ಚತ್ತೀಸ್‌ಗಢ ವಿಧಾನ ಸಭೆ ಚುನಾವಣೆ: ಅಮಿತ್ ಶಾ ಅವರಿಂದ ಪ್ರಣಾಳಿಕೆ ಬಿಡುಗಡೆ

Update: 2018-11-10 18:01 GMT

ಹೊಸದಿಲ್ಲಿ, ನ. 10: ಚತ್ತೀಸ್‌ಗಢದ ಮೊದಲ ಹಂತದ ಚುನಾವಣೆಯ ಪ್ರಚಾರದ ಕೊನೆಯ ದಿನವಾದ ಶನಿವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ರಮಣ ಸಿಂಗ್ ರೈತರು ಹಾಗೂ ಯುವಕರ ಮೇಲೆ ವಿಶೇಷ ಗಮನ ಹರಿಸಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ.

ಚತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 18 ಸ್ಥಾನಗಳಿಗೆ ನವೆಂಬರ್ 12ರಂದು ಹಾಗೂ ಉಳಿದ 72 ಕ್ಷೇತ್ರಗಳಿಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶವನ್ನು ಡಿಸೆಂಬರ್ 11ರಂದು ಪ್ರಕಟವಾಗಲಿದೆ ಎಂದು ಅವರು ತಿಳಿಸಿದ್ದಾರೆ. ರಾಯಪುರದಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶಾ, 15 ವರ್ಷಗಳಲ್ಲಿ ಚತ್ತೀಸ್‌ಗಢವನ್ನು ಪರಿವರ್ತಿಸಿದ ರಾಜ್ಯ ಸರಕಾರವನ್ನು ಶ್ಲಾಘಿಸಿದರು. ಕೌಶಲ ಅಭಿವೃದ್ಧಿಯಲ್ಲಿ ಕಾನೂನು ಹೊಂದಿರುವ ಮೊದಲ ರಾಜ್ಯ ಚತ್ತೀಸ್‌ಗಢ. ರಮಣ್ ಸಿಂಗ್ ಸರಕಾರ ಚತ್ತೀಸ್‌ಗಢವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದ್ದಾರೆ ಎಂದು ಶಾ ಹೇಳಿದರು.

ಈ ಹಿಂದೆ ಆರ್ಥಿಕವಾಗಿ ಹಿಂದುಳಿದ ರಾಜ್ಯ ಎಂದು ಪರಿಗಣಿತವಾಗಿದ್ದ ಚತ್ತೀಸ್‌ಗಢ ಈಗ ಅಧಿಕಾರ ಹಾಗೂ ಸಿಮೆಂಟ್‌ನ ಕೇಂದ್ರವಾಗಿದೆ. ಬಿಜೆಪಿ ಆಡಳಿತದಲ್ಲಿ ಚತ್ತೀಸ್‌ಗಢ ಇಂದು ಕಲ್ಯಾಣ ರಾಜ್ಯವಾಗಿದೆ. ಎಂಜಿಎನ್‌ಆರ್‌ಇಜಿಎ ಸಹಿತ ವಿವಿಧ ಯೋಜನೆಗಳು ಭ್ರಷ್ಟಾಚಾರ ಮುಕ್ತವಾಗಿವೆ ಎಂದು ಅವರು ತಿಳಿಸಿದರು. ರಮಣ ಸಿಂಗ್ ಸರಕಾರ ಕೃಷಿ ಕ್ಷೇತ್ರಕ್ಕೆ ಗರಿಷ್ಠ ಸೌಲಭ್ಯ ನೀಡುತ್ತಿದೆ. ಬುಡಕಟ್ಟು ಜನರು ಉದ್ಯೋಗ ಪಡೆಯಲು ನೆರವು ನೀಡುವಲ್ಲಿ ಕೂಡ ಸರಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಅಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News