ಭಾರತಕ್ಕೆ ಸತತ ಎರಡನೇ ಜಯ

Update: 2018-11-12 18:14 GMT

ಪ್ರಾವಿಡೆನ್ಸ್ಸ್(ಗಯಾನ), ನ.12: ಮಿಥಾಲಿ ರಾಜ್ ಅವರ ಆಕರ್ಷಕ ಅರ್ಧಶತಕ ನೆರವಿನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಇಲ್ಲಿ ರವಿವಾರ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿದೆ.

ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 134 ರನ್‌ಗಳ ಗುರಿ ಪಡೆದ ಭಾರತ ಇನ್ನೂ 6 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 137 ರನ್ ಸಂಪಾದಿಸಿತು.

ಮಾಜಿ ನಾಯಕಿ ಮಿಥಾಲಿ ರಾಜ್ 47 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 56 ರನ್ ಗಳಿಸಿದರು.

ಪಾಕಿಸ್ತಾನದ ಇಬ್ಬರು ಆಟಗಾರ್ತಿಯರು ಬ್ಯಾಟಿಂಗ್ ವೇಳೆ ಪಿಚ್‌ನ ಅಪಾಯಕಾರಿ ಜಾಗದಲ್ಲಿ ಓಡಿದ್ದಕ್ಕಾಗಿ ಪೆನಾಲ್ಟಿ ರೂಪದಲ್ಲಿ ಭಾರತದ ಖಾತೆಗೆ 10 ರನ್‌ಗಳು ಜಮೆಯಾಗಿತ್ತು. ಈ ಕಾರಣದಿಂದಾಗಿ ಭಾರತ ಗೆಲುವಿನ ಗುರಿಯನ್ನು ಬೇಗನೆ ತಲುಪಲು ಸಾಧ್ಯವಾಯಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಔಟಾಗದೆ 14 ರನ್ ಮತ್ತು ವೇದಾ ಕೃಷ್ಣ ಮೂರ್ತಿ ಔಟಾಗದೆ 8 ರನ್ ಗಳಿಸಿ ತಂಡದ ಗೆಲುವಿನ ವಿಧಿವಿಧಾನ ಪೂರೈಸಿದರು. ಇನಿಂಗ್ಸ್ ಆರಂಭಿಸಿದ ಮಿಥಾಲಿ ರಾಜ್ ಮತ್ತು ಸ್ಮತಿ ಮಂಧಾನ ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 73 ರನ್ ಸೇರಿಸಿದರು. ಮಂಧಾನ 26 ರನ್ ಗಳಿಸಿ ಔಟಾದರು. ಜೆಮಿಮಾ ರೋಡ್ರಿಗಸ್ 16ರನ್ ಗಳಿಸಿ ಔಟಾದರು. ಪಾಕಿಸ್ತಾನದ ಡಯಾನ ಬೇಗ್, ನಿಧಾ ದಾರ್ ಮತ್ತು ಬಿಸ್ಮಾ ಮರೂಫ್ ತಲಾ 1 ವಿಕೆಟ್ ಹಂಚಿಕೊಂಡರು.

 ►ಪಾಕಿಸ್ತಾನ 133/7:  

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 133 ರನ್ ಗಳಿಸಿತ್ತು. ಬಿಸ್ಮಾ ಮಹರೂಫ್ 53 ರನ್ ಮತ್ತು ನಿದಾದಾರ್ 52 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News