ಸರಕಾರಿ ಉದ್ಯೋಗಿಗಳು ಆರೆಸ್ಸೆಸ್ ಶಾಖೆಯಲ್ಲಿ ಪಾಲ್ಗೊಳ್ಳುವುದಕ್ಕೆ ನಿಷೇಧ: ಮಧ್ಯಪ್ರದೇಶ ಕಾಂಗ್ರೆಸ್ ಪ್ರಣಾಳಿಕೆ

Update: 2018-11-11 13:49 GMT

ಭೋಪಾಲ್, ನ.11: ಮಧ್ಯಪ್ರದೇಶದಲ್ಲಿ ಆರೆಸ್ಸೆಸ್‌ನ ಕಾರ್ಯಕ್ರಮಗಳಲ್ಲಿ ಸರಕಾರಿ ಉದ್ಯೋಗಿಗಳು ಪಾಲ್ಗೊಳ್ಳಲು ಅವಕಾಶ ನೀಡಿರುವ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಆದೇಶವನ್ನು ರದ್ದುಪಡಿಸುವುದಾಗಿ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಸರಕಾರಿ ಕಟ್ಟಡದ ಆವರಣದಲ್ಲಿ ಆರೆಸ್ಸೆಸ್ ಶಾಖೆಗಳನ್ನು ನಡೆಸಲು ಬಿಡುವುದಿಲ್ಲ ಮತ್ತು ಸರಕಾರಿ ಉದ್ಯೋಗಿಗಳು ಶಾಖೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಸರಕಾರದ ಆದೇಶವನ್ನು ರದ್ದುಪಡಿಸುವುದಾಗಿ ತಿಳಿಸಲಾಗಿದೆ.

ಆರೆಸ್ಸೆಸ್ ಒಂದು ರಾಜಕೀಯ ಸಂಘಟನೆಯಾಗಿದೆ. ಸರಕಾರಿ ಉದ್ಯೋಗಿಗಳು ರಾಜಕೀಯ ಸಂಘಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ಆದ್ದರಿಂದ ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ನಿಲುವು ಸರಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

ಕಾಂಗ್ರೆಸ್ ನಿಲುವನ್ನು ಟೀಕಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಇಂದಿನ ದಿನಗಳಲ್ಲಿ ಕಾಂಗ್ರೆಸ್, ಮಂದಿರ ನಿರ್ಮಿಸಲು ಮತ್ತು ಆರೆಸ್ಸೆಸ್ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ ಎಂಬ ಏಕೈಕ ಧ್ಯೇಯವನ್ನು ಹೊಂದಿದೆ ಎಂದಿದ್ದಾರೆ. ಆರೆಸ್ಸೆಸ್ ಕಾರ್ಯಕ್ರಮ(ಶಾಖೆ)ಗಳಲ್ಲಿ ಸರಕಾರಿ ಉದ್ಯೋಗಿಗಳು ಪಾಲ್ಗೊಳ್ಳುವುದಕ್ಕೆ 1981ರಲ್ಲಿ ಕಾಂಗ್ರೆಸ್ ನಿಷೇಧ ಹೇರಿತ್ತು ಹಾಗೂ 2000ರಲ್ಲಿ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಈ ಆದೇಶವನ್ನು ಪರಿಷ್ಕರಿಸಲಾಗಿತ್ತು. 2006ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಿಷೇಧವನ್ನು ತೆರವುಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News