳನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಆರೋಪಿಗಳು ಅದನ್ನು ತಡೆಯಲು ಯತ್ನಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಗಾಯಾಳುಗಳನ್ನು ಜೂನಗಡ್ ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.