ಮಹಿಳಾ ಹಕ್ಕು ಕಾರ್ಯಕರ್ತೆಯ ಕೊಲೆ ಯತ್ನ: ಇಬ್ಬರ ಬಂಧನ

Update: 2018-11-09 18:01 GMT

 ಶಿಲಾಂಗ್, ನ.9: ಮಹಿಳಾ ಹಕ್ಕು ಕಾರ್ಯಕರ್ತೆ ಹಾಗೂ ಇತರ ಇಬ್ಬರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಸಿವಿಲ್ ಸೊಸೈಟಿ ವುಮೆನ್ಸ್ ಆರ್ಗನೈಸೇಷನ್‌ನ ಅಧ್ಯಕ್ಷೆ ಆಗ್ನೆಸ್ ಖರ್ಶ್‌ಲಿಂಗ್ ಹಾಗೂ ಅಮಿತ್ ಸಂಗ್ಮ ಮತ್ತು ಇ.ಕುರ್ಬಾಹ್ ಎಂಬವರ ಮೇಲೆ ಗುರುವಾರ 40 ಮಂದಿಯ ತಂಡ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿತ್ತು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ಕಲ್ಲಿದ್ದಲಿನ ಅಕ್ರಮ ಸಾಗಣೆ ಬಗ್ಗೆ ಆಗ್ನೆಸ್ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

 ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಹಲ್ಲೆಯ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಇಬ್ಬರು ಆರೋಪಿಗಳಾದ ಎಲ್ಫಾನ್ ಧಾರ್ ಮತ್ತು ಮೆಕಿಲ್ಸನ್ ಸಿಯಾಂಗ್‌ಶೈ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ಘಟನೆಯನ್ನು ಹಲವಾರು ರಾಜಕೀಯ ಹಾಗೂ ಸರಕಾರೇತರ ಸಂಘಟನೆಗಳು ಖಂಡಿಸಿವೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೇಘಾಲಯದ ವಿರೋಧ ಪಕ್ಷಗಳ ನಾಯಕ ಮುಕುಲ್ ಸಂಗ್ಮಾ ಆಗ್ರಹಿಸಿದ್ದಾರೆ. ಮೇಘಾಲಯದ ಜೈಂತಿಯಾ ಹಿಲ್ಸ್ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಗಂಭೀರತೆಯನ್ನು ಈ ಹಲ್ಲೆ ಘಟನೆ ಎತ್ತಿತೋರಿಸಿದೆ ಎಂದು ಮೇಘಾಲಯದ ಮಾಜಿ ಗೃಹ ಸಚಿವ ರಾಬರ್ಟ್ ಜಿ.ಲಿಂಗ್ಡೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News