ಇದುವರೆಗೂ ಬಂಧನವಿಲ್ಲ, ಛತ್ ಪೂಜೆ ಬಳಿಕ ತನಿಖೆ ನಡೆಸುತ್ತೇವೆ ಎಂದ ಪೊಲೀಸರು !

Update: 2018-11-11 14:31 GMT

ಪಾಟ್ನ, ನ.11: ಗುಂಪು ಹಲ್ಲೆಯಿಂದ ನಡೆದಿರುವ ಹತ್ಯೆ ಪ್ರಕರಣದ ತನಿಖೆಯನ್ನು ‘ಛತ್ ಪೂಜೆ’ಯ ಬಳಿಕ ಮುಂದುವರಿಸಲು ನಿರ್ಧರಿಸಿರುವುದಾಗಿ ಬಿಹಾರ ಪೊಲೀಸರು ತಿಳಿಸಿದ್ದಾರೆ.

ಧಾರ್ಮಿಕ ಆಚರಣೆ ಯಾವುದೇ ತಡೆಯಿಲ್ಲದೆ ನಡೆಯಬೇಕು ಎಂಬ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪೊಲೀಸ್ ಅಧೀಕ್ಷಕ ವಿಕಾಸ್ ಬರ್ಮನ್ ತಿಳಿಸಿದ್ದಾರೆ. ಅಕ್ಟೋಬರ್ 20ರಂದು 82 ವರ್ಷದ ಝೈನುಲ್ ಅನ್ಸಾರಿ ಎಂಬವರ ಸುಟ್ಟುಹೋದ ದೇಹ ಬಿಹಾರದ ಸೀತಾಮಡಿ ಎಂಬಲ್ಲಿ ಪತ್ತೆಯಾಗಿತ್ತು. ಅನ್ಸಾರಿಯವರನ್ನು ಹತ್ಯೆ ಮಾಡಿರುವ ಘಟನೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು ಇದುವರೆಗೆ ಆರೋಪಿಗಳನ್ನು ಪತ್ತೆಹಚ್ಚಲು ಶಕ್ತರಾಗಿಲ್ಲ. ಅನ್ಸಾರಿ ಮೃತದೇಹ ಪತ್ತೆಯಾದ ದಿನದ ಹಿಂದಿನ ದಿನವಾದ ಅಕ್ಟೋಬರ್ 19ರಂದು ಈ ಪ್ರದೇಶದಲ್ಲಿ ಗುಂಪೊಂದು ಹಿಂಸಾಚಾರದಲ್ಲಿ ತೊಡಗಿದ್ದು ಎರಡು ಗುಂಪುಗಳ ಮಧ್ಯೆ ಘರ್ಷಣೆ ಭುಗಿಲೆದ್ದಿತ್ತು.

ಅನ್ಸಾರಿ ಕೊಲೆ ಮಾಡಿರುವ ಘಟನೆಯ ವೀಡಿಯೊ ದೃಶ್ಯಾವಳಿ ಲಭ್ಯವಿದೆ ಎನ್ನಲಾಗುತ್ತಿದ್ದರೂ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅನ್ಸಾರಿಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News