ಮನದೊಳಗಣ ಪಿಚ್ ಸರಿ ಇಲ್ಲದೆ ರನ್ ಎಷ್ಟು ಹೊಡೆದರೇನು?

Update: 2018-11-11 06:01 GMT

ಭಾರತ ಕ್ರಿಕೆಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ, ನೀವು ವಿದೇಶಿ ಆಟಗಾರರನನ್ನು ಇಷ್ಟ ಪಡುವುದಾದದರೆ ಈ ದೇಶದಲ್ಲಿ ಇರುವುದು ಸೂಕ್ತ ಅಲ್ಲ ಎಂದು ಪ್ರತಿಕ್ರಿಯೆ ನೀಡಿರುವುದು ಅವರ ಅಭಿವ್ಯಕ್ತಿ ಸ್ವಾತಂತ್ರದ ಪ್ರಕಾರ ಸರಿ ಎನಿಸಿದರೂ ಒಬ್ಬ ಸಾಮಾಜಿಕ ಜವಾಬ್ದಾರಿ ಇರುವ ವ್ಯಕ್ತಿಯಿಂದ ಬರುವ ಉತ್ತರ ಇದಲ್ಲ.

ಅನೇಕರು ಕ್ರಿಕೆಟ್ ಸಾಧನೆಯ ಕುರಿತು ಲೇಖನ ಬರೆಯುವಾಗ ವಿರಾಟ್ ಕೊಹ್ಲಿಯನ್ನು ಸಚಿನ್ ತೆಂಡುಲ್ಕರ್‌ಗೆ ಹೋಲಿಸುತ್ತಾರೆ. ಕೇವಲ ಶತಕಗಳ ಗಡಿ ದಾಟಿದಾಗ ಇದು ಸೂಕ್ತವೆನಿಸುತ್ತದೆ. ಆದರೆ ವ್ಯಕ್ತಿತ್ವದ ವಿಚಾರ ಬಂದಾಗ ಸಚಿನ್ ಹಾಗೂ ಕೊಹ್ಲಿಯ ಹೋಲಿಕೆ ಸರಿಯಲ್ಲ. ಸಾಧನೆಯ ಜೊತೆಗೆ ಸಮಾಜದ ಸೂಕ್ಷ್ಮಗಳನ್ನು ಅರಿತುಕೊಂಡಿದ್ದಾರೆ ಸಚಿನ್. ಆದರೆ ವಿರಾಟ್ ಕೊಹ್ಲಿ ವಯಸ್ಸು 30 ತಲುಪಿದರೂ ಈಗಲೂ ಟೀನ್ ಸ್ವಭಾವವನ್ನು ಮುಂದುವರಿಸಿದ್ದಾರೆ. ದಿನ ಕಳೆದಂತೆ ನಾವು ಈ ಸಮಾಜವನ್ನು ಅರಿತು ಮುಂದೆ ಸಾಗಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರನ್ನು ಹಿಂಬಾಲಿಸುತ್ತಿದ್ದಾರೆ. ಅನೇಕರ ಪಾಲಿಗೆ ಅವರು ಮಾದರಿ ಕೂಡ ಆಗಿದ್ದಾರೆ. ಇದು ಹೆಮ್ಮೆಯ ಸಂಗತಿ.
ಪತ್ರಿಕಾಗೋಷ್ಠಿಯಲ್ಲಿ ಕುಳಿತಾಗ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಾಗ ನಮಗೆ ಇಷ್ಟವಾಗುವ ಪ್ರಶ್ನೆಗಳನ್ನು ಮಾತ್ರ ಕೇಳುತ್ತಾರೆ ಎಂದು ನಂಬಿಕೊಂಡಿರಬಾರದು. ಅಪ್ಪಟ ಚಿನ್ನವನ್ನೂ ತಿಕ್ಕಿನೋಡುವ ಕಾಲ ಇದು. ತನ್ನ ವೈಯಕ್ತಿಕ ಆ್ಯಪ್ ಬಿಡುಗಡೆಯ ಸಂದರ್ಭದಲ್ಲಿ ಕೊಹ್ಲಿ ಅವರಿಗೆ ಕ್ರಿಕೆಟ್ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆ ಸರಿ ಇಲ್ಲ ಎಂದೇ ತಿಳಿದುಕೊಳ್ಳುವ. ಅದು ಅವರ ಅಭಿವ್ಯಕ್ತಿ ಸ್ವಾತಂತ್ರ, ಆದರೆ ಭಾರತ ಕ್ರಿಕೆಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ, ನೀವು ವಿದೇಶಿ ಆಟಗಾರರನನ್ನು ಇಷ್ಟ ಪಡುವುದಾದದರೆ ಈ ದೇಶದಲ್ಲಿ ಇರುವುದು ಸೂಕ್ತ ಅಲ್ಲ ಎಂದು ಪ್ರತಿಕ್ರಿಯೆ ನೀಡಿರುವುದು ಅವರ ಅಭಿವ್ಯಕ್ತಿ ಸ್ವಾತಂತ್ರದ ಪ್ರಕಾರ ಸರಿ ಎನಿಸಿದರೂ ಒಬ್ಬ ಸಾಮಾಜಿಕ ಜವಾಬ್ದಾರಿ ಇರುವ ವ್ಯಕ್ತಿಯಿಂದ ಬರುವ ಉತ್ತರ ಇದಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪ್ರತ್ರಿಕ್ರಿಯೆ, ವೀಡಿಯೊ, ಚಿತ್ರ ಇವುಗಳಿಗೆ ಬರುವ ಪ್ರತಿಕ್ರಿಯೆ ಖುಷಿಯನ್ನುಂಟು ಮಾಡುತ್ತದೆ. ಅದು ನಮ್ಮ ವೈಯಕ್ತಿಕ ಸಾಮಾಜಿಕ ಸಂಪರ್ಕದ ಪ್ರತಿನಿಧಿ ಇದ್ದಂತೆ. ಆದರೆ ನಾವು ಹೇಳಿದ್ದಕ್ಕೆಲ್ಲ ಒಳ್ಳೆಯ ಪ್ರತಿಕ್ರಿಯೆ ಬರುತ್ತದೆ ಎಂದು ನಿರೀಕ್ಷಿಸುವುದು ಸೂಕ್ತವಲ್ಲ. ಈ ದೇಶ, ಈ ಭೂಮಿ, ಈ ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ಹೋಗಬೇಕು. ಆ ಮಾತು ಬೇರೆ. ವಿರಾಟ್ ಕೊಹ್ಲಿ ಕ್ರಿಕೆಟ್ ಅಭಿಮಾನಿಗೆ ದೇಶ ಬಿಟ್ಟು ಹೋಗಿ ಎಂದು ಹೇಳಿರುವುದು ಅವರಿರುವ ಸ್ಥಾನಕ್ಕೆ ಸೂಕ್ತವಾದುದಲ್ಲ. ಒಬ್ಬ ಕಾಳಜಿ ಇಲ್ಲದ ಸ್ಥಳೀಯ ರಾಜಕೀಯ ಪುಢಾರಿ ನೀಡುವ ಹೇಳಿಕೆಯಂತೆ ಅವರು ಪ್ರತಿಕ್ರಿಯೆ ನೀಡಿರುವುದು ಸೂಕ್ತವಲ್ಲ ಎಂದೆನಿಸುತ್ತದೆ.
ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಹಾಗೂ ಝಹೀರ್ ಖಾನ್ ಕ್ರಿಕೆಟ್ ಅಭಿಮಾನಿ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ತಮ್ಮ ಅಭಿವ್ಯಕ್ತಿ ಸ್ವಾತಂತ್ರವನ್ನು ಪ್ರಕಟಿಸಿದ್ದಾರೆ ಎಂದು ಪರೋಕ್ಷವಾಗಿ ವಿರಾಟ್ ಕೊಹ್ಲಿಯನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ಉದ್ದೇಶ ಬೇರೆಯೇ ಆಗಿರುತ್ತದೆ. ಇಲ್ಲಿ ವಿರಾಟ್ ಕೊಹ್ಲಿಯನ್ನು ವಿರೋಧಿಸಬೇಕು ಎಂದಲ್ಲ. ಬದಲಾಗಿ ಇಂಥ ಮಾಜಿ ಆಟಗಾರರು ವಿರಾಟ್ ಕೊಹ್ಲಿಗೆ ತಿಳಿ ಹೇಳುವ ಕೆಲಸ ಮಾಡಬೇಕು. ವಿರಾಟ್ ಕೊಹ್ಲಿ 19 ವರ್ಷ ವಯೋಮಿತಿಯ ವಿಶ್ವಕಪ್ ಗೆದ್ದು ಬಂದಾಗ ಬೆಂಗಳೂರಿನಲ್ಲಿ ಔತಣ ಕೂಟವೊಂದನ್ನು ಏರ್ಪಡಿಸಲಾಗಿತ್ತು. ಆಗ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ಜಿ.ಆರ್.ವಿಶ್ವನಾಥ್ ಅವರು ಕೊಹ್ಲಿಯ ಆಕ್ರಮಣಕಾರಿ ಬ್ಯಾಟಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ನೀಡಿದ ಉತ್ತರ ಈಗಲೂ ನೆನಪಿನಲ್ಲಿದೆ. ‘‘ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿ ಗುಣ ಉತ್ತಮ, ಆದರೆ ವ್ಯಕ್ತಿತ್ವವನ್ನು ಅದು ಆವರಿಸಬಾರದು’’ ಎಂದು ಎಚ್ಚರಿಸಿದ್ದರು. ಕೊಹ್ಲಿ ಆ ನಂತರ ಹಲವಾರು ಉದ್ಧ್ದಟತನದ ಪ್ರಕರಣಗಳಲ್ಲಿ ಭಾಗಿಯಾದರೂ ಇಂದು ಪರಿಪೂರ್ಣ ಆಟಗಾರನಾಗಿ ರೂಪುಗೊಂಡಿದ್ದಾರೆ.
 ಖ್ಯಾತಿ ಹಾಗೂ ಹಣ ಗಳಿಕೆಯ ಜತೆಯಲ್ಲಿ ಸಾಮಾಜಿಕ ಅರಿವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿರುತ್ತದೆ. ಕೊಹ್ಲಿ ಈ ವಿಚಾರದಲ್ಲಿ ಎಡವಿರುವುದು ಸ್ಪಷ್ಟ. ಮೊದಲು ತಮಗಿಷ್ಟವಾದ ಹೇಳಿಕೆ ನೀಡಿ, ಆ ನಂತರ ಕ್ಷಮೆ ಕೇಳುವುದು ಸಾಮಾನ್ಯವಾಗಿದೆ. ಪಾಕಿಸ್ತಾನದ ವೇಗದ ಬೌಲರ್ ಶುಐಬ್ ಅಖ್ತರ್, ಮುಹಮ್ಮದ್ ಸಮಿ ಅವರನ್ನು ಭಾರತದ ಅನೇಕ ಹಿರಿಯ ಬ್ಯಾಟ್ಸ್‌ಮನ್‌ಗಳು ಹೊಗಳಿದ್ದಾರೆ. ಹಾಗಂತ ಅವರು ದೇಶವನ್ನು ಬಿಟ್ಟು ಹೋಗಬೇಕಾಗುತ್ತದೆಯೇ?. ಸ್ವತಃ ವಿರಾಟ್ ಕೊಹ್ಲಿಯೇ ದಕ್ಷಿಣ ಆಫ್ರಿಕಾದ ಆಟಗಾರ ಹರ್ಷಲ್ ಗಿಬ್ಸ್ ಹಾಗೂ ಜರ್ಮನಿಯ ಟೆನಿಸ್ ತಾರೆ ಏಂಜಲಿಕ್ ಕೆರ್ಬರ್ ಅವರ ಗುಣಗಾನ ಮಾಡಿದ್ದಾರೆ. ಆಗ ಯಾರೂ ನೀವು ಸಚಿನ್ ತೆಂಡುಲ್ಕರ್ ಅಥವಾ ಸಾನಿಯಾ ಮಿರ್ಝಾ ಅವರನ್ನು ಯಾಕೆ ಹೊಗಳಿಲ್ಲ ಎಂದು ಕೇಳಿಲ್ಲ. ಇಂಥ ಸಂದರ್ಭಗಳಲ್ಲಿ ಸಾಮಾಜಿಕ ಅರಿವು ಪ್ರಮುಖ ಪಾತ್ರವಹಿಸುತ್ತದೆ.


ಕೊಹ್ಲಿ ‘‘ಈ ವಿಷಯವನ್ನು ಲಘುವಾಗಿ ತೆಗೆದುಕೊಳ್ಳಿ’’ ಎಂದು ಕ್ಷಮೆ ಕೇಳುವ ರೀತಿಯಲ್ಲಿ ಹೇಳಿದ್ದಾರೆ. ಈ ವಿವಾದಕ್ಕೆ ತೆರೆ ಬಿದ್ದಿರುವುದು ನಿಜ. ಭಾರತದಲ್ಲಿ ಈಗ ದೇಶಭಕ್ತಿ ಉಕ್ಕಿ ಹರಿಯುತ್ತಿದೆ. ಯಾವುದೇ ಮಾತನಾಡಿದರೂ ಅದು ದೇಶಕ್ಕೇ ಸಂಬಂಧಪಡುತ್ತಿದೆ. ಇಲ್ಲಿ ಉದ್ಭವಿಸುವ ಪ್ರಶ್ನೆ ಅಥವಾ ಉತ್ತರ ವಿವಾದಗಳಲ್ಲೇ ಕೊನೆಗೊಳ್ಳುತ್ತಿರುವುದು ಬೇಸರದ ಸಂಗತಿ. ಕ್ರಿಕೆಟ್ ಅಭಿಮಾನಿಗಳು ಕೂಡ ಇಂಥ ಘಟನೆಗಳಿಂದ ಪಾಠ ಕಲಿಯಬೇಕು. ವಿರಾಟ್ ಕೊಹ್ಲಿ ಒಬ್ಬ ಸಾಮಾನ್ಯ ಕ್ರಿಕೆಟಿಗ. ಹಣಕ್ಕಾಗಿ ಆಡುತ್ತಿದ್ದಾರೆಯೇ ಹೊರತು ದೇಶಕ್ಕಾಗಿ ಆಡುತ್ತಿಲ್ಲ. ಆತನೇನು ಗಡಿಯಲ್ಲಿ ನಮ್ಮ ಸೈನಿಕರಂತೆ ದೇಶ ರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದರೆ ಮಾತಿಗೊಂದು ಬೆಲೆ ಇರುತ್ತಿತ್ತು. ಈ ಕ್ರಿಕೆಟ್ ಅಭಿಮಾನಿಗಳೇ ಆತನನ್ನು ಅಷ್ಟು ಮೇಲಕ್ಕೆ ಕೊಂಡೊಯ್ದಿರುವುದು. ಕ್ರಿಕೆಟ್ ಆತನನ್ನು 19ನೇ ವಯಸ್ಸಿನಲ್ಲೇ ಕೋಟ್ಯಧಿಪತಿಯನ್ನಾಗಿ ಮಾಡಿದೆ. ಸರಿಯಾಗಿ ಮಾತು ಕಲಿಯುವುದಕ್ಕೆ ಮೊದಲೇ ಹಣ ಅವರ ಪರವಾಗಿ ಮಾತನಾಡಲಾರಂಭಿಸಿತು. ಕ್ರಿಕೆಟ್ ಅಭಿಮಾನಿ ಕೇಳಿರುವ ಪ್ರಶ್ನೆ ಅದು ಆತನ ನಿಲುವು. ಹಾಗಂತ ವಿರಾಟ್ ಕೊಹ್ಲಿ ಹೇಳಿರುವುದನ್ನು ಆತನ ನಿಲುವೆಂದು ಗಂಭೀರವಾಗಿ ಪರಿಗಣಿಸಹುದೇ? ಇಂಥ ಪ್ರಶ್ನೆ ನಾಳೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದರೆ ದೇಶಬಿಟ್ಟು ಹೋಗುವುದು ಸೂಕ್ತ ಎಂದು ಕೊಹ್ಲಿ ಸೂಚಿಸುತ್ತಾರೆಯೇ?
‘‘ದೇಶಕ್ಕಾಗಿ ಆಡುತ್ತಿದ್ದೇನೆ’’ ಎಂದು ಕ್ರಿಕೆಟಿಗರು ಹೇಳುತ್ತಾರೆ. ಅವರು ಆಡುತ್ತಿರುವುದು ಬಿಸಿಸಿಐಗಾಗಿ. ಅವರು ಸಾಮಾನ್ಯ ಆಟಗಾರರು. ದೇಶಕ್ಕಾಗಿ ಒಲಿಂಪಿಕ್ಸ್ ನಲ್ಲಿ ಆಡಿ ಪದಕ ತಂದವರಲ್ಲ. ವಿರಾಟ್ ಕೊಹ್ಲಿ ಪ್ಯೂಮಾ ಉತ್ಪನ್ನಗಳ ಪ್ರಚಾರಕ್ಕಾಗಿ ಹಣ ಪಡೆಯುತ್ತಾರೆ. ಆಡಿ ಕಾರನ್ನು ಬಳಸುತ್ತಾರೆ. ನಮ್ಮ ಮಹೀಂದ್ರಾ ಕಾರುಗಳನ್ನು ಏಕೆ ಬಳಸಬಾರದು? ಎಂದು ಸಾಮಾನ್ಯ ಪ್ರಜೆಯೊಬ್ಬರು ಕೇಳಿದರೆ ಅಚ್ಚರಿ ಪಡಬೇಕಾಗಿಲ್ಲ. ದೇಶ ಬಿಟ್ಟು ಹೋಗಿ ಎಂದು ಚುನಾವಣೆ ಸಂದರ್ಭಗಳಲ್ಲಿ ಅನೇಕ ದೇಶಭಕ್ತರು ಆದೇಶ ನೀಡಿರುವುದನ್ನು ಕೇಳಿದ್ದೇವೆ. ಆದರೆ ವಿರಾಟ್ ಕೊಹ್ಲಿ ಅಂಥವರಿಂದ ಈ ಮಾತು ಬರುತ್ತದೆ ಎಂದರೆ ನಾವೆತ್ತ ಸಾಗುತ್ತಿದ್ದೇವೆ ಎಂಬುದು ಸ್ಪಷ್ಟವಾಗುತ್ತಿದೆ.
ಕ್ರಿಕೆಟ್ ಪಿಚ್‌ನಲ್ಲಿ ಎಲ್ಲ ರೀತಿಯ ಎಸೆತಗಳೂ ಬರುತ್ತವೆ. ಹೊಡೆಯುವ ಅಗತ್ಯ ಇಲ್ಲದ ಚೆಂಡುಗಳನ್ನು ಹಾಗೆಯೇ ಬಿಟ್ಟಾಗ ಅದು ವಿಕೆಟ್ ಕೀಪರ್ ಕೈ ಸೇರುತ್ತದೆ. ಅತ್ಯುತ್ತಮವಾದ ಎಸೆತಗಳನ್ನು ರಕ್ಷಣಾತ್ಮಕವಾಗಿ ಆಡುವ ಮೂಲಕ ಎದುರಾಳಿ ಬೌಲರ್‌ಗೆ ಗೌರವ ನೀಡುತ್ತೇವೆ. ಅತ್ಯಂತ ಕಳಪೆ ಮಟ್ಟದ ಚೆಂಡುಗಳನ್ನು ಸುಲಭವಾಗಿ ಹೊಡೆಯುತ್ತೇವೆ. ಅನಿವಾರ್ಯತೆ ಇದ್ದಾಗ ಉತ್ತಮ ಎಸೆತಗಳಿಂದಲೂ ಬೌಂಡರಿ ಸಿಕ್ಸರ್ ಸಿಡಿಸಲಾಗುತ್ತದೆ. ವಿರಾಟ್ ಕೊಹ್ಲಿ ಕ್ರಿಕೆಟ್ ಅಭಿಮಾನಿಯೊಬ್ಬರ ಬೌನ್ಸರ್ ಎಸೆತವನ್ನು ಹಾಗೆಯೇ ಬಿಡುತ್ತಿದ್ದರೆ ಅವರು ಶ್ರೇಷ್ಠರೆನಿಸಿಕೊಳ್ಳುತ್ತಿದ್ದರು. ಆದರೆ ಅತ್ಯಂತ ಕಳಪೆ ಹೊಡೆತ ಪ್ರದರ್ಶಿಸಿ ಟೀಕೆಗೆ ಗುರಿಯಾದರು. ಹಣ ಗಳಿಕೆಯ ಜತೆಯಲ್ಲಿ ಸಾಮಾಜಿಕ ಅರಿವನ್ನು ಬೆಳೆಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅದನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಹೇಳಿಕೊಡಲಾರರು. ಅದಕ್ಕೆ ಬದುಕಿನ ಅನುಭವ ಬೇಕಾಗುತ್ತದೆ. ಕೊಹ್ಲಿಗೆ ಸದ್ಯ ಸಾಮಾಜಿಕ ಕಾಳಜಿಯ ಅಗತ್ಯವಿದೆ.

Writer - ಸೋಮಶೇಖರ ಪಡುಕರೆ

contributor

Editor - ಸೋಮಶೇಖರ ಪಡುಕರೆ

contributor

Similar News