ಅಮೆರಿಕಾದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯೇ ಕೊಂಡಾಡುವ ರಾಜ ‌‌ಟಿಪ್ಪು ಸುಲ್ತಾನ್

Update: 2018-11-10 07:58 GMT

ಇಂದು ಟಿಪ್ಪು ಇಲ್ಲಿನ ಕೊಳಕು ರಾಜಕೀಯಕ್ಕೆ ದಾಳವಾಗಿ ಬಳಕೆಯಾಗುತ್ತಿದ್ದಾರೆ. ಮತಾಂತರ, ಆರಾಧನಾಲಯ ಧ್ವಂಸ ಇತ್ಯಾದಿ ಆಧಾರರಹಿತ ಆರೋಪಗಳನ್ನು ಟಿಪ್ಪು ವಿರೋಧಿಗಳು ಮಾಡುತ್ತಾ ಬಂದಿದ್ದಾರೆ. ಅದು ನಿರಾಧಾರವೆಂದು ಸಾಬೀತುಪಡಿಸುವ ನೂರಾರು ಐತಿಹಾಸಿಕ ದಾಖಲೆಗಳಿವೆ.‌ ಅದನ್ನು ವಸ್ತುನಿಷ್ಠ ಇತಿಹಾಸಕಾರರು  ನೀಡುತ್ತಾ ಬಂದಿದ್ದಾರೆ.‌ ಆದರೆ ಟಿಪ್ಪುವಿನ ಮೇಲೆ ಸುಳ್ಳಾರೋಪ ಹೊರಿಸುವವರಲ್ಲಿ‌ಅದನ್ನು ಸಾಬೀತು ಪಡಿಸಲು ಬೇಕಾದ ಒಂದೇ ಒಂದು ಅಧಿಕೃತ ದಾಖಲೆಗಳಿಲ್ಲ. 

ಅವರು ಟಿಪ್ಪು ವಿಚಾರ ಬಂದಾಗೆಲ್ಲಾ ವಿವಾದ ಸೃಷ್ಟಿಸುವುದರ ಹಿಂದಿನ ಉದ್ದೇಶ ಬಹಳ ಸ್ಪಷ್ಟ. ಟಿಪ್ಪುವಿನ ಕುರಿತ ಚರ್ಚೆ ಅತ್ಯಂತ ಸಂಕುಚಿತವಾದ ಚೌಕಟ್ಟಿನೊಳಗೇ ತಿರುಗುತ್ತಿದ್ದರೆ ಟಿಪ್ಪು ಎಂಬ ಇತಿಹಾಸ ಕಂಡ ಮಹಾನ್ ಚೇತನ, ಅಭಿವೃದ್ಧಿಯ ಹರಿಕಾರ, ಕನಸುಗಾರ, ಸುಧಾರಣಾವಾದಿಯ ಬದುಕು ಚರ್ಚೆಗೇ ಬರುವುದಿಲ್ಲ. ಟಿಪ್ಪು ಮತಾಂಧ ಹೌದೋ ಅಲ್ಲವೋ ಎಂಬ ವಿಚಾರದ ಸುತ್ತವೇ ಚರ್ಚೆ ಗಿರಕಿ ಹೊಡೆಯುತ್ತದೆ.

ಆದುದರಿಂದ ಟಿಪ್ಪುವಿನ ಇತರ ಮುಖಗಳತ್ತ  ದೃಷ್ಟಿ ಹರಿಸುವುದು ಕಾಲದ ತುರ್ತು.

ಆ ನಿಟ್ಟಿನಲ್ಲಿ ಒಂದೆರಡು ವಿಷಯಗಳತ್ತ ಕ್ಷ ಕಿರಣ ಬೀರುವ ಪ್ರಯತ್ನ ಮಾಡುವೆ.

ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿಂದಿನ ಕತೆ:-

ಶ್ರೀರಂಗಪಟ್ಟಣ ದಿಂದ ಒಂಬತ್ತು ಕಿಲೋಮೀಟರ್ ದೂರದಲ್ಲಿ ಕಾವೇರಿ ನದಿಗೆ ಕೃಷ್ಣರಾಜ ಸಾಗರ ಅಣೆಕಟ್ಟನ್ನು ಕಟ್ಟಲಾಗಿದೆ.1911ರಲ್ಲಿ ಆ ಸ್ಥಳದಲ್ಲಿ ಉತ್ಕನನ ನಡೆಸಿದಾಗ ಮಣ್ಣಿನಡಿಯಲ್ಲಿ ಹೂತುಹೋಗಿದ್ದ ಶಿಲಾ ಶಾಸನವೊಂದು ದೊರಕಿತ್ತು. ಅದು 1798 ಜೂನ್ ಹನ್ನೆರಡರಂದು ಟಿಪ್ಪು ಬರೆಸಿದ ಶಾಸನವಾಗಿತ್ತು.

ಆ ಸ್ಥಳದಲ್ಲಿ ಟಿಪ್ಪು ಆ ಅಣೆಕಟ್ಟು ಕಟ್ಟಲು ಶಿಲಾನ್ಯಾಸ ಮಾಡಿದ್ದರು. ಆ ಶಾಸನದಲ್ಲಿ "ಸುತ್ತಮುತ್ತಲ ಪ್ರದೇಶಗಳ ಕೃಷಿಕರ ನೀರಾವರಿ ಸಮಸ್ಯೆಯನ್ನು ನೀಗಿಸುವ ಸಲುವಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಶೇಖರಣೆಯಾಗುವ ನೀರನ್ನು ಬಳಸಿ ಇಲ್ಲಿನ ಬರಡು ಭೂಮಿಯನ್ನು ಕೃಷಿ ಸಮೃದ್ಧ ಭೂಮಿಯಾಗಿ ಪರಿವರ್ತಿಸತಕ್ಕದ್ದು. ಇದನ್ನು ಬಳಸಿ  ಬಂಜರು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುವ ರೈತರ ಅರ್ಧ ಪಾಲು ಕಂದಾಯ ಮನ್ನಾ ಮಾಡಲಾಗುವುದು" ಎಂಬ ಘೋಷಣೆಯನ್ನು ಕೆತ್ತಲಾಗಿತ್ತು.

ಈ ಶಿಲಾನ್ಯಾಸವಾಗಿ ವರ್ಷ ತುಂಬುವ ಮುನ್ನವೇ ಅರ್ಥಾತ್ 1799 ಮೇ ನಾಲ್ಕರಂದು ಟಿಪ್ಪು ಹುತಾತ್ಮರಾದುದರಿಂದ ಅದು ನೆನೆಗುದಿಗೆ ಬಿತ್ತು. ಕೃಷಿ ಅಭಿವೃದ್ಧಿಯ ಕುರಿತಂತೆ ಟಿಪ್ಪುವಿಗಿದ್ದ ಕಾಳಜಿ ಮತ್ತು ಕನಸನ್ನು ಈ ಶಿಲಾಶಾಸನ ತೋರಿಸುತ್ತದೆ.

ಪ್ರಾದೇಶಿಕ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಸಕ್ಕರೆ ತಯಾರಿಕೆಗೆ ಟಿಪ್ಪು ಅನೇಕ ರೈತರಿಗೆ ತರಬೇತಿ ಕೊಡಿಸಿದ್ದರು. ಅದಕ್ಕೆ ಬೇಕಾದ ಯಂತ್ರವನ್ನು ಟಿಪ್ಪು ಅಭಿವೃದ್ಧಿಪಡಿಸಿದ್ದರು. ಮೈಸೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ರೇಷ್ಮೆ ಕೃಷಿಯನ್ನು ಆರಂಭಿಸಿದವರು ಟಿಪ್ಪು. ರೇಷ್ಮೆ ಹುಳಗಳ ಆಹಾರಕ್ಕಾಗಿ ಹಿಪ್ಪೆ ನೇರಳೆ ಕೃಷಿಯನ್ನೂ ಟಿಪ್ಪು ಆರಂಭಿಸಿದರು. ಟಿಪ್ಪು ಮೈಸೂರು ಸುತ್ತಮುತ್ತಲ ಪ್ರದೇಶದಲ್ಲಿ ಇಪ್ಪತ್ತೊಂದು ರೇಶ್ಮೆ ತಯಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸಿದ್ದರು.

ಮೈಸೂರಿನ ರೇಷ್ಮೆ ಕೃಷಿಯ ಜನಕನೇ ಟಿಪ್ಪು ಸುಲ್ತಾನ್

ಸಿದ್ಧ ವಸ್ತುಗಳ ಉತ್ಪಾದನೆ ಮಾಡುವ ಕರಕುಶಲಕರ್ಮಿಗಳಿಗೆ ಟಿಪ್ಪು ಪ್ರೋತ್ಸಾಹ ನೀಡಿದ್ದರು. ಅದಕ್ಕೆ ಟಿಪ್ಪು ವಿಶೇಷ ಕಾಳಜಿ ವಹಿಸಿದ್ದರು. 1792ರಲ್ಲಿ ಬ್ರಿಟಿಷರು ಹೊನ್ನಾವರವನ್ನು ಆಕ್ರಮಿಸಿದಾಗ ಅವರು ಟಿಪ್ಪು ಸ್ಥಾಪಿಸಿದ್ದ ನೌಕಾನೆಲೆಗಳು ಮತ್ತು ಗೋದಾಮನ್ನು ಕಂಡು ಆಶ್ಚರ್ಯ ಚಕಿತರಾಗಿದ್ದರು ಎಂದು ಬ್ರಿಟಿಷ್ ಇತಿಹಾಸಕಾರರೇ ದಾಖಲಿಸಿದ್ದಾರೆ. ಅಲ್ಲಿನ ಗೋದಾಮಿನಲ್ಲಿ ಸುಮಾರು ಅರುವತ್ತು ಬಂದೂಕುಗಳು ಪತ್ತೆಯಾಗಿತ್ತು. ಬ್ರಿಟಿಷರು ಹೊನ್ನಾವರದ ಟಿಪ್ಪುವಿನ ನೌಕಾನೆಲೆಗಳನ್ನು ಧ್ವಂಸಗೊಳಿಸಿದರೂ ಟಿಪ್ಪು ಎದೆಗುಂದಲಿಲ್ಲ. ಅದೇ ಸ್ಥಳದಲ್ಲಿ ಟಿಪ್ಪು ಹೊಸ ನೌಕಾನೆಲೆಗಳನ್ನು ಸ್ಥಾಪಿಸಿದರು. ಅದರಲ್ಲಿ ಏಳು ಹೊಸ ಯುದ್ಧ ನೌಕೆಗಳನ್ನು ನಿರ್ಮಿಸಿದರು. ಒಂದೊಂದು ನೌಕೆಯಲ್ಲೂ ತಲಾ 35 ರಿಂದ 50  ಆ ಕಾಲದ ಆಧುನಿಕ ವಿನ್ಯಾಸದ ಬಂದೂಕುಗಳಿದ್ದವು.

ಟಿಪ್ಪು ಅದೆಂತಹ ಕನಸುಗಾರ ಮತ್ತು ಅಭಿವೃದ್ದಿಯ ಹರಿಕಾರನೆಂದರೆ ವಿದೇಶೀ ವ್ಯಾಪಾರ ವಹಿವಾಟುಗಳಲ್ಲಿ ಟಿಪ್ಪು ಅದ್ಭುತವಾದುದನ್ನೇ  ಸಾಧಿಸಿದ್ದರು. ಟಿಪ್ಪುವಿನ ಅಭಿವೃದ್ಧಿಯ ಕನಸುಗಳಿಗೆ ಮಿತಿಯೇ ಇರಲಿಲ್ಲ. ಟಿಪ್ಪು ಸಮುದ್ರ ಮಾರ್ಗದ ವ್ಯಾಪಾರದಲ್ಲಿ ಮಾಡಿದ ಸಾಧನೆ ಅನನ್ಯವಾದುದು. ಟಿಪ್ಪುವಿನ ವ್ಯಾಪಾರಿ ನೌಕೆಗಳು ನಿರಂತರವಾಗಿ ಒಮನ್ ದೇಶದ ಮಸ್ಕತ್ ಗೆ ಸಂಚರಿಸುತ್ತಿದ್ದವು. 1985ಕ್ಕಿಂತ ಹಿಂದೆಯೇ ಅಲ್ಲಿ ಟಿಪ್ಪು ತನ್ನ ವ್ಯಾಪಾರ ಕೇಂದ್ರಗಳನ್ನು ತೆರೆದಿದ್ದರು.

ಅದೇ ರೀತಿಯ ವ್ಯಾಪಾರ ಕೇಂದ್ರಗಳನ್ನು ಟಿಪ್ಪು ಯುರೋಪಿನಲ್ಲೂ ಸ್ಥಾಪಿಸಲು ಯೋಜನೆ ಹಾಕಿದ್ದರು. ಇರಾಕ್ ನ ಬಸ್ರಾ‌ಗೆ, ಇರಾನ್ ಗೆ ಮತ್ತು ಕಾನ್ ಸ್ಟಾಂಟಿನೋಪಲ್ ಗೆ ಟಿಪ್ಪು ತನ್ನ ನಿಯೋಗದೊಂದಿಗೆ 1986ರ ಮಾರ್ಚ್ ಇಪ್ಪತ್ತರಂದು ಕರಿಮೆಣಸು, ಎಳ್ಳು, ಶ್ರೀಗಂಧದ ಸುಗಂಧಭರಿತ ಸಾಮಗ್ರಿಗಳು, ಮೈಸೂರಿನ ಬಟ್ಟೆಗಳನ್ನು ತುಂಬಿಸಿದ್ದ ವ್ಯಾಪಾರಿ ನೌಕೆಯನ್ನು ಕಳುಹಿಸಿದ್ದರು. ಕಾನ್ ಸ್ಟಾಂಟಿನೋಪಲ್ ಸುಲ್ತಾನನು ರಾಜತಾಂತ್ರಿಕ ಸಂಬಂಧದ ಹೊರತಾದ ಸಂಬಂಧ ಬೆಳೆಸಲು ಸಿದ್ಧನಾಗಲಿಲ್ಲ. ಬಸ್ರಾ, ಇರಾನ್ ಕಡೆಗೆ ಹೊರಟಿದ್ದ ಹಡಗುಗಳಲ್ಲಿ ಕೆಲವು ಬಿರುಗಾಳಿಗೆ ಸಿಲುಕಿ ನಾಶವಾದವು, ಒಂದು ಹಡಗಿಗೆ ಬೆಂಕಿ ಬಿತ್ತು. ಆದುದರಿಂದ ಅಲ್ಲೆಲ್ಲಾ ವ್ಯಾಪಾರ ಕೇಂದ್ರಗಳನ್ನು ತೆರೆಯುವ ಟಿಪ್ಪುವಿನ ಕನಸುಗಳು ನನಸಾಗಲಿಲ್ಲ.1787ರಲ್ಲಿ ಟಿಪ್ಪು ಫ್ರಾನ್ಸ್ ಗೆ ತನ್ನ ನಾಲ್ಕು ನೂರು ಮಂದಿಯ ವ್ಯಾಪಾರಿ, ರಾಜತಾಂತ್ರಿಕ ಮತ್ತು ಕರಕುಶಲ ಕರ್ಮಿಗಳ ನಿಯೋಗದೊಂದಿಗೆ ಹಡಗುಗಳನ್ನು ಕಳುಹಿಸಲು ಸಿದ್ಧರಾಗಿದ್ದರು. ಆದರೆ ಫ್ರಾನ್ಸ್ ಟಿಪ್ಪುವಿನ ಒಡೆತನದ ಹಡಗಿನಲ್ಲಿ ಟಿಪ್ಪುವಿನ ನಿಯೋಗ ಫ್ರಾನ್ಸ್ ತಲುಪುವುದಕ್ಕೆ ಅವಕಾಶ ನೀಡಲಿಲ್ಲ. ಅವರು ತಮ್ಮದೇ ಒಡೆತನದ ಹಡಗಿನಲ್ಲಿ ಟಿಪ್ಪುವಿನ ನಿಯೋಗ ಪ್ರಯಾಣ ಬೆಳೆಸುವುದನ್ನು ಬಯಸಿದ್ದರು. ಆದುದರಿಂದ ಆ ಯತ್ನವೂ ಮುರಿದು ಬಿತ್ತು.

ಒಂದು ವೇಳೆ ಆ ಯತ್ನವೇನಾದರೂ ಯಶಸ್ಸು ಕಂಡಿದ್ದರೆ ಭಾರತದಿಂದ ಯುರೋಪ್ ದೇಶವೊಂದಕ್ಕೆ ವೃತ್ತಿ ತರಬೇತಿ, ವ್ಯಾಪಾರ ಮತ್ತು ರಾಜತಾಂತ್ರಿಕ ಉದ್ದೇಶಕ್ಕೆ ತೆರಳಿದ ಮೊದಲ ಹಡಗು ಅದಾಗಿರುತ್ತಿತ್ತು. ಟಿಪ್ಪು ತನ್ನ ನಿಯೋಗದಲ್ಲಿ ಕಳುಹಿಸಲು ಸಜ್ಜುಗೊಳಿಸಿದ್ದ ಕರಕುಶಲ ಕರ್ಮಿಗಳು ಯುರೋಪಿನ ವಿಜ್ಞಾನ ಮತ್ತು ತಂತ್ರಜ್ಞಾನ ಕಲಿತು ಬರಬೇಕೆಂಬ ಮಹದಾಸೆ ಹೊಂದಿದ್ದರು. ಅವರ ಮೂಲಕ ಮೈಸೂರಿನಲ್ಲಿ ಐರೋಪ್ಯ ತಂತ್ರಜ್ಞಾನ ಬಳಸಿ ಕೈಗಾರಿಕೆ ಮತ್ತು ಉದ್ದಿಮೆಗಳನ್ನು ಸ್ಥಾಪಿಸಿ ಮೈಸೂರನ್ನು ಅತ್ಯಂತ ಅಭಿವೃದ್ಧಿ ಮತ್ತು ಮುಂದುವರಿದ ರಾಜ್ಯವನ್ನಾಗಿಸಲು ಟಿಪ್ಪು ಕನಸು ಕಂಡಿದ್ದರು. ಇದರಿಂದ ಐರೋಪ್ಯ ದೇಶದಲ್ಲಿ ಮೊದಲ ಭಾರತೀಯ ವ್ಯಾಪಾರೀ ಕೇಂದ್ರ ತೆರೆದ ಕೀರ್ತಿಯೂ ಟಿಪ್ಪುವಿಗೆ ಸಲ್ಲುತ್ತಿತ್ತು.

1788ರಲ್ಲಿ ತನ್ನ ಓರ್ವ ಮಗನನ್ನು ಫ್ರಾನ್ಸ್ ಗೆ ವಿದ್ಯಾಭ್ಯಾಸಕ್ಕೆಂದು ಕಳುಹಿಸಲು ಟಿಪ್ಪು ಬಯಸಿದ್ದರು. ದುರದೃಷ್ಟವಶಾತ್ ಆ ಕನಸೂ ಕೈ ಗೂಡಲಿಲ್ಲ. ಟಿಪ್ಪು ತನ್ನ ರಾಜ್ಯದ ಪ್ರಮುಖ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದರು ಮತ್ತು ಅದಕ್ಕೆ ಪ್ರತಿಯಾಗಿ ಅಲ್ಲಿನ ಉತ್ಪನ್ನಗಳನ್ನು ಮತ್ತು ತಂತ್ರಜ್ಞಾನವನ್ನು ಆಮದು ಮಾಡಿಕೊಂಡಿದ್ದರು. ತನ್ಮೂಲಕ ಟಿಪ್ಪು ಎಲ್ಲಾ ವಿಧದಲ್ಲೂ ಬಲಿಷ್ಠ ರಾಜ್ಯವೊಂದನ್ನಾಗಿ ಮೈಸೂರನ್ನು ಬೆಳೆಸುವ ಕೆಲಸದಲ್ಲಿ‌ ತೊಡಗಿದ್ದರು.

ಬಂಗಾರದ ಅದಿರು, ಹೊಗೆಸೊಪ್ಪು, ಗಂಧದ ಮರಗಳು, ಕಪ್ಪು ಮೆಣಸು, ಇತ್ಯಾದಿಗಳನ್ನೆಲ್ಲಾ ಟಿಪ್ಪು ರಾಜ್ಯದ ಸ್ವತ್ತಾಗಿ ಪರಿಗಣಿಸಿ, ಅವುಗಳಿಗೆ ಆ ಕಾಲದಲ್ಲೇ ಸರ್ಕಾರಿ ಸ್ವಾಮ್ಯತೆ ಘೋಷಿಸಿದ್ದರು. ಫ್ರಾನ್ಸಿನ ತಂತ್ರಜ್ಞರನ್ನು ಮೈಸೂರಿಗೆ ಕರೆಸಿ ಕೈ ಗಡಿಯಾರ ತಯಾರಿಕೆಯನ್ನು ಪ್ರಾರಂಭಿಸಿದ್ದರು.

ಟಿಪ್ಪುವಿಗೆ ಮೈಸೂರಿನಲ್ಲಿ ಒಂದು ಮುದ್ರಣಾಲಯ ‌‌ನಿರ್ಮಿಸುವ ಕನಸಿತ್ತು. ಅವುಗಳಿಗೆ ಕೈ ಹಾಕಿದ ಸಂದರ್ಭದಲ್ಲಿ ಮೈಸೂರು ನಾಲ್ದೆಸೆಗಳಿಂದಲೂ ಶತ್ರು ಕಾಟ ಅನುಭವಿಸುತ್ತಿತ್ತು ಮತ್ತು ಯುದ್ಧ ಜರ್ಜರಿತವಾಗಿತ್ತು. ಅದಾಗ್ಯೂ ಟಿಪ್ಪು ಆ ಕಾಲಕ್ಕೆ ಆಧುನಿಕ ಮಾದರಿಯ ಕಾಗದ ತಯಾರಿಯನ್ನು ಆರಂಭಿಸಿದ್ದರು.

1797ರಲ್ಲಿ ಫ್ರಾನ್ಸ್ ಸರಕಾರಕ್ಕೆ ಬೇಡಿಕೆ ಸಲ್ಲಿಸಿ ಹತ್ತು ಮಂದಿ ಆಧುನಿಕ ಬಂದೂಕು ತಯಾರಕರು, ಹತ್ತು ಮಂದಿ ಹಡಗು ನಿರ್ಮಾಣಕಾರರು, ಹತ್ತು ಮಂದಿ ಹಡಗಿನ ಇಂಜಿನ್ ಮತ್ತು ಗಾಲಿ ತಯಾರಿಸುವ ತಂತ್ರಜ್ಞರು, ಗೋಲ್ಡ್ ಪ್ಲೇಟಿಂಗ್ ಪರಿಣತರನ್ನು ಮೈಸೂರಿಗೆ ಕರೆಸಿದ್ದರು.

ಟಿಪ್ಪು ಕೇವಲ ಅವರ ಸೇವೆಯನ್ನು ಮಾತ್ರ ಬಯಸಿರಲಿಲ್ಲ. ಜೊತೆ ಜೊತೆಗೇ ತನ್ನ ರಾಜ್ಯದಲ್ಲೂ ಅಂತಹ ತಂತ್ರಜ್ಞರನ್ನು ‌‌ಸೃಷ್ಟಿಸುವ ಸಲುವಾಗಿ ಮೈಸೂರಿನ ಕರಕುಶಲ ಕರ್ಮಿಗಳಿಗೆ ಅವರಿಂದ ತರಬೇತಿ ಕೊಡಿಸಿದ್ದರು.

ಕನ್ನಡಿ ತಯಾರಿಯಲ್ಲಿ ಆ ಕಾಲಕ್ಕೆ ಅತ್ಯಂತ ಮುಂದುವರಿದ ಆಧುನಿಕ ತಂತ್ರಜ್ಞಾನಗಳನ್ನು ಮೈಸೂರಿನಲ್ಲೂ ಅಳವಡಿಸಿದ್ದರು.

ರಾಕೆಟ್ ತಂತ್ರಜ್ಞಾನದ ಪಿತಾಮಹನೆಂದೇ ಆಧುನಿಕ ಜಗತ್ತು ಅವರನ್ನು ಗುರುತಿಸುತ್ತದೆ ಮತ್ತು‌ ಅಮೆರಿಕಾದ ನಾಸಾದಲ್ಲೇ ಟಿಪ್ಪು ತಯಾರಿಸಿದ ಜಗತ್ತಿನ ಮೊಟ್ಟ ಮೊದಲ ರಾಕೆಟ್ ನ ಪ್ರತಿಕೃತಿ ಮತ್ತು ಅದರ ಕುರಿತ ಟಿಪ್ಪಣಿಗಳೂ ಇವೆ.

ಟಿಪ್ಪು ತನ್ನ ಅಧಿಕಾರಾವಧಿಯ ತುಂಬಾ ಶತ್ರುಗಳ ಕಾಟದಿಂದ ಬಳಲುತ್ತಿದ್ದುದರಿಂದ ಹೆಚ್ಚಿನ ಸಮಯವನ್ನು ಯುದ್ಧ ಭೂಮಿಯಲ್ಲೇ ಕಳೆಯಬೇಕಾಗಿ ಬಂದಿತ್ತಾದರೂ ಅವೆಲ್ಲದರ ನಡುವೆ ರಾಜ್ಯದಲ್ಲಿ ಕೃಷಿ, ಕೈಗಾರಿಕೆ, ತಂತ್ರಜ್ಞಾನದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಿದ್ದು  ಅದ್ಭುತವೇ ಸರಿ. ಟಿಪ್ಪು ಯಾವತ್ತೂ ವಿಶ್ರಾಂತಿ ತೆಗೆದುಕೊಳ್ಳದೇ ಸದಾಕಾಲ ನಾಡಿನ ರಕ್ಷಣೆ ಮತ್ತು ಅಭಿವೃದ್ದಿಯಲ್ಲೇ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

ಇಂತಹ ಅನುಪಮ ಕನಸುಗಾರ, ಅಭಿವೃದ್ಧಿಯ ಹರಿಕಾರ ರಾಜನನ್ನು ಉಪಖಂಡದ ಇತಿಹಾಸ ಕಂಡು ಕೇಳರಿಯಲಿಲ್ಲ.‌ಅಂತಹ ಟಿಪ್ಪುವನ್ನು ಅತ್ಯಂತ ಕೀಳು ಮಟ್ಟದ ಅಪಪ್ರಚಾರಕ್ಕೆ ಗುರಿಪಡಿಸುವುದು ಈ ನೆಲದ ಉನ್ನತ ಪರಂಪರೆಗೆ ಮಾಡುವ ಅವಮಾನ.

ಕೇವಲ ಜಯಂತಿಯಿಂದ ನಾವೇನೂ ಸಾಧಿಸಲು ಸಾಧ್ಯವಿಲ್ಲ. ಅಮೆರಿಕಾದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯೇ‌‌ಟಿಪ್ಪುವನ್ನು ಅವರ ರಾಕೆಟ್ ತಂತ್ರಜ್ಞಾನಕ್ಕಾಗಿ ಕೊಂಡಾಡುತ್ತಿರುವಾಗ ನಾವು ಕೇವಲ ಜಯಂತಿ ಹೆಸರಲ್ಲಿ, ಸುಳ್ಳು ಸುಳ್ಳೇ ಮತಾಂಧತೆಯ ಹೆಸರಲ್ಲಿ ಕೆಸರೆರೆಚಾಟ ಮಾಡುತ್ತಿದ್ದೇವೆ.

ಟಿಪ್ಪುವಿಗೆ ನಿಜಕ್ಕೂ ಗೌರವ ಕೊಡಬೇಕೆಂಬ ಉದ್ದೇಶ ಸರಕಾರಕ್ಕೆ ಇದೆಯೆಂದಾದಲ್ಲಿ ಟಿಪ್ಪುವಿನ ಹೆಸರಲ್ಲಿ ಒಂದು ಉತ್ತಮ ಗುಣಮಟ್ಟದ ರೇಷ್ಮೆ ಸಂಶೋಧನಾ ಕೇಂದ್ರವನ್ನು ‌ಸ್ಥಾಪಿಸಬೇಕು. ಟಿಪ್ಪುವಿನ ಹೆಸರಲ್ಲಿ ಒಂದು ತಾಂತ್ರಿಕ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು. ಟಿಪ್ಪುವಿನ ಹೆಸರಲ್ಲಿ ಒಂದು ಉನ್ನತ ಬಿಸಿನೆಸ್ ಮ್ಯಾನೇಜ್ ಮೆಂಟ್ ಯುನಿವರ್ಸಿಟಿ ಸ್ಥಾಪಿಸಬೇಕು.

ಇವೆಲ್ಲಾ ಟಿಪ್ಪು ಈ ನೆಲಕ್ಕೆ ನೀಡಿದ ಉನ್ನತ ಕೊಡುಗೆಗಳಿಗಾಗಿ ಅವರನ್ನು‌‌ಸದಾಕಾಲ ಸ್ಮರಿಸಬಲ್ಲ ಅತ್ಯುತ್ತಮ ಯೋಜನೆಗಳಾದೀತು.

ಆಧಾರ : 1.ಮೇಕಿಂಗ್ ಹಿಸ್ಟರಿ (ಸಾಕೇತ್ ರಾಜನ್)

  2.ಹೈದರಾಲಿ‌ ಟಿಪ್ಪು ಇತಿಹಾಸ ಕಥನ ( ಬಾರ್ಕೂರು ‌ಉದಯ)

  3.ಟಿಪ್ಪು ಸುಲ್ತಾನ್ (ಬಿ.ಶೇಕ್‌ ಅಲಿ)

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News