ಪಾಕ್-ನ್ಯೂಝಿಲೆಂಡ್ ಏಕದಿನ ಸರಣಿ ಸಮಬಲ

Update: 2018-11-12 18:21 GMT

ದುಬೈ, ನ.12: ಪಾಕಿಸ್ತಾನ ಹಾಗೂ ನ್ಯೂಝಿಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಮಳೆಗಾಹುತಿಯಾಗಿದೆ. ಈ ಹಿನ್ನೆಲೆಯಲ್ಲಿ ಮೂರು ಪಂದ್ಯಗಳ ಸರಣಿ 1-1ರಿಂದ ಕೊನೆಗೊಂಡಿದೆ. ರವಿವಾರ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲಲು 280 ರನ್ ಸವಾಲು ಪಡೆದ ನ್ಯೂಝಿಲೆಂಡ್ 6.5 ಓವರ್‌ಗಳಲ್ಲಿ 1 ವಿಕೆಟ್‌ಗೆ 35 ರನ್ ಗಳಿಸಿದ್ದಾಗ ಮಳೆ ಆಗಮಿಸಿತು. ಮಳೆ ನಿಲ್ಲದ ಕಾರಣ ಪಂದ್ಯ ರದ್ದುಪಡಿಸಲು ಅಂಪೈರ್‌ಗಳು ನಿರ್ಧರಿಸಿದರು.

ಪಾಕ್ ತಂಡ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದ ಕಾರಣ ಕಿವೀಸ್ ವಿರುದ್ಧ ದೀರ್ಘ ಸಮಯದ ಬಳಿಕ ಸರಣಿ ಜಯಿಸುವ ವಿಶ್ವಾಸದಲ್ಲಿತ್ತು. ಆದರೆ, ಪಂದ್ಯ ಮಳೆಗಾಹುತಿಯಾದ ಕಾರಣ ಟ್ರೋಫಿಯನ್ನು ಉಭಯ ತಂಡಗಳು ಹಂಚಿಕೊಂಡಿವೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ ಬಾಬರ್ ಆಝಮ್(92, 100 ಎಸೆತ, 4 ಬೌಂಡರಿ, 1 ಸಿಕ್ಸರ್), ಫಾಕರ್ ಝಮಾನ್(65,77 ಎಸೆತ, 8 ಬೌಂಡರಿ) ಹಾಗೂ ಹ್ಯಾರಿಸ್ ಸೊಹೈಲ್(60,59 ಎಸೆತ, 6 ಬೌಂಡರಿ, 2 ಸಿಕ್ಸರ್)ಅರ್ಧಶತಕದ ಕೊಡುಗೆ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 279 ರನ್ ಗಳಿಸಿತು. ಇನಿಂಗ್ಸ್ ಆರಂಭಿಸಿದ ಝಮಾನ್ ಹಾಗೂ ಮುಹಮ್ಮದ್ ಹಫೀಝ್(19) ಮೊದಲ ವಿಕೆಟ್‌ಗೆ 64 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಮೂರನೇ ವಿಕೆಟ್‌ಗೆ 108 ರನ್ ಜೊತೆಯಾಟದಲ್ಲಿ ಪಾಲ್ಗೊಂಡ ಆಝಮ್ ಹಾಗೂ ಸೊಹೈಲ್ ಪಾಕ್ ಸ್ಕೋರನ್ನು ಹೆಚ್ಚಿಸಿದರು.

ಕಿವೀಸ್ ಪರ ಫರ್ಗ್ಯುಸನ್(5-45)ಐದು ವಿಕೆಟ್ ಗೊಂಚಲು ಪಡೆದರು.

►ಕಿವೀಸ್ ಫೀಲ್ಡರ್‌ಗಳ ಯಡವಟ್ಟು

ಪಾಕ್ ಇನಿಂಗ್ಸ್‌ನ ವೇಳೆ ಕಿವೀಸ್ ಫೀಲ್ಡರ್‌ಗಳು ಕೇವಲ ಒಂದು ಎಸೆತದಲ್ಲಿ ಐದು ರನ್‌ಬಿಟ್ಟು ಕೊಟ್ಟು ಯಡವಟ್ಟು ಮಾಡಿದ್ದಾರೆ. ಕಿವೀಸ್‌ಆಟಗಾರರ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗಿದೆ.

ಪಾಕಿಸ್ತಾನ ಇನಿಂಗ್ಸ್‌ನ 49ನೇ ಓವರ್‌ನಲ್ಲಿ ಫಹೀಮ್ ಅಶ್ರಫ್ ಹಾಗೂ ಆಸಿಫ್ ಅಲಿ ಕ್ರೀಸ್‌ನಲ್ಲಿದ್ದರು. ಅಶ್ರಫ್ ಅವರು ವೇಗದ ಬೌಲರ್ ಟ್ರೆಂಟ್ ಬ್ರಿಡ್ಜ್ ಎಸೆತವನ್ನು ಡೀಪ್ ಸ್ಕ್ವಾರ್‌ಲೆಗ್‌ನತ್ತ ತಳ್ಳಿ ಮೂರು ರನ್ ಗಳಿಸುವ ಪ್ರಯತ್ನಕ್ಕೆ ಕೈಹಾಕಿದರು. ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ನಿರತ ಆಟಗಾರ ವಿಕೆಟ್‌ಕೀಪರ್ ಟಾಮ್ ಲಥಾಮ್‌ರತ್ತ ಚೆಂಡು ಎಸೆದರು. ಚೆಂಡು ಪಡೆದ ಲಥಾಮ್ ಬೌಲಿಂಗ್ ತುದಿಯತ್ತ ಚೆಂಡನ್ನು ಬೇಕಾಬಿಟ್ಟಿ ಬಿಸಾಡಿದ ಕಾರಣ ಚೆಂಡು ಲಾಂಗ್-ಆಫ್‌ನತ್ತ ಸಾಗಿತು. ಡೀಪ್‌ನಿಂದ ಆಟಗಾರ ನೀಡಿದ ಚೆಂಡನ್ನು ಪಡೆಯಲು ಟಾಮ್ ಮತ್ತೆ ವಿಫಲವಾದ ಕಾರಣ ಪಾಕಿಸ್ತಾನ ಆಟಗಾರರು ಐದು ರನ್ ಪೂರೈಸಿದರು.

ಪಾಕಿಸ್ತಾನದ ಶಾಹೀನ್ ಅಫ್ರಿದಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಕಿವೀಸ್ ಬೌಲರ್ ಲಾಕಿ ಫರ್ಗ್ಯುಸನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News