ಸೆಲ್ಫಿಗಳಿಗೆ ಪ್ರಶಸ್ತ ತಾಣವಾಗಿರುವ ಹನೋಯಿಯ ವಸಾಹತುಶಾಹಿ ಯುಗದ ರೈಲ್ವೆ ಮಾರ್ಗ

Update: 2018-11-11 11:04 GMT

ವಿಯೆಟ್ನಾಮ್‌ನ ಹನೋಯಿ ನಗರದ ಜನನಿಬಿಡ ಓಲ್ಡ್ ಕ್ವಾರ್ಟರ್ ಪ್ರದೇಶದಲ್ಲಿರುವ,ಹಿಂದಿನ ಫ್ರೆಂಚ್ ಆಡಳಿತದ ಸಂದರ್ಭದಲ್ಲಿ ನಿರ್ಮಾಣಗೊಂಡಿದ್ದ ರೈಲ್ವೆ ಮಾರ್ಗವು ಪರಿಪೂರ್ಣ ಇನ್‌ಸ್ಟಾಗ್ರಾಂ ಸೆಲ್ಫಿಗಳನ್ನು ಬಯಸುವ ಪ್ರವಾಸಿಗಳ ಪಾಲಿಗೆ ಆದರ್ಶ ತಾಣವಾಗಿದೆ,ಜೊತೆಗೆ ಅಕ್ಕಪಕ್ಕಗಳಲ್ಲಿರುವ ಕೆಫೆ ಮತ್ತು ಬಾರ್‌ಗಳಿಗೆ ತಮ್ಮ ಅತಿಥಿಗಳಿಗೆ ಬಿಸಿಬಿಸಿಯಾದ ಕಾಫಿ ಮತ್ತು ತಂಪು ಬಿಯರ್ ಒದಗಿಸಲೂ ಅನುಕೂಲ ಕಲ್ಪಿಸಿದೆ.

ಕೈ ಚಾಚಿದರೆ ಸಿಗುವ ಕಟ್ಟಡಗಳ ನಡುವಿನಿಂದ ಹಾದು ಹೋಗಿರುವ ರೈಲ್ವೆ ಮಾರ್ಗ ರಮಣೀಯವಾಗಿದ್ದರೂ ಅಪಾಯಗಳೂ ಇಲ್ಲಿವೆ. ಇಲ್ಲಿಯ ಹಳಿಗಳು ಇನ್ನೂ ಬಳಕೆಯಲ್ಲಿದ್ದು,ಇಕ್ಕಟ್ಟಾದ ಓಣಿಯ ನಡುವೆ ರೈಲು ಹಾದುಹೋಗುವಾಗ ಪ್ರವಾಸಿಗಳು ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಆದರೆ ಹೆಚ್ಚಿನವರಿಗೆ ತಮ್ಮ ಸಮೀಪದಿಂದಲೇ ರೈಲು ಹಾದು ಹೋಗುವುದೂ ರೋಮಾಂಚನವನ್ನುಂಟು ಮಾಡುತ್ತದೆ.

 ಫ್ರಾನ್ಸ್‌ನ ವಸಾಹತುಶಾಹಿ ಆಡಳಿಗಾರರು ಲಾವೋಸ್ ಮತ್ತು ಕಾಂಬೋಡಿಯಾದ ಜೊತೆಗೆ ಇಂಡೋಚೀನಾದ ಭಾಗವಾಗಿದ್ದ ವಿಯೆಟ್ನಾಮ್‌ನಾದ್ಯಂತ ಜನರು ಮತ್ತು ಸರಕುಗಳನ್ನು ಸಾಗಿಸಲು ಮೊದಲು ರೈಲ್ವೆಮಾರ್ಗವನ್ನು ನಿರ್ಮಿಸಿದ್ದರು. ವಿಯೆಟ್ನಾಮ್ ಯುದ್ಧದ ವೇಳೆ ಕಮ್ಯುನಿಸ್ಟ್ ಆಡಳಿತದ ಉತ್ತರ ವಿಯೆಟ್ನಾಮ್‌ನ ಮೇಲೆ ಅಮೆರಿಕವು ನಡೆಸಿದ್ದ ಬಾಂಬ್ ದಾಳಿಗಳಿಂದಾಗಿ ರೈಲ್ವೆ ಮಾರ್ಗವು ಅನೇಕ ಕಡೆಗಳಲ್ಲಿ ಹಾನಿಗೀಡಾಗಿತ್ತು.

ಇಂದು ಮೂಲ ಮೀಟರ್‌ಗೇಜ್ ಮಾರ್ಗಗಳು ಈಗಲೂ ಅಗ್ಗದ ಬೆಲೆಗಳಲ್ಲಿ ಪ್ರಯಾಣವನ್ನು ಬಯಸುವ ಪ್ರವಾಸಿಗಳಿಗೆ ಆಯ್ಕೆಯ ಸಂಚಾರ ವಿಧಾನವಾಗಿವೆ.

ಕಳೆದ ಕೆಲವು ವರ್ಷಗಳಿಂದ ಈ ರೈಲ್ವೆ ಹಳಿಗಳು ವಿಯೆಟ್ನಾಮ್‌ಗೆ ಬರುವ ಪ್ರವಾಸಿಗಳ ಪಾಲಿಗೆ ಆಕರ್ಷಣೆಯ ತಾಣವಾಗಿದ್ದು,ಇಲ್ಲಿ ಸೆಲ್ಫಿ ತೆಗೆದುಕೊಳ್ಳಲೆಂದೇ ಹೆಚ್ಚಿನವರು ಬರುತ್ತಿದ್ದಾರೆ.

ಎರಡೂ ಕಡೆಗಳಲ್ಲಿ ಮನೆಗಳು ಮತು ಕೆಫೆಗಳಿರುವ ಈ ರೈಲ್ವೆ ಹಳಿಗಳು ಉದಯೋನ್ಮುಖ ಪ್ರವಾಸಿ ಫೋಟೊಗ್ರಾಫರ್‌ಗಳಿಗೆ ಅತ್ಯುತ್ತಮ ದೃಶ್ಯಗಳನ್ನು, ಜೊತೆಗೆ ಇಲ್ಲಿಯ ಕೆಫೆಗಳಿಗೆ ಸಾಕಷ್ಟು ವ್ಯಾಪಾರವನ್ನು ಒದಗಿಸುತ್ತಿವೆ.

ಈ ರೈಲ್ವೆಹಳಿಗಳಲ್ಲಿ ಹಾಯಾಗಿ ಕುಳಿತುಕೊಂಡು ಚೆಸ್ ಆಡುವುದು,ಪುಸ್ತಕಗಳನ್ನು ಓದುವುದು,ವಿಶ್ರಾಂತಿ ಪಡೆಯುವುದು,ಕಾಫಿ-ಬಿಯರ್ ಹೀರುವುದು ಇತ್ಯಾದಿ ಚಟುವಟಿಕೆಗಳಲ್ಲಿ ಮಗ್ನರಾಗಿರುವವರು ರೈಲು ಬರುತ್ತಿರುವ ಸೂಚನೆ ಲಭಿಸಿದ ಕೂಡಲೇ ಹಳಿಗಳನ್ನು ತೆರವುಗೊಳಿಸಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ರೈಲಿನ ದೃಶ್ಯವನ್ನು ಸೆರೆಹಿಡಿಯುವುರಲ್ಲಿ ವ್ಯಸ್ತರಾಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News