ಐಸಿಸಿ ಟ್ವೆಂಟಿ-20 ರ‌್ಯಾಂಕಿಂಗ್: ಕುಲ್‌ದೀಪ್ ಜೀವನಶ್ರೇಷ್ಠ ಸಾಧನೆ

Update: 2018-11-12 18:28 GMT

ದುಬೈ, ನ.12: ವೆಸ್ಟ್‌ಇಂಡೀಸ್ ವಿರುದ್ಧ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತದ ಚೈನಾಮನ್ ಬೌಲರ್ ಕುಲ್‌ದೀಪ್ ಯಾದವ್ ಸೋಮವಾರ ಬಿಡುಗಡೆಯಾಗಿರುವ ಐಸಿಸಿ ಟ್ವೆಂಟಿ-20 ರ‌್ಯಾಂಕಿಂಗ್ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ರ‌್ಯಾಂಕಿಂಗ್ನಲ್ಲಿ 14 ಸ್ಥಾನ ಮೇಲಕ್ಕೇರಿರುವ ಕುಲ್‌ದೀಪ್ 23ನೇ ಸ್ಥಾನ ತಲುಪಿದ್ದಾರೆ.

ಹಾಲಿ ಟ್ವೆಂಟಿ-20 ಚಾಂಪಿಯನ್ ವಿಂಡೀಸ್ ವಿರುದ್ಧ ಭಾರತ ತಂಡ 3-0 ಅಂತರದಿಂದ ಸರಣಿ ಜಯಿಸಿ ಕ್ಲೀನ್‌ಸ್ವೀಪ್ ಸಾಧಿಸಿತ್ತು. ಯಾದವ್ ಎರಡು ಪಂದ್ಯಗಳಲ್ಲಿ 5.6 ಇಕಾನಮಿ ರೇಟ್‌ನಲ್ಲಿ ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿದ್ದರು.

ವೇಗದ ಬೌಲರ್ ಭುವನೇಶ್ವರ ಕುಮಾರ್ 9 ಸ್ಥಾನ ಭಡ್ತಿ ಪಡೆದು ಅಗ್ರ-20ರಲ್ಲಿ ಸ್ಥಾನ ಪಡೆದರು. ಕುಮಾರ್ 19ನೇ ಸ್ಥಾನದಲ್ಲಿದ್ದರೆ, ಸಹ ವೇಗಿ ಜಸ್‌ಪ್ರಿತ್ ಬುಮ್ರಾ 5 ಸ್ಥಾನ ಮೇಲಕ್ಕೇರಿ 21ನೇ ಸ್ಥಾನ ತಲುಪಿದ್ದಾರೆ.

ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ರ‌್ಯಾಂಕಿಂಗ್ನಲ್ಲಿ ಪ್ರಗತಿ ಸಾಧಿಸಿದ್ದಾರೆ. ರೋಹಿತ್(3 ಸ್ಥಾನ ಭಡ್ತಿ)7ನೇ ಸ್ಥಾನಕ್ಕೆ ಲಗ್ಗೆ ಇಟ್ಟರೆ, ಧವನ್(5 ಸ್ಥಾನ ಭಡ್ತಿ)16ನೇ ಸ್ಥಾನ ಪಡೆದಿದ್ದಾರೆ.

ಟೀಮ್ ರ‌್ಯಾಂಕಿಂಗ್ನಲ್ಲಿ ಪಾಕಿಸ್ತಾನ ಹಾಗೂ ಭಾರತ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನವನ್ನು ಕಾಯ್ದುಕೊಂಡಿವೆ. ಪಾಕಿಸ್ತಾನ 138 ಅಂಕ ಗಳಿಸಿದ್ದರೆ, ಭಾರತ 127 ಅಂಕ ಗಳಿಸಿದೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ-4ರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಸ್ಟೇಲಿಯದ ಗ್ಲೆನ್ ಮ್ಯಾಕ್ಸ್‌ವೆಲ್ ಅಗ್ರ ಸ್ಥಾನದಲ್ಲಿದ್ದರೆ, ಮುಹಮ್ಮದ್ ನಬಿ, ಶಾಕಿಬ್ ಅಲ್ ಹಸನ್ ಹಾಗೂ ಜೆಪಿ ಡುಮಿನಿ ಆಬಳಿಕದ ಸ್ಥಾನದಲ್ಲಿದ್ದಾರೆ.

ಇದೇ ವೇಳೆ ಆಸ್ಟ್ರೇಲಿಯ ತಂಡ ಈ ತಿಂಗಳಾಂತ್ಯದಲ್ಲಿ ನಾಲ್ಕು ಟ್ವೆಂಟಿ-20 ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕ ವಿರುದ್ಧ ನ.17ಕ್ಕೆ ಏಕೈಕ ಪಂದ್ಯ ಹಾಗೂ ನ.21 ರಿಂದ 25ರ ತನಕ ಭಾರತ ವಿರುದ್ಧ 3 ಪಂದ್ಯಗಳ ಸರಣಿಯನ್ನು ಆಡಲಿದೆ. ಒಂದು ವೇಳೆ ಆಸ್ಟ್ರೇಲಿಯ ತಂಡ ಎಲ್ಲ 4 ಪಂದ್ಯಗಳನ್ನು ಗೆದ್ದುಕೊಂಡರೆ 126 ಅಂಕ ಗಳಿಸಿ 2ನೇ ಸ್ಥಾನಕ್ಕೇರಲಿದೆ. ಎಲ್ಲ 4 ಪಂದ್ಯಗಳಲ್ಲಿ ಸೋತರೆ 112 ಅಂಕದೊಂದಿಗೆ 6ನೇ ಸ್ಥಾನ ಪಡೆಯಲಿದೆ.

ನ.17ರ ಪಂದ್ಯದಲ್ಲಿ ದ.ಆಫ್ರಿಕ ಜಯ ಸಾಧಿಸಿದರೆ 3 ಅಂಕ ಗಳಿಸಲಿದೆ. ಭಾರತ ತಂಡ ಆಸೀಸ್ ವಿರುದ್ಧ ಎಲ್ಲ 3 ಪಂದ್ಯಗಳನ್ನು ಗೆದ್ದುಕೊಂಡರೆ 129 ಅಂಕ ಗಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News