ಮಧ್ಯಪ್ರದೇಶ ವಿಧಾನ ಸಭೆ ಚುನಾವಣೆ: 230 ಸ್ಥಾನಕ್ಕೆ 2,800 ನಾಮಪತ್ರ ಸಲ್ಲಿಕೆ
ಭೋಪಾಲ್, ನ. 10: ಮಧ್ಯಪ್ರದೇಶದ ವಿಧಾನ ಸಭೆ ಚುನಾವಣೆಯ 230 ಸ್ಥಾನಗಳಿಗೆ ಒಟ್ಟು 2,800 ನಾಮಪತ್ರ ಸಲ್ಲಿಕೆಯಾಗಿದೆ. ವಿಧಾನ ಸಭೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಒಟ್ಟು 229 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದೆ.
ಉಳಿದ 1 ಕ್ಷೇತ್ರವನ್ನು ಶರದ್ ಯಾದವ್ ಅವರ ಲೋಕತಾಂತ್ರಿಕ್ ಜನತಾ ದಳ್ (ಎಲ್‌ಜೆಡಿ) ಅಭ್ಯರ್ಥಿಗೆ ಬಿಟ್ಟು ಕೊಟ್ಟಿದೆ. ಮಧ್ಯಪ್ರದೇಶದ ವಿಧಾನ ಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಶುಕ್ರವಾರ ಅಂತ್ಯಗೊಂಡಿದೆ. ವಿಧಾನ ಸಭಾ ಕ್ಷೇತ್ರ ರೇವಾದಲ್ಲಿ ಒಟ್ಟು 162 ನಾಮಪತ್ರ ಹಾಗೂ ಸಾತ್ನಾದಲ್ಲಿ 156 ನಾಮಪತ್ರ ಸಲ್ಲಿಕೆಯಾಗಿದೆ. ಮಹೋವ್ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಉಷಾ ಠಾಕೂರ್ ಅವರನ್ನು ಕಣಕ್ಕಿಳಿಸಿದೆ. ಈ ಹಿಂದೆ ಈ ಕ್ಷೇತ್ರದಲ್ಲಿ ಪಕ್ಷದ ನಾಯಕ ಕೈಲಾಸ್ ವಿಜಯವರ್ಗೀಯ ಸ್ಪರ್ಧಿಸಿದ್ದರು. ಈ ಸ್ಥಾನಕ್ಕೆ ಠಾಕೂರ್ ಅವರ ನಾಮ ನಿರ್ದೇಶನ ವಿರೋಧಿಸಿರುವ ಬಿಜೆಪಿಯ ಐವರು ನಾಯಕರು ಇದೇ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ನಾಯಕ ನಾಸಿರ್ ಇಸ್ಲಾಂ ಹಾಗೂ ಸಾಜಿದ್ ಅಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಧ್ಯಪ್ರದೇಶದಲ್ಲಿ ನವೆಂಬರ್ 28ರಂದು ಚನಾವಣೆ ನಡೆಯಲಿದೆ. ಡಿಸೆಂಬರ್ 11ರಂದು ಮತ ಎಣಿಕೆ ನಡೆಯಲಿದೆ.