ನೀವು ದಿನಕ್ಕೆ ಕನಿಷ್ಠ 10 ನಿಮಿಷವಾದರೂ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳಬೇಕು ಎನ್ನುವುದಕ್ಕೆ ಕಾರಣ ಗೊತ್ತೇ?

Update: 2018-11-11 12:45 GMT

ಹೆಚ್ಚಿನವರು ಸಾಧ್ಯವಾದಷ್ಟು ಮಟ್ಟಿಗೆ ಸೂರ್ಯನ ಬಿಸಿಲಿನಿಂದ ತಪ್ಪಿಸಿಕೊಳ್ಳುತ್ತಿರುತ್ತಾರೆ. ಸೂರ್ಯನ ಕಿರಣಗಳು ಆರೋಗ್ಯಕ್ಕೆ ಹಾನಿಕರ ಎನ್ನುವ ಮಾತನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಸೂರ್ಯನ ಬಿಸಿಲು ಅನೇಕ ಆರೋಗ್ಯಲಾಭಗಳನ್ನೂ ನೀಡುತ್ತದೆ, ಹೀಗಾಗಿ ನೀವು ದಿನಕ್ಕೆ ಕನಿಷ್ಠ 10 ನಿಮಿಷಗಳ ಕಾಲವಾದರೂ ಬಿಸಿಲಿಗೆ ಶರೀರವನ್ನು ಒಡ್ಡಿಕೊಳ್ಳಲೇಬೇಕು.

ನೀವು ದಿನಕ್ಕೆ ಕನಿಷ್ಠ ಹತ್ತು ನಿಮಿಷವಾದರೂ ಬಿಸಿಲಿಗೆ ಒಡ್ಡಿಕೊಳ್ಳಬೇಕು ಎನ್ನುವುದಕ್ಕೆ ಕಾರಣಗಳಿಲ್ಲಿವೆ.

ಡಿ ವಿಟಾಮಿನ್‌ನ ಅತ್ಯುತ್ತಮ ಮೂಲ

ಡಿ ವಿಟಾಮಿನ್‌ನ ನೈಸರ್ಗಿಕ ಮೂಲಗಳನ್ನು ಕಂಡುಕೊಳ್ಳುವುದು ಕಷ್ಟ. ಸೂರ್ಯನ ಬಿಸಿಲು ಡಿ ವಿಟಾಮಿನ್‌ನ ಅತ್ಯುತ್ತಮ ಮೂಲ ಎಂದು ಪರಿಗಣಿಸಲಾಗಿದೆ. ಅದು ಹಲವಾರು ವಿಧಗಳಲ್ಲಿ ನಮಗೆ ಆರೋಗ್ಯಲಾಭಗಳನ್ನು ನೀಡುತ್ತದೆ. ನಮ್ಮ ಚರ್ಮ ಬಿಸಿಲಿಗೆ ಒಡ್ಡಿಕೊಂಡಾಗ ಅದು ಕೊಲೆಸ್ಟ್ರಾಲ್‌ನಿಂದ ಡಿ ವಿಟಾಮಿನ್‌ನ್ನು ತಯಾರಿಸುತ್ತದೆ. ಕಾಡ್‌ಲಿವರ್ ಆಯಿಲ್,ಸಾಲ್ಮನ್ ಮೀನು ಮತ್ತು ಮೊಟ್ಟೆಯ ಹಳದಿ ಭಾಗ ಇವು ಡಿ ವಿಟಾಮಿನ್‌ನ ಕೆಲವು ಮೂಲಗಳಾಗಿವೆ. ಆದರೆ ಇವುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಈ ವಿಟಾಮಿನ್ ಪಡೆಯಲು ಸೂರ್ಯನ ಬಿಸಿಲು ಹೆಚ್ಚು ಪರಿಣಾಮಕಾರಿ ಮಾರ್ಗವಾಗಿದೆ.

ರಕ್ತದೊತ್ತಡವನ್ನು ತಗ್ಗಿಸುತ್ತದೆ

ನಾವು ಸೂರ್ಯನ ಬಿಸಲಿಗೆ ಒಡ್ಡಿಕೊಂಡಾಗ ನಮ್ಮ ಚರ್ಮವು ನೈಟ್ರಿಕ್ ಆಕ್ಸೈಡ್‌ನ್ನು ಬಿಡುಗಡೆಗೊಳಿಸುತ್ತದೆ ಮತ್ತು ಇದು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು ಹೆಚ್ಚಿನ ರಕ್ತದೊತ್ತಡವನ್ನು ಹೊಂದಿದ್ದರೆ ಕನಿಷ್ಠ 15 ನಿಮಿಷಗಳ ಕಾಲ ಬಿಸಿಲಿಗೆ ಒಡ್ಡಿಕೊಂಡರೆ ಗಮನಾರ್ಹ ಸುಧಾರಣೆ ಕಂಡುಬರುತ್ತದೆ.

ಒಳ್ಳೆಯ ನಿದ್ರೆಯನ್ನು ನೀಡುತ್ತದೆ

ನೀವು ನಿದ್ರೆಯಿಂದ ವಂಚಿತರಾಗಿದ್ದರೆ ಕೆಲವು ನಿಮಿಷಗಳ ಕಾಲ ಬಿಸಿಲಿಗೆ ಒಡ್ಡಿಕೊಳ್ಳುವ ಮೂಲಕ ಆ ಸಮಸ್ಯೆಯಿಂದ ಪಾರಾಗಬಹುದು. ಅದು ಸಹಜ ಜೈವಿಕ ಚಕ್ರೀಯ ಆವರ್ತನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಮತ್ತು ಒಳ್ಳೆಯ ನಿದ್ರೆಯನ್ನು ನೀಡುತ್ತದೆ. ಪ್ರಖರ ಬಿಸಿಲು ದಿನದ ಆರಂಭವನ್ನು ಉತ್ತಮಗೊಳಿಸುತ್ತದೆ ಮತ್ತು ದಿನವಿಡೀ ಶಕ್ತಿಯನ್ನು ನೀಡುತ್ತದೆ.

ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ

ಸೂರ್ಯನ ಬಿಸಲಿಗೆ ಒಡ್ಡಿಕೊಳ್ಳುವುದರಿಂದ ಶರೀರದಲ್ಲಿ ಸಿರೊಟೋನಿನ್ ಮಟ್ಟವು ಹೆಚ್ಚುತ್ತದೆ ಮತ್ತು ಇದು ನಮ್ಮನ್ನು ಉತ್ಸಾಹಿ ಮತ್ತು ಕ್ರಿಯಾಶೀಲರನ್ನಾಗಿಸುತ್ತದೆ. ಸಿರೊಟೋನಿನ್ ಮಟ್ಟವು ಕಡಿಮೆಯಾದರೆ ಅದು ಖಿನ್ನತೆಗೆ ಕಾರಣವಾಗಬಲ್ಲದು. ಸೂರ್ಯನ ಬಿಸಿಲು ನಮ್ಮ ಕಣ್ಣುಗಳನ್ನು ಪ್ರವೇಶಿಸಿದಾಗ ರೆಟಿನಾದ ಒಂದು ಭಾಗವು ಸಿರೊಟೋನಿನ್‌ನ್ನು ಬಿಡುಗಡೆಗೊಳಿಸುತ್ತದೆ.

ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ತಗ್ಗಿಸುತ್ತದೆ

ಸೂರ್ಯನ ಬಿಸಿಲು ಕೆಲವು ಕ್ಯಾನರ್‌ಗಳ ಅಪಾಯವನ್ನು ತಗ್ಗಿಸಲು ನೆರವಾಗುತ್ತದೆ. ವಿಟಾಮಿನ್ ಡಿ ಕೊರತೆಯು ಸ್ತನ ಮತ್ತು ಕರುಳಿನ ಕ್ಯಾನ್ಸರ್‌ನಂತಹ ವಿವಿಧ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ. ಸೂರ್ಯನ ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳದವರು ಕೆಲವು ಬಗೆಯ ಕ್ಯಾನ್ಸರಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಡಿ ವಿಟಾಮಿನ್‌ನ ಅತ್ಯುತ್ತಮ ಮೂಲವಾಗಿರುವ ಸೂರ್ಯನ ಬಿಸಿಲು ಕ್ಯಾನ್ಸರ್ ಅಪಾಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 ಆದರೆ ಸೂರ್ಯನ ಬಿಸಿಲಿಗೆ ಅತಿಯಾಗಿ ಒಡ್ಡಿಕೊಳ್ಳ್ಳುವುದು ಹಾನಿಕಾರಕವಾಗಿದೆ. ಅದು ಚರ್ಮದ ಕ್ಯಾನ್ಸರ್ ಮತ್ತು ಚರ್ಮದ ಅಲರ್ಜಿಗಳಿಗೆ ಕಾರಣವಾಗಬಹುದು. ಹೀಗಾಗಿ ಸಂಕ್ಷಿಪ ಅವಧಿಗೆ ಮಾತ್ರ ಬಿಸಿಲಿಗೆ ನಮ್ಮನ್ನು ಒಡ್ಡಿಕೊಳ್ಳಬೇಕು. ಸೂರ್ಯನ ಬಿಸಿಲಿನಲ್ಲಿ ಹೆಚ್ಚು ಕಾಲವಿರಬೇಕಾದ ಅನಿವಾರ್ಯತೆಯಿದ್ದರೆ ಅದರ ದುಷ್ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಸೂಕ್ತ ಲೋಶನ್‌ಗಳನ್ನು ಬಳಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News