ಮತ್ತಷ್ಟು ನಗರಗಳ ಮರುನಾಮಕರಣ: ಶಾಸಕ ಜಗನ್ ಪ್ರಸಾದ್ ಗರ್ಗ್

Update: 2018-11-10 03:59 GMT
ಜಗನ್ ಪ್ರಸಾದ್ ಗರ್ಗ್

ಲಕ್ನೋ, ನ. 10: ಉತ್ತರ ಪ್ರದೇಶದ ಅಲಹಾಬಾದ್ ಮತ್ತು ಫೈಝಾಬಾದ್ ನಗರಗಳನ್ನು ಆದಿತ್ಯನಾಥ್ ಸರ್ಕಾರ ಕ್ರಮವಾಗಿ ಪ್ರಯಾಗರಾಜ್ ಮತ್ತು ಅಯೋಧ್ಯೆ ಎಂದು ಮರುನಾಮಕರಣಗೊಳಿಸಿದ ಬೆನ್ನಲ್ಲೇ, ಮತ್ತಷ್ಟು ನಗರಗಳ ಮರುನಾಮಕರಣಕ್ಕೆ ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಹೇಳಿದ್ದಾರೆ.

ಆಗ್ರಾ ನಗರವನ್ನು ಅಗ್ರವನ್ ಅಥವಾ ಅಗ್ರವಾಲ್ ಎಂದು ಮರುನಾಮಕರಣ ಮಾಡುವಂತೆ ಅವರು ಆಗ್ರಹಿಸಿದ್ದಾರೆ. ಆಗ್ರಾ ಹೆಸರಿಗೆ ಯಾವ ಅರ್ಥವೂ ಇಲ್ಲ. ನೀವು ಆಗ್ರಾ ಹೆಸರು ಪರಿಶೀಲಿಸಿ, ಅದಕ್ಕೆ ಯಾವುದೇ ಪ್ರಸ್ತುತತೆ ಇದೆಯೇ ? ಹಿಂದೆ ಇಲ್ಲಿ ಸಾಕಷ್ಟು ಅರಣ್ಯ ಇತ್ತು. ಅಗರ್‌ ವಾಲ್ ಸಮುದಾಯದ ಬಹಳಷ್ಟು ಮಂದಿ ಇಲ್ಲಿ ವಾಸವಿದ್ದರು. ಆದ್ದರಿಂದ ಈ ಹೆಸರು ಅಗ್ರ-ವನ ಅಥವಾ ಅಗ್ರ-ವಾಲ್ ಎಂದಾಗಬೇಕು ಎಂದು ಗರ್ಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗರ್ಗ್, ಆಗ್ರಾ ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಅಂತೆಯೇ ಬಿಜೆಪಿಯ ವಿವಾದಾತ್ಮಕ ಶಾಸಕ ಸಂಗೀತ್ ಸೋಮ್ ಮುಝಾಫರ್ ನಗರದ ಹೆಸರನ್ನು ಲಕ್ಷ್ಮೀನಗರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ. ಇದು ಸಾರ್ವಜನಿಕರ ಆಗ್ರಹ ಎಂದು ಅವರು ಹೇಳಿದ್ದಾರೆ.

"ನಗರ ಹೆಸರು ಬದಲಿಸುವ ಮೂಲಕ ಬಿಜೆಪಿ ಭಾರತದ ಸಂಸ್ಕೃತಿಯನ್ನು ಮರಳಿ ತರುವ ಪ್ರಯತ್ನವನ್ನಷ್ಟೇ ಮಾಡುತ್ತಿದೆ. ಹಿಂದುತ್ವವನ್ನು ಕೊನೆಗೊಳಿಸುವ ಸಲುವಾಗಿ ಮುಸ್ಲಿಂ ರಾಜರು ಇದನ್ನು ಉದ್ದೇಶಪೂರ್ವಕವಾಗಿ ಬದಲಿಸಿದ್ದರು" ಎಂದು ಅವರು ಹೇಳಿದ್ದಾರೆ. ಇನ್ನಷ್ಟು ನಗರಗಳ ಹೆಸರು ಬದಲಿಸಬೇಕಾಗಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News