ಬಸವ ತತ್ವ ಅಂದು ಇಂದು

Update: 2018-11-09 18:41 GMT

ಭಾಗ-1

ಬಸವಣ್ಣನವರ ಶರಣಸಂಕುಲದಲ್ಲಿ ಎಲ್ಲ ಕಾಯಕಜೀವಿಗಳು ಎಲ್ಲ ವಿಧದಲ್ಲಿ ಸಮಾನತೆಯನ್ನು ಅನುಭವಿಸಿದರು. ಎಲ್ಲ ಕಾಯಕಜೀವಿಗಳು ಒಂದಾಗಿ ಬದುಕುವಂಥ ಇಂಥ ಒಂದು ಹೊಸ ಸಮಾಜದ ನಿರ್ಮಾಣವನ್ನು 850 ವರ್ಷಗಳ ಹಿಂದೆ ಬಸವಣ್ಣನವರು ಮಾಡಿ ತೋರಿಸಿದರು. ಇದನ್ನು ನಾವು ಇಂದು ಅರ್ಥ ಮಾಡಿಕೊಳ್ಳಬೇಕಿದೆ.

ಬಸವಣ್ಣನವರು ಇಡೀ ದೇಶದಲ್ಲಿ ಮೊದಲ ಬಾರಿಗೆ ಒಂದು ಧರ್ಮದ ಸ್ಥಾಪನೆ ಮಾಡಿದರು. ಅದು ಏಕ ದೇವೋಪಾಸನೆಯ ಧರ್ಮ. ಅಲ್ಲಿಯವರೆಗೆ ಭಾರತದ ಇತಿಹಾಸದಲ್ಲಿ ಯಾವೊಂದು ಧರ್ಮ ಕೂಡ ಏಕ ದೇವೋಪಾಸನೆ ಕುರಿತು ಮಾತನಾಡಲಿಲ್ಲ. ಹಿಂದೂ ಧರ್ಮದಲ್ಲಿ ಅನೇಕ ದೇವಾಧಿದೇವತೆಗಳಿದ್ದಾರೆ. ನಂತರ ಬಂದಂಥ ಜೈನಧರ್ಮದಲ್ಲಿ ತೀರ್ಥಂಕರರೇ ದೇವರಾಗುತ್ತಾರೆ. ತದನಂತರ ಬಂದ ಬೌದ್ಧ ಧರ್ಮ ಅಜ್ಞೇಯವಾದಿ ಧರ್ಮವಾಗಿದೆ. ‘ಅಗ್ನಾಸ್ಟಿಕ್ ರಿಲಿಜನ್’ ಎಂದು ಅದಕ್ಕೆ ಕರೆಯುತ್ತಾರೆ. ಅಂದರೆ ‘ದೇವರ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಅದರ ಅರ್ಥ. ದೇವರ ವಿಚಾರ ನಾನು ಮಾತನಾಡುವುದಿಲ್ಲ. ಈ ಭೂಮಿಯ ಬಗ್ಗೆ, ಈ ಜನರ ಬಗ್ಗೆ ಮಾತನಾಡುತ್ತೇನೆ ಎಂದು ಬುದ್ಧ ಹೇಳುತ್ತಾನೆ. ಆದರೆ ‘ಒಬ್ಬನೇ ದೇವರು, ಒಂದೇ ವಿಶ್ವ, ಒಂದೇ ಮಾನವಕುಲ’ ಎಂದು ಘೋಷಣೆ ಮಾಡಿದಂಥ ಮೊಟ್ಟಮೊದಲ ಧರ್ಮ ಈ ದೇಶದಲ್ಲಿ ಯಾವುದಾದರೂ ಇದ್ದರೆ ಅದು ಬಸವಧರ್ಮ. ನಾಲ್ಕು ಶತಮಾನ ಕಳೆದ ನಂತರ ಗುರು ನಾನಕರಿಂದ ಇನ್ನೊಂದು ಏಕದೇವೋಪಾಸನಾ ಧರ್ಮದ ಸ್ಥಾಪನೆಯಾಯಿತು. ಅದು ಸಿಖ್ ಧರ್ಮ.
ಹೀಗೆ ಕನ್ನಡದ ನೆಲದಲ್ಲಿ, ಭಾರತದ ಇತಿಹಾಸದಲ್ಲಿ ಇಂಥ ಒಂದು ಧರ್ಮವನ್ನು ಬಸವಣ್ಣನವರು ಸ್ಥಾಪಿಸಲು ಹೇಗೆ ಸಾಧ್ಯವಾಯಿತು ಎಂಬುದರ ಕುರಿತು ನಾವು ಇಂದು ಚಿಂತನೆ ಮಾಡಬೇಕಿದೆ.
ಜಗತ್ತಿನಲ್ಲಿ ಯಾವುದೇ ಧರ್ಮ ಇರಲಿ, ಅದು ಎಂದೇ ಹುಟ್ಟಿರಲಿ. ನಾವು ಇಡೀ ಜಗತ್ತಿನ ಧರ್ಮಗಳನ್ನು ಎರಡು ವಿಭಾಗವಾಗಿ ವಿಂಗಡಿಸಲು ಸಾಧ್ಯವಿದೆ. ಒಂದು ‘ಇವನಾರವ, ಇವನಾರವ’ ಎಂದು ಕೇಳುವ ಧರ್ಮಗಳ ವಿಭಾಗ. ಇನ್ನೊಂದು ‘ಇವ ನಮ್ಮವ, ಇವ ನಮ್ಮವ’ ಎಂದು ಹೇಳುವ ಧರ್ಮಗಳ ವಿಭಾಗ. ‘ಇವ ನಮ್ಮವ, ಇವ ನಮ್ಮವ’ ಎಂದು ಹೇಳುವ ಧರ್ಮಗಳು ಜಗತ್ತಿನ ಎಲ್ಲ ದೇಶಗಳ ಎಲ್ಲ ಜನಾಂಗಗಳನ್ನು, ಎಲ್ಲ ವರ್ಗಗಳ ಜನರನ್ನು ಸ್ವೀಕರಿಸುವ ಮತ್ತು ಅಪ್ಪಿಕೊಳ್ಳುವ ಧರ್ಮಗಳಾಗಿವೆ. ಇಂಥ ‘ಇವ ನಮ್ಮವ’ ಎಂದು ಹೇಳುವ ಧರ್ಮದ ಸ್ಥಾಪನೆ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.
ಇಡೀ ಜಗತ್ತನ್ನು ಒಂದು ಮಾಡಲಿಕ್ಕೆ ಅವರೇಕೆ ಪ್ರಯತ್ನ ಪಟ್ಟರು? ಅವತ್ತು ಬಸವತತ್ವ ಏಕೆ ಬಂತು? ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ‘ದಯವೇ ಧರ್ಮದ ಮೂಲವಯ್ಯೆ’ ಎಂದು ಹೇಳಿದರು. ಬಾಲ್ಯದಿಂದಲೂ ನಾವು ಈ ವಚನವನ್ನು ಓದುತ್ತಿದ್ದೇವೆ. ಇದರ ಅರ್ಥವೇನು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಇದೊಂದು ಏಕದೇವೋಪಾಸನೆಯ ಧರ್ಮ. ಆದರೆ ಧರ್ಮಮೂಲದ ವಿಚಾರ ಬಂದಾಗ ಬಸವಣ್ಣನವರು ಕೂಡಲಸಂಗಮದೇವರೇ ಧರ್ಮದ ಮೂಲ ಎಂದು ಹೇಳಲಿಲ್ಲ. ‘ದಯವೇ ಧರ್ಮದ ಮೂಲ’ ಎಂದು ಹೇಳಿದರು. ಎಲ್ಲಿ ದಯೆ ಇಲ್ಲವೋ ಅಲ್ಲಿ ಧರ್ಮ ಇಲ್ಲ. ಎಲ್ಲಿ ದಯೆ ಇಲ್ಲವೋ ಅಲ್ಲಿ ದೇವರಿಲ್ಲ. ದೇವರೇನಾದರೂ ಇದ್ದರೆ ನಮ್ಮಿಳಗಿನ ದಯೆಯ ರೂಪದಲ್ಲಿ. ಈ ರೀತಿಯಾಗಿ ಜೀವಕಾರುಣ್ಯದ ರೂಪದಲ್ಲಿ ದೇವರಿದ್ದಾನೆ ಎಂದು ಹೇಳಿದವರು ಮಹಾಪುರುಷ ಬಸವಣ್ಣನವರು.
ಮೊದಲಿನಿಂದಲೂ ನಮ್ಮ ದೇಶವನ್ನು ಮನುಸ್ಮತಿ ಆಳುತ್ತಲೇ ಬಂದಿದೆ. ದುಡಿಯುವ ಜನರನ್ನು ಮಾನಸಿಕ ಗುಲಾಮಗಿರಿಗೆ ಒಳಪಡಿಸುತ್ತಲೇ ಬಂದಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ವರ್ಣಗಳಿಗೆ ಸಂಬಂಧಿಸಿದ ಮೇಲ್ಜಾತಿಯವರಿಗೆ ಐಹಿಕ ಸೌಲಭ್ಯಗಳನ್ನು ಕಲ್ಪಿಸುತ್ತಲೇ ಬಂದಿದೆ. ಇಂದಿಗೂ ಪರೋಕ್ಷವಾಗಿ ನಮ್ಮ ಸಮಾಜವನ್ನು ಆಳುತ್ತಲೇ ಇದೆ. ‘ಬ್ರಾಹ್ಮಣೋ ಧರ್ಮ ಮೂಲಃ’ ಎಂದು ಮನುಸ್ಮತಿ ಹೇಳುತ್ತದೆ. ಮನುಸ್ಮತಿಯ ಪ್ರಕಾರ ಬ್ರಾಹ್ಮಣನೇ ಧರ್ಮದ ಮೂಲ. ಅದು ಕೂಡ ‘ದೇವರು ಧರ್ಮದ ಮೂಲ’ ಎಂದು ಹೇಳಲಿಲ್ಲ. ಬ್ರಾಹ್ಮಣ ಧರ್ಮಮೂಲ ಎಂಬ ಸುಳ್ಳನ್ನು ತಿರಸ್ಕರಿಸಿದ ಬಸವಣ್ಣನವರು ‘ದಯವೇ ಧರ್ಮದ ಮೂಲ’ ಎಂದು ಪ್ರತಿಪಾದಿಸಿದರು. ಹೀಗೆ ಹೇಳಲು ಕಾರಣವೇನು ಎನ್ನುವುದರ ಕುರಿತು ಚಿಂತನೆ ಮಾಡುವುದು ಅವಶ್ಯವಾಗಿದೆ.
ಮನುಸ್ಮತಿ ‘ಇವನಾರವ, ಇವನಾರವ’ ಎಂಬ ಭೇದನೀತಿಯನ್ನು ಜನಮನದಲ್ಲಿ ತುಂಬುವ ಗ್ರಂಥವಾಗಿದೆ. ಇವನು ಬ್ರಾಹ್ಮಣ, ಇವನು ಕ್ಷತ್ರಿಯ, ಇವನು ವೈಶ್ಯ, ಇವನು ಶೂದ್ರ, ಇವನು ಹೊಲೆಯ, ಇವನು ಕುರುಬ, ಇವನು ಚಮ್ಮಾರ, ಇವನು ಡೋಹರ ಈ ರೀತಿಯಾಗಿ ಇಡೀ ಮಾನವಕುಲವನ್ನು ಛಿದ್ರ ವಿಚ್ಛಿದ್ರ ಮಾಡಿದಂಥ ಮನುಸ್ಮತಿ ಸಂಸ್ಕೃತಿಯನ್ನು ಎದುರಿಸುವ ಧರ್ಮವೆಂದರೆ ಬಸವಣ್ಣನವರ ಧರ್ಮ.
ಇಡೀ ಮನುಸ್ಮತಿಯ ಉದ್ದೇಶ ಭೇದ ಪ್ರತಿಪಾದನೆಯಾಗಿದೆ. ಉದಾಹರಣೆಗಾಗಿ ಒಂದು ಸೂತ್ರವನ್ನು ತೆಗೆದುಕೊಳ್ಳಬಹುದು. 4ನೇ ಅಧ್ಯಾಯದ 80ನೇ ಶ್ಲೋಕ ಹೀಗಿದೆ: ‘ಶೂದ್ರನಿಗೆ ಬುದ್ಧಿ ಹೇಳಬಾರದು, ಓದು ಕಲಿಸಬಾರದು, ಯಜ್ಞದ ಹವಿಸ್ಸಿನ ಶೇಷವನ್ನು ಹಾಗೂ ಎಂಜಲನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆಯನ್ನು ಹೇಳಿಕೊಡಬಾರದು.’ (ನ ಶೂದ್ರಾಯ ಮತಿಂ ದದ್ಯಾನ್ನೋಚ್ಛಿಷ್ಟಂ ನ ಹವಿಷ್ಕೃತಂ ನ ಚಾಸ್ಯೋಪದಿಶೇದ್ಧರ್ಮಂ ನಚಾಸ್ಯ ವ್ರತಮಾದಿಶೇತ್‌॥
ಬಸವಣ್ಣನವರು ಬ್ರಾಹ್ಮಣ ಕುಲದಲ್ಲಿ ಹುಟ್ಟಿ, ಚಿಕ್ಕವಯಸ್ಸಿನಲ್ಲೇ ಸಕಲವೇದಶಾಸ್ತ್ರಪುರಾಣಾಗಮ ಪಾರಂಗತರಾಗಿದ್ದರು. ಅವರ ತಂದೆ ಮಾದರಸ ಅಗ್ರಹಾರಗಳ ಅಗ್ರಹಾರವಾದ ಬಾಗೇವಾಡಿ ಪುರವರಾಧೀಶರಾಗಿದ್ದರು. ಅಂಥ ಬಸವಣ್ಣನವರು ಬಿಜ್ಜಳನ ಕಲ್ಯಾಣದ ಪ್ರಧಾನಿಯಾಗಿ ಉತ್ಸಾಹದ ಚಿಲುಮೆಯಾಗಿದ್ದರು. ಅಲ್ಲಮಪ್ರಭುಗಳು ‘ಯುಗದ ಉತ್ಸಾಹವ ನೋಡಿರೆ’ ಎಂದು ಬಸವಣ್ಣನವರ ಕುರಿತು ಹೇಳುತ್ತಾರೆ.
ಬಸವಣ್ಣನವರು ಎಲ್ಲವನ್ನು ಸಹಿಸಿಕೊಳ್ಳುತ್ತ ದುಡಿಯುವ ಜನರ ಒಂದು ಸಮಾಜವನ್ನೇ ನಿರ್ಮಾಣ ಮಾಡಿದರು. ಇಡೀ ಜಗತ್ತಿನಲ್ಲಿ ಮೊತ್ತಮೊದಲ ದುಡಿಯುವ ವರ್ಗದ ಧರ್ಮ ಯಾವುದಾದರೂ ಇದ್ದರೆ ಅದು ಬಸವಧರ್ಮ. ಅವರೇಕೆ ಇಷ್ಟೊಂದು ಸಮಸ್ಯೆಗಳನ್ನು ಎದುರಿಸಿದರು? ಅವರಿಗೆ ಯಾವ ಕೊರತೆ ಇತ್ತು? ಅವರು ಸಾಮಾಜಿಕ ನ್ಯಾಯದ ಪರವಾಗಿ ಇದ್ದರು. ಮೇಲ್ವರ್ಗ, ಮೇಲ್ಕುಲ, ಅಧಿಕಾರ, ಸಾಂಪ್ರದಾಯಿಕ ಜ್ಞಾನ ಹೀಗೆ ಎಲ್ಲವನ್ನು ತೊರೆದು ಕೊನೆಗೆ ಪ್ರಧಾನಮಂತ್ರಿ ಪದವಿಗೆ ಕೂಡ ರಾಜೀನಾಮೆ ಕೊಟ್ಟು ದುಡಿಯುವ ಜನರ ಪರವಾಗಿ ನಿಂತರು.
ಇಂಥ ಉನ್ನತ ಪರಂಪರೆ ಯುಳ್ಳ ಲಿಂಗಾಯತರು ತಮ್ಮ ಬಗ್ಗೆ ತಿಳಿದುಕೊಳ್ಳಬೇಕು. ತಮ್ಮ ಪೂರ್ವಜರು ಮಹಾವೀರ ರಾಗಿದ್ದರು. ಬಸವಣ್ಣ ಸಮೇತ ಸಂಬೋಳಿ ನಾಗಿದೇವರು, ಮಾದಾರ ಚೆನ್ನಯ್ಯನವರು, ಸಮಗಾರ ಹರಳಯ್ಯನವರು, ಡೋಹರ ಕಕ್ಕಯ್ಯನವರು, ಮಡಿವಾಳ ಮಾಚಿದೇವರು, ಅಂಬಿಗರ ಚೌಡಯ್ಯನವರು, ಹಡಪದ ಅಪ್ಪಣ್ಣನವರು, ಮಧುವರಸರು, ಆಯ್ದಕ್ಕಿ ಮಾರಯ್ಯ, ಲಕ್ಕಮ್ಮ, ಸತ್ಯಕ್ಕ, ಕಾಳವ್ವೆ ಮುಂತಾದ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರು ಅಸಮಾನತೆಯನ್ನು ಸಾರುವ ಧರ್ಮದಲ್ಲಿನ ಕ್ರೌರ್ಯದ ವಿರುದ್ಧ, ಅಸ್ಪಶ್ಯತೆಯ ವಿರುದ್ಧ, ಜಾತೀಯತೆಯ ವಿರುದ್ಧ, ದುಡಿಯುವ ಜನರ ಮತ್ತು ಹೆಣ್ಣುಮಕ್ಕಳ ಶೋಷಣೆಯ ವಿರುದ್ಧ, ದಲಿತರ ಮೇಲಾಗುತ್ತಿದ್ದ ದಬ್ಬಾಳಿಕೆಯ ವಿರುದ್ಧ ಹಾಗೂ ಎಲ್ಲ ತೆರನಾದ ಅತ್ಯಾಚಾರದ ವಿರುದ್ಧ ಹೋರಾಡಿದರು.
ನಮ್ಮ ಕಸಗುಡಿಸುವ ದಲಿತ ಮಹಿಳೆ ಸತ್ಯಕ್ಕ ವಚನಗಳನ್ನು ಬರೆಯುವಾಗ ಜಗತ್ತಿನ ಯಾವ ಭಾಷೆಯಲ್ಲಿ ಕೂಡ ಹೆಣ್ಣುಮಕ್ಕಳು ಸಾಹಿತ್ಯ ರಚನೆ ಮಾಡಿದ ದಾಖಲೆಗಳಿಲ್ಲ. ಸುಮ್ಮನೆ ಪುರಾಣದ ಹೆಸರುಗಳು ಮಾತ್ರ ಇವೆ. ಆ ಕಾಲದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚನೆಯಾಗಿದ್ದಿಲ್ಲ. ಹೀಗೆ ನವಸಾಕ್ಷರರನ್ನು ರೂಪಿಸಿ ಅವರೆಲ್ಲ ವಚನಕಾರರಾಗುವ ಹಾಗೆ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.
ಅನೇಕ ಶರಣೆಯರ ಹೆಸರುಗಳು ನಮಗೆ ಸಿಗುತ್ತವೆ. ಆದರೆ 33 ವಚನಕಾರ್ತಿಯರ ವಚನಗಳು ಸಿಕ್ಕಿವೆ. ಒಂದು ಕಾಲಮಾನದಲ್ಲಿ ಅಷ್ಟೊಂದು ಮಹಿಳೆಯರು ಸಾಹಿತ್ಯ ರಚನೆ ಮಾಡಿದ್ದು ಕೂಡ ಅನನ್ಯವಾಗಿದೆ. ನಮ್ಮ ದೇಶದ ಯಾವ ಭಾಷೆಯಲ್ಲಿ ಕೂಡ ಮಹಿಳೆಯರು ಆ ಸಂದರ್ಭದಲ್ಲಿ ಸಾಹಿತ್ಯ ರಚನೆ ಮಾಡಿದ ದಾಖಲೆಗಳಿಲ್ಲ. ನಮ್ಮ ಶರಣರ ಸಂಘದಲ್ಲಿ ಮಹಿಳೆಯರು ಅಂಥ ಸಾಧನೆ ಮಾಡಿದರು.
ಬಸವಣ್ಣನವರು ಎಲ್ಲ ಶರಣರ ಜೊತೆ ಸೇರಿ ಶರಣಸಂಕುಲ ವೆಂಬ ಹೊಸ ಸಮಾಜದ ನಿರ್ಮಾಣ ಮಾಡಿದರು. ಎಲ್ಲಿ ವರ್ಣ ಗಳಿಲ್ಲವೊ, ಎಲ್ಲಿ ಜಾತಿಗಳಿಲ್ಲವೊ, ಎಲ್ಲಿ ಲಿಂಗಭೇದವಿಲ್ಲವೊ, ಎಲ್ಲಿ ವರ್ಗಭೇದವಿಲ್ಲವೊ, ಎಲ್ಲಿ ಕುಲಭೇದವಿಲ್ಲವೊ ಅದಕ್ಕೆ ಸಂಕುಲ ಎಂದು ಕರೆಯುತ್ತಾರೆ. ಪ್ರಾಣಿಸಂಕುಲವೆಂದರೆ ಅಲ್ಲಿ ಇಲಿಗೂ ಹುಲಿಗೂ ಒಂದೇ ರೀತಿಯ ಮಹತ್ವವಿರುತ್ತದೆ. ಬಸವಣ್ಣನವರ ಶರಣಸಂಕುಲದಲ್ಲಿ ಎಲ್ಲ ಕಾಯಕಜೀವಿಗಳು ಎಲ್ಲ ವಿಧದಲ್ಲಿ ಸಮಾನತೆಯನ್ನು ಅನುಭವಿಸಿದರು. ಎಲ್ಲ ಕಾಯಕಜೀವಿಗಳು ಒಂದಾಗಿ ಬದುಕುವಂಥ ಇಂಥ ಒಂದು ಹೊಸ ಸಮಾಜದ ನಿರ್ಮಾಣವನ್ನು 850 ವರ್ಷಗಳ ಹಿಂದೆ ಬಸವಣ್ಣನವರು ಮಾಡಿ ತೋರಿಸಿದರು. ಇದನ್ನು ನಾು ಇಂದು ಅರ್ಥ ಮಾಡಿಕೊಳ್ಳಬೇಕಿದೆ.
ಬಸವಣ್ಣನವರು ಲಿಂಗವ ಪೂಜಿಸಿ ಫಲವೇನಯ್ಯ? ಎಂದು ಕೇಳುತ್ತಾರೆ. ದುಡಿಯುವ ವರ್ಗದ ನಾಯಕ ಶ್ರಮಕ್ಕೆ ಫಲವನ್ನು ಬಯಸುತ್ತಾನೆ. ಲಿಂಗಪೂಜೆಯಲ್ಲೂ ಫಲವಿದೆ ಎಂದು ಹೇಳುತ್ತಾನೆ. ಫಲಾಪೇಕ್ಷೆ ಇಲ್ಲದೆ ಕರ್ಮವನ್ನು ಮಾಡು ಎಂದು ಕಾಯಕಜೀವಿಗಳ ನಾಯಕ ಹೇಳಲು ಸಾಧ್ಯವಿಲ್ಲ. ಇಲ್ಲಿ ಅರಿವೇ ಇಷ್ಟಲಿಂಗ ಪೂಜಾಫಲ ಆಗಿದೆ.
ಲಿಂಗವ ಪೂಜಿಸಿ ಫಲವೇನಯ್ಯ
ಸಮರತಿ ಸಮಕಳೆ ಸಮಸುಖವ ಅರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯ
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?

ವಚನಗಳಿಗೆ ಬಹಳ ಆಯಾಮಗಳಿವೆ. 20 ನಿಮಿಷದಲ್ಲಿ ಮಾತು ಮುಗಿಸಬೇಕಾದ ಕಾರಣ ಈ ವಚನದ ಸೈದ್ಧಾಂತಿಕ ಆಯಾಮದ ಕುರಿತು ಮಾತನಾಡಲು ಸಾಧ್ಯವಾಗುವುದಿಲ್ಲ. ನಾನೀಗ ಸಾಮಾಜಿಕ ಆಯಾಮದ ಕುರಿತು ಮಾತನಾಡುವೆ.
ಸಮರತಿ ಎಂದರೆ ಲಿಂಗಭೇದ ಮಾಡದೆ ಇರುವುದು. ಮಹಿಳೆ ಯರು ಅರ್ಧಜಗತ್ತಿನ ಪ್ರತೀಕವಾಗಿದ್ದಾರೆ. ‘ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ’ ಎಂದು ಹೇಳುವ ದೇಶದಲ್ಲಿ ಬಸವಣ್ಣನವರು ಗಂಡ ಹೆಂಡಿರ ಮಧ್ಯದ ಅನುಚರ ಭಾವವನ್ನು ಅಲ್ಲಗಳೆದರು. ಅವರ ಮಧ್ಯೆ ಸಹಚರ ಭಾವದ ವಾತಾವರಣ ಕಲ್ಪಿಸಿದರು.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News

ಜಗದಗಲ
ಜಗ ದಗಲ