ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿ ಹೊಣೆಗಾರಿಕೆಯಿಂದ ವರ್ತಿಸುತ್ತಿಲ್ಲ: ಭಾರತದ ಆಕ್ರೋಶ

Update: 2018-11-11 17:10 GMT

  ವಿಶ್ವಸಂಸ್ಥೆ, ನ.11: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಯು, ಉಗ್ರಗಾಮಿಗಳ ವಿರುದ್ಧ ನಿರ್ಬಂಧಗಳನ್ನು ಹೇರಬೇಕೆಂಬ ತನ್ನ ಬೇಡಿಕೆಯನ್ನು ಮಾನ್ಯ ಮಾಡದೆ ಇರುವುದಕ್ಕೆ ಯಾವುದೇ ಕಾರಣ ನೀಡುತ್ತಿಲ್ಲ ಹಾಗೂ ಅದು ಅಪಾರದರ್ಶಕವಾಗಿದೆ ಮತ್ತು ಉತ್ತರದಾಯಿತ್ವದ ಕೊರತೆಯನ್ನು ಹೊಂದಿದೆ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ.

  ‘ಬಹುಪಕ್ಷೀಯತೆಯನ್ನು ಬಲಪಡಿಸುವಲ್ಲಿ ವಿಶ್ವಸಂಸ್ಥೆಯ ಪಾತ್ರ’ ಎಂಬ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶನಿವಾರ ನಡೆದ ಚರ್ಚಾ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

   ಪಾಕ್ ಮೂಲದ ಉಗ್ರಗಾಮಿ ಸಂಘಟನೆ ಜೆಇಎಂ ವರಿಷ್ಠ ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಹೊಸದಿಲ್ಲಿಯ ಪ್ರಯತ್ನಕ್ಕೆ ಅಡ್ಡಗಾಲು ಹಾಕುತ್ತಿರುವ ಚೀನಾದ ನಿಲುವನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಾ, ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

   ‘‘ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಯು ವಿಶ್ವಸಂಸ್ಥೆಯ ಇಡೀ ಸದಸ್ಯರಾಷ್ಟ್ರಗಳ ಬಗ್ಗೆ ತೋರಿಕೆಯ ವರ್ತನೆಯನ್ನು ಪ್ರದರ್ಶಿಸುತ್ತಿವೆ.ಅದರ ಯಾವುದೇ 15 ವಿಟೋ ಸದಸ್ಯರ ಪೈಕಿ ನಕಾರಾತ್ಮಕ ಮತವನ್ನು ಚಲಾಯಿಸಿರುವ ಕಾರಣ ತಮಗೆ ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ವಿರುದ್ಧ ನಿರ್ಬಂಧವನ್ನು ಹೇರಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಉಳಿದ ಸದಸ್ಯ ರಾಷ್ಟ್ರಗಳಿಗೆ ಮಾಹಿತಿಯನ್ನು ಕೂಡಾ ನೀಡುತ್ತಿಲ್ಲ ಎಂದು ಅಕ್ಬರುದ್ದೀನ್ ಹೇಳಿದರು.

  ತನ್ನ ಭಾಷಣದಲ್ಲಿ ಅವರು ಯಾವುದೇ ದೇಶದ ಪ್ರಸ್ತಾಪವನ್ನು ಮಾಡದಿದ್ದರೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಹಾಗೂ ವಿಟೋ ಚಲಾಯಿಸುವ ಹಕ್ಕು ಹೊಂದಿರುವ ಚೀನಾವು, ಜೆಇಎಂ ಮುಖ್ಯಸ್ಥ ಮುಹಮ್ಮದ್ ಅಝರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆಗೊಳಿಸುವ ಭಾರತದ ಪ್ರಯತ್ನಕ್ಕೆ ತಡೆಯೊಡ್ಡುತ್ತಿರುವುದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. ಅಝರ್ ಸ್ಥಾಪಕನಾಗಿರುವ ಜೆಇಎಂ ಸಂಘಟನೆಯು ಈಗಾಗಲೇ ಅಮೆರಿಕವು ನಿಷೇಧಿಸಿರುವ ಉಗ್ರಗಾಮಿಗಳ ಪಟ್ಟಿಯಲ್ಲಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕಾರ್ಯನಿರ್ವಹಣೆ, ವಿಶ್ವಸನೀಯತೆ, ಸಿಂಧುತ್ವ ಹಾಗೂ ಪ್ರಸ್ತುತತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆಯೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News