ಎದೆ ನೋಯುತ್ತಿದೆಯೇ, ಮೂತ್ರವಿಸರ್ಜನೆ ಕಡಿಮೆಯಾಗಿದೆಯೇ? ಜಾಗ್ರತೆ, ಅದು ನ್ಯುಮೋನಿಯಾದ ಮಾರಣಾಂತಿಕ ರೂಪವಾಗಿರಬಹುದು

Update: 2018-11-12 10:45 GMT

ನ್ಯುಮೋನಿಯಾ ಒಂದು ಅಥವಾ ಎರಡೂ ಶ್ವಾಸಕೋಶಗಳು ಸೋಂಕಿಗೊಳಗಾಗಿರುವ ಸ್ಥಿತಿಯಾಗಿದೆ. ಎಲ್ಲ ವಯೋಗುಂಪಿನವರನ್ನೂ ಕಾಡುವ ಇದೊಂದು ಸಾಮಾನ್ಯ ಅನಾರೋಗ್ಯ ಸ್ಥಿತಿಯಾಗಿದ್ದು,ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಹಾಗೂ ಶಿಲೀಂಧ್ರ ಸೋಂಕುಗಳು ಇದಕ್ಕೆ ಕಾರಣವಾಗುತ್ತವೆ. ರಾಸಾಯನಿಕಗಳು ಮತ್ತು ಅನಿಲಗಳಿಗೆ ಒಡ್ಡಿಕೊಳ್ಳುವುದು ಹಾಗೂ ವಿವಿಧ ಚಿಕಿತ್ಸೆಗಳಿಂದ ಉಂಟಾಗುವ ವಿಕಿರಣ ಈ ರೋಗವನ್ನು ಆಹ್ವಾನಿಸುವ ಇತರ ಕಾರಣಗಳಲ್ಲಿ ಸೇರಿವೆ.

ಯಾರಿಗೆ ಅಪಾಯ?

ನ್ಯುಮೋನಿಯಾ ವರ್ಷದ ಯಾವುದೇ ಸಮಯದಲ್ಲಿ ಯಾರನ್ನೂ ಬಾಧಿಸಬಹುದು. ಆದರೆ ಎರಡು ವರ್ಷ ಪ್ರಾಯಕ್ಕಿಂತ ಸಣ್ಣ ಮಕ್ಕಳು ಮತ್ತು 65 ವರ್ಷ ಮೀರಿದ ಹಿರಿಯರಲ್ಲಿ ಈ ಸೋಂಕಿನ ಅಪಾಯ ಮತ್ತು ತೀವ್ರತೆಯ ಸಾಧ್ಯತೆ ಹೆಚ್ಚಾಗಿರುತ್ತದೆ. ಸಿಒಪಿಡಿ ಮತ್ತು ಅಸ್ತಮಾದಂತಹ ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಗಳಿಂದ ಬಳಲುತ್ತಿರುವವರು,ಧೂಮ್ರಪಾನಿಗಳು,ಮಧುಮೇಹಿಗಳು ಮತ್ತು ದೀರ್ಘಕಾಲೀನ ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಗಳನ್ನು ಹೊಂದಿರುವವರು ತೀವ್ರ ನ್ಯುಮೋನಿಯಾಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

►ಲಕ್ಷಣಗಳು

ನ್ಯುಮೋನಿಯಾದ ಲಕ್ಷಣಗಳು ಅದರ ತೀವ್ರತೆ ಮತ್ತು ರೋಗಿಯ ವಯಸ್ಸನ್ನು ಅವಲಂಬಿಸಿರುತ್ತವೆ. ಹಳದಿ,ಹಸಿರು ಅಥವಾ ತುಕ್ಕಿನ ಬಣ್ಣದ ಕಫ,ಚಳಿಯಿಂದ ಕೂಡಿದ ಸಾಮಾನ್ಯದಿಂದ ತೀವ್ರ ಜ್ವರ ಈ ರೋಗದ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ.

ಹಿರಿಯರಲ್ಲಿ ಅವರ ದುರ್ಬಲ ರೋಗ ನಿರೋಧಕ ಶಕ್ತಿಯಿಂದಾಗಿ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ದೇಹದ ತಾಪಮಾನ ಮತ್ತು ಆಳವಾದ ಉಸಿರಾಟದಿಂದಾಗಿ ಸೋಂಕುಪೀಡಿತ ಎದೆಯ ಭಾಗದಲ್ಲಿ ನೋವಿನ ಮೂಲಕ ನ್ಯುಮೋನಿಯಾ ತನ್ನ ಅಸ್ತಿತ್ವವನ್ನು ಪ್ರಕಟಿಸುತ್ತದೆ. ಇದರೊಂದಿಗೆ ಉಸಿರಾಟ ವೇಗವಾಗಿದ್ದು,ಮೂತ್ರ ವಿಸರ್ಜನೆಯ ಪ್ರಮಾಣ ಕಡಿಮೆಯಾಗುತ್ತದೆ. ಆಮ್ಲಜನಕದ ಕೊರತೆಯಿಂದಾಗಿ ವ್ಯಕ್ತಿಯ ಶರೀರವು ನೀಲಿಬಣ್ಣಕ್ಕೂ ತಿರುಗಬಹುದು. ನ್ಯುಮೋನಿಯಾ ಕ್ರಮೇಣ ಉಸಿರಾಟ ವ್ಯವಸ್ಥೆ ಅಥವಾ ಮೂತ್ರಪಿಂಡ ವೈಫಲ್ಯ,ಶ್ವಾಸಕೋಶಗಳ ಸುತ್ತ ಕೀವು ಉಂಟಾಗುವುದು ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುವ ಮೂಲಕ ಸಾವನ್ನು ತರುತ್ತದೆ.

►ರೋಗ ನಿರ್ಧಾರ

ಆರಂಭಿಕ ಹಂತದಲ್ಲಿ ಚಿಕಿತ್ಸೆಯಿಂದ ಸಮಸ್ಯೆ ತೀವ್ರಗೊಳ್ಳುವುದನ್ನು ತಡೆಯಬಹುದು,ಹೀಗಾಗಿ ಶ್ವಾಸಕೋಶ ಸೋಂಕಿಗೊಳಗಾಗಿದೆ ಎಂಬ ಶಂಕೆಯುಂಟಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಎದೆಯ ಎಕ್ಸ್‌ರೇ,ಕಫ ಪರೀಕ್ಷೆ,ರಕ್ತ ಪರೀಕ್ಷೆ ಮತ್ತು ಬ್ರಾಂಕೊಸ್ಕೋಪಿ ಇವು ನ್ಯುಮೋನಿಯಾ ರೋಗ ನಿರ್ಧಾರಕ್ಕೆ ಕೈಗೊಳ್ಳುವ ಸಾಮಾನ್ಯ ತಪಾಸಣೆಗಳಾಗಿವೆ. ರೋಗವು ತೀವ್ರಗೊಂಡಿದ್ದರೆ ರೋಗಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಬೇಕಾಗಬಹುದು.

►ಚಿಕಿತ್ಸೆ

ಸಾಮಾನ್ಯ ಮತ್ತು ವಿಶೇಷ ಕಾಳಜಿ,ಹೀಗೆ ನ್ಯುಮೋನಿಯಾ ಚಿಕಿತ್ಸೆಯಲ್ಲಿ ಎರಡು ಭಾಗಗಳಿವೆ. ಸಾಕಷ್ಟು ವಿಶ್ರಾಂತಿ,ಪೌಷ್ಟಿಕ ಆಹಾರ ಸೇವನೆ ಮತ್ತು ಉಸಿರಾಟದ ತೊಂದರೆಗಳಿದ್ದಲ್ಲಿ ಸೌಮ್ಯ ಆಕ್ಸಿಜನ್ ಚಿಕಿತ್ಸೆಯ ಮೂಲಕ ಕಫವನ್ನು ಹೊರಗೆ ಹಾಕುವುದು ಇವು ಸಾಮಾನ್ಯ ಚಿಕಿತ್ಸೆಯಲ್ಲಿ ಸೇರಿವೆ. ವಿಶೇಷ ಚಿಕಿತ್ಸೆಯು ರೋಗಿಯ ಸ್ಥಿತಿಯನ್ನು ಅವಲಂಬಿಸಿ ಆ್ಯಂಟಿ ಬಯಾಟಿಕ್‌ಗಳು ಅಥವಾ ಆ್ಯಂಟಿ ಫಂಗಲ್ ಔಷಧಿಗಳ ಬಳಕೆಯನ್ನು ಒಳಗೊಂಡಿದೆ.

►ರೋಗತಡೆಗೆ ಅನುಸರಿಸಬೇಕಾದ ಕ್ರಮಗಳು

ಪ್ರಾಥಮಿಕ ನೈರ್ಮಲ್ಯವನ್ನು ಕಾಯ್ದುಕೊಳ್ಳುವ ಮೂಲಕ ನ್ಯುಮೋನಿಯಾವನ್ನು ತಡೆಯಬಹುದು:

-ಕೆಮ್ಮುವಾಗ ಅಥವಾ ಸೀನುವಾಗ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಿ.

-ಊಟಕ್ಕೆ ಮುನ್ನ ಮತ್ತು ಟಾಯ್ಲೆಟ್ ಬಳಕೆಯ ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.

-ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸಿ.

-ಇನ್‌ಫ್ಲುಯೆಂಜಾ ಮತ್ತು ಸ್ಟ್ರೆಪ್ಟೊಕಾಕಲ್ ಬ್ಯಾಕ್ಟೀರಿಯಲ್ ನ್ಯುಮೋನಿಯಾವನ್ನು ತಡೆಯಲು ಲಸಿಕೆಯನ್ನು ತೆಗೆದುಕೊಳ್ಳಿ.

-ಫ್ಲು ಲಸಿಕೆಯನ್ನು ವರ್ಷಕ್ಕೊಂದು ಬಾರಿ ಮತ್ತು ನ್ಯುಮೋನಿಯಾ ಲಸಿಕೆಯನ್ನು ಜೀವಿತಾವಧಿಯಲ್ಲಿ ಒಂದು ಬಾರಿ ಅಥವಾ ವಯಸ್ಸು ಹಾಗೂ ವೈದ್ಯಕೀಯ ಸ್ಥಿತಿಯನ್ನು ಅವಲಂಬಿಸಿ ಪ್ರತಿ ಐದು ವರ್ಷಗಳಿಗೊಮ್ಮೆ ತೆಗೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News