ಮಧ್ಯಪ್ರದೇಶ: ಭೋಪಾಲ್ ದುರಂತ ಚುನಾವಣೆಯ ವಿಷಯವಾಗಲಿ

Update: 2018-11-13 03:51 GMT

ಈ ವಿಶ್ವ ನಾಶವಾಗಲು ಅಣು ಬಾಂಬ್ ಯುದ್ಧವೇ ನಡೆಯಬೇಕಾಗಿಲ್ಲ. ಇದನ್ನು ಈಗಾಗಲೇ ಭಾರತ 1984ರ ಭೋಪಾಲ್ ದುರಂತದಲ್ಲಿ ಕಂಡುಕೊಂಡಿದೆ. ಭೂಕಂಪ, ಸುನಾಮಿಗಳೆಲ್ಲವೂ ಈ ಜಗತ್ತಿಗೆ ಹೆಚ್ಚು ಅಪಾಯಕಾರಿ ನಿಜ. ಆದರೆ ಅದನ್ನು ಇನ್ನಷ್ಟು ಭೀಕರವಾಗಿಸುವುದರಲ್ಲಿ ಮನುಷ್ಯನ ಪಾತ್ರವಿದೆ. ಅಣುಸ್ಥಾವರಗಳನ್ನು ಹೊಂದಿರುವ ಎಲ್ಲ ದೇಶಗಳು ಬಗಲಲ್ಲಿ ಸೆರಗಿನ ಕೆಂಡವನ್ನು ಕಟ್ಟಿಕೊಂಡೇ ಬದುಕುತ್ತಿವೆ. ನಾಗಸಾಕಿ, ಹಿರೋಶಿಮಾ ದುರಂತಕ್ಕೆ ಒಂದು ಮಹಾ ಯುದ್ಧದ ಕ್ರೌರ್ಯದ ಪರಿಣಾಮ ಕಾರಣ ಎಂದು ಹೇಳಬಹುದು. ಆದರೆ ಭೋಪಾಲ್‌ನಂತಹ ದುರಂತಗಳಿಗೆ ನಾವು ಯಾರನ್ನು ಹೊಣೆ ಮಾಡಬೇಕು? ಭೋಪಾಲ್ ದುರಂತ ಸಂಭವಿಸಿ 34 ವರ್ಷ ಕಳೆದಿದೆ. ನಾವಿಂದು ಆ ದುರಂತವನ್ನು ಇತಿಹಾಸವಾಗಿ ನೋಡತೊಡಗಿದ್ದೇವೆ. ಅಂದಿನ ಸಾವು ನೋವುಗಳನ್ನು ನೆನೆಯುತ್ತೇವೆ. ಆದರೆ ಭೋಪಾಲ್‌ನ ಪರಿಣಾಮಗಳನ್ನು ಇಂದಿಗೂ ಅಲ್ಲಿ ಜನರು ಅನುಭವಿಸುತ್ತಲೇ ಇದ್ದಾರೆ. ಆರೋಪಿಗಳಿಗೆ ಶಿಕ್ಷೆಯಂತೂ ಆಗಿಲ್ಲ. ದುರದೃಷ್ಟವಶಾತ್ ಮಾಡದ ತಪ್ಪಿಗೆ ಸಂತ್ರಸ್ತರು ಮಾತ್ರ ಇನ್ನೂ ಶಿಕ್ಷೆ ಅನುಭವಿಸುತ್ತಲೇ ಇದ್ದಾರೆ. 1984ರಲ್ಲಿ ದುರಂತ ಸಂಭವಿಸಿದಾಗ ಸುಮಾರು 10 ಸಾವಿರ ಜನರು ಬಲಿಯಾದರು. ಆದರೆ ಈ ಸಾವು ಅಂದಿಗೇ ಮುಗಿಯಲಿಲ್ಲ. ಆ ಪ್ರದೇಶದ ಪ್ರತಿ ಮನೆಯಲ್ಲಿ ಸಾವಿನ ಸರಣಿ ಮುಂದುವರಿದಿದೆ. ಪ್ರತಿ ದಿನ, ಐದು ಜನರನ್ನಾದರೂ ಆ ದುರಂತ ಬಲಿತೆಗೆದುಕೊಳ್ಳುತ್ತಿದೆ. 1984ರ ಡಿಸೆಂಬರ್ 2/3ರ ರಾತ್ರಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಎಂಬ ಕೀಟನಾಶಕ ಉತ್ಪಾದನಾ ಕಂಪೆನಿಯಿಂದ ಸೋರಿಕೆಯಾದ ಮೀಥೈಲ್ ಐಸೊಸೈನೇಟ್ ಅನಿಲ 10,047 ಮಂದಿಯನ್ನು ಬಲಿ ಪಡೆಯಿತು ಹಾಗೂ 5,74,000 ಮಂದಿ ಇದರಿಂದ ತೊಂದರೆಗೆ ಒಳಗಾದರು. ಇದು ಮಧ್ಯಪ್ರದೇಶದ ಸರಕಾರಿ ಅಂಕಿಅಂಶ. ಇತರ ಅಂದಾಜಿನಂತೆ ಈ ದುರಂತ ಸಂಭವಿಸಿದ ಎರಡು ವಾರಗಳ ಅವಧಿಯಲ್ಲಿ 15 ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ.

ಘಟನೆ ನಡೆದು 34 ವರ್ಷಗಳಲ್ಲಿ ಹಲವು ಚುನಾವಣೆಗಳು ಬಂದು ಹೋಗಿವೆ. ಮತ್ತೆ ಭೋಪಾಲ್ ಬೀದಿಗಳಲ್ಲಿ ವಿವಿಧ ಪಕ್ಷಗಳ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಡಿಸೆಂಬರ್‌ನಲ್ಲಿ ಹೊಸ ಸರಕಾರವನ್ನು ಜನ ನಿರೀಕ್ಷಿಸುತ್ತಿದ್ದಾರೆ. ಆದರೂ ಯಾವುದೇ ರಾಜಕೀಯ ಪಕ್ಷವಾಗಲೀ, ಯಾವುದೇ ರಾಜಕಾರಣಿಯಾಗಲೀ, ಈ ದುರಂತವನ್ನು ಚುನಾವಣಾ ವಿಷಯವಾಗಿ ಬಿಂಬಿಸಿಲ್ಲ. ವಿಪರ್ಯಾಸವೆಂದರೆ, ಮಧ್ಯಪ್ರದೇಶದ ಜನರಿಗೆ ಕೋಮು ವಿಷವನ್ನು ಉಣಿಸುವ ಮೂಲಕ ಬಿಜೆಪಿ ಚುನಾವಣೆಯನ್ನು ಗೆಲ್ಲಲು ಹೊರಟಿದೆೆ. ಆದರೆ ಭೋಪಾಲ್ ವಿಷವನ್ನು ಉಂಡವರ ಕುರಿತಂತೆ ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳು ಮಾತನಾಡುತ್ತಿಲ್ಲ.

ಅತ್ಯಂತ ವಿಶೇಷವೆಂದರೆ, ಭೋಪಾಲ್ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ಖಾತೆ ಸಚಿವ ವಿಶ್ವಾಸ್ ಸಾರಂಗ್ ಸ್ವತಃ ದುರಂತದ ಸಂತ್ರಸ್ತರು. ಆದರೂ ಅವರಿಂದ ಅನಿಲ ದುರಂತದಿಂದ ತೊಂದರೆಗೆ ಒಳಗಾಗಿ ಬದುಕಿ ಉಳಿದವರ ಸ್ಥಿತಿ ಸುಧಾರಿಸಲು ಸಾಧ್ಯವಾಗಿಲ್ಲ. ಭೋಪಾಲ್ ದುರಂತದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಲಿಲ್ಲ ಎನ್ನುವುದು ಒಂದು ನೋವು. ಇನ್ನೊಂದೆಡೆ ಸಂತ್ರಸ್ತರೇ ಶಿಕ್ಷೆ ಅನುಭವಿಸುತ್ತಿರುವುದು ಪ್ರಕರಣದ ವಿಪರ್ಯಾಸ. ದುರಂತದಲ್ಲಿ ಉಳಿದುಕೊಂಡವರು ಅವಳಿ ಯುದ್ಧದಲ್ಲಿ ಹೋರಾಡಬೇಕಿದೆ. ಒಂದೆಡೆ ಹಲವು ಆರೋಗ್ಯ ಸಮಸ್ಯೆಗಳು ಅವರನ್ನು ಕಾಡುತ್ತಿದ್ದರೆ, ಇನ್ನೊಂದೆಡೆ ತಮ್ಮ ಪರಿಹಾರ ಮೊತ್ತಕ್ಕಾಗಿ ಮೂರು ದಶಕಗಳಿಂದ ಹೋರಾಡುತ್ತಲೇ ಬಂದಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ, ಭೋಪಾಲ್ ಅನಿಲ ಸಂತ್ರಸ್ತರು ಸೆಪ್ಟಂಬರ್ 18ರಂದು ಸಭೆ ನಡೆಸಿ, 5 ಲಕ್ಷ ರೂಪಾಯಿ ಪರಿಹಾರ ಧನ ದೊರಕಿಸಿಕೊಡಲು ನೆರವಾಗುವ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದರು.

ಭೋಪಾಲ್ ಗ್ರೂಪ್ ಫಾರ್ ಇನ್‌ಫಾರ್ಮೇಷನ್ ಆ್ಯಂಡ್ ಆ್ಯಕ್ಷನ್, ಭೋಪಾಲ್ ಗ್ಯಾಸ್ ಪೀಡಿತ್ ನಿರಾಶ್ರಿತ್ ಪೆನ್ಷನ್‌ಭೋಗಿ ಸಂಘರ್ಷ್ ಮೋರ್ಚಾ ಹಾಗೂ ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಸ್ಟೇಷನರಿ ಕರ್ಮಚಾರಿ ಸಂಘ ಅನಿಲ ಸಂತ್ರಸ್ತರ ಪರವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಗುಂಪುಗಳು ಹೇಳುವಂತೆ, ಅಭ್ಯರ್ಥಿಗಳು ಈ ಸಂಬಂಧ ಭರವಸೆ ನೀಡಿದರೆ ಅದು ಬದ್ಧತೆಯಾಗುತ್ತದೆ ಹಾಗೂ ಅದನ್ನು ಪೂರೈಸದಿದ್ದರೆ ಕಾನೂನಾತ್ಮಕ ಹೋರಾಟ ನಡೆಸಲು ಸಾಧ್ಯವಾಗುತ್ತದೆ.

ವಿಶ್ವದ ಅತಿದೊಡ್ಡ ಕೈಗಾರಿಕಾ ದುರಂತವನ್ನು ನಿರ್ವಹಿಸುವಲ್ಲಿ ಅಪರಾಧಾತ್ಮಕ ನಿರ್ಲಕ್ಷ್ಯ ವಹಿಸಲಾಗಿದೆ. ಸಂತ್ರಸ್ತರಿಗೆ ಯಾವುದೇ ವೈದ್ಯಕೀಯ ನೆರವಾಗಲೀ, ಹಣಕಾಸು ಸಹಾಯವಾಗಲೀ ಇಲ್ಲ; ಅಷ್ಟು ಮಾತ್ರವಲ್ಲದೇ, ಅಂತರ್ಜಲವನ್ನು ಮಲಿನಗೊಳಿಸುತ್ತಿರುವ ವಿಷಕಾರಿ ರಾಸಾಯನಿಕಗಳನ್ನು ವಿಲೇವಾರಿ ಮಾಡುವ ಯೋಜನೆಗಳೂ ಜಾರಿಯಾಗಲಿಲ್ಲ. ಯಾವುದೇ ರಾಜಕಾರಣಿಗಳಿಗೂ ಈ ಸಂತ್ರಸ್ತರ ಕುರಿತಂತೆ ಆಸಕ್ತಿಯಿಲ್ಲ . ಭೋಪಾಲ್ ಸಂತ್ರಸ್ತರು ಚುನಾವಣೆಯಲ್ಲಿ ಗೆಲ್ಲಲು ನಿರ್ಣಾಯಕ ಆಗಲಾರರು ಎನ್ನುವುದೇ ಅವರ ನಿಲುವಿಗೆ ಮುಖ್ಯ ಕಾರಣ. ಸಾಮಾಜಿಕ ಬದ್ಧತೆಯೊಂದಿಗೆ ಚುನಾವಣೆಯಲ್ಲಿ ನಿಂತರೆ ಗೆಲ್ಲುವುದು ಅಸಾಧ್ಯ ಎನ್ನುವುದು ರಾಜಕಾರಣಿಗಳಿಗೂ ಗೊತ್ತಿದೆ. ಆದುದರಿಂದಲೇ ಅವರು ಭಾವನಾತ್ಮಕವಾದ ವಿಷಯಗಳನ್ನಿಟ್ಟು ಮತಯಾಚಿಸಲು ಉತ್ಸಾಹ ತಳೆದಿದ್ದಾರೆ. ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ, ಕಾಝಿ ಕ್ಯಾಂಪ್, ಡಿಐಜಿ ಮೇಲ್ಸೇತುವೆ, ಜೆಪಿನಗರ, ಶಹಾಜಹಾನ್‌ಬಾದ್ ಮತ್ತು ಜಹಾಂಗೀರ್‌ಬಾದ್ ಹೀಗೆ ಭೋಪಾಲ್ ಅನಿಲ ಸಂತ್ರಸ್ತರ ಕಾಲನಿಗಳಲ್ಲಿ ಹಲವು ಹೋರ್ಡಿಂಗ್ ಹಾಗೂ ಬ್ಯಾನರ್‌ಗಳು ತಲೆ ಎತ್ತಿವೆ. ಸಂತ್ರಸ್ತರೆಲ್ಲ ಒಂದಾಗಿ ರಾಜಕೀಯ ಶಕ್ತಿಯಾಗಲು ನಿರ್ಧರಿಸಿದ್ದಾರೆ. ಇದು ಆಶಾದಾಯಕ ಸಂಗತಿಯಾಗಿದೆ ಇದನ್ನು ರಾಜಕಾರಣಿಗಳು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಯಾಕೆಂದರೆ ರಾಜಕಾರಣಿಗಳಿಗೆ ಭೋಪಾಲ್ ದುರಂತ ಮುಗಿದ ಅಧ್ಯಾಯ. ಅದು 30 ವರ್ಷಗಳ ಹಿಂದಿನ ದುರಂತ. ಈಗ ಅವರಲ್ಲಿ ಯಾರೂ ಇಲ್ಲ. ಈಗಲೂ ಅದನ್ನು ಪ್ರಸ್ತಾಪಿಸುವುದು ಅನಗತ್ಯ ಎಂಬ ಭಾವನೆಯಲ್ಲಿದ್ದಾರೆ. ಭೋಪಾಲ್ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಿವೆ. ನರೇಲಾ ಹಾಗೂ ಭೋಪಾಲ್ ಉತ್ತರ ಕ್ಷೇತ್ರಗಳಲ್ಲಿ ಅತಿದೊಡ್ಡ ಸಂಖ್ಯೆಯ ಸಂತ್ರಸ್ತರು ಮತ್ತು ಉಳಿದವರಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಶೇ.80-90ರಷ್ಟು ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದುರಂತದ ಜತೆ ಸಂಬಂಧ ಹೊಂದಿದವರು.

ಭೋಪಾಲ್ ಸೆಂಟ್ರಲ್ ಹಾಗೂ ಹುಝೂರ್‌ನಂಥ ಕ್ಷೇತ್ರಗಳಲ್ಲೂ ಗಣನೀಯ ಸಂಖ್ಯೆಯ ಸಂತ್ರಸ್ತರ ಮತ್ತು ದುರಂತದಲ್ಲಿ ಉಳಿದುಕೊಂಡವರ ಕುಟುಂಬಗಳಿವೆ. ದುರಂತದ ನಂತರದ ಪರಿಣಾಮದಿಂದ ಇವರು ನರಳುತ್ತಿದ್ದಾರೆ. ಸುಮಾರು ಶೇ.40 % ಸಂತ್ರಸ್ತರ ಮತಗಳು ಈ ಎರಡೂ ಕ್ಷೇತ್ರಗಳಲ್ಲಿದ್ದು, ಫಲಿತಾಂಶದ ಮೇಲೆ ಪ್ರಭಾವ ಬೀರುವಷ್ಟು ಮತಗಳಿವೆ.

ಬೆರಾಸಿಯಾ ಕ್ಷೇತ್ರ ಭೋಪಾಲ್ ಜಿಲ್ಲೆಯ ಗ್ರಾಮೀಣ ವಿಸ್ತರಣೆ ಎಂದು ಪರಿಗಣಿತವಾಗಿದ್ದು, ಗೋವಿಂದಪುರ ಹಾಗೂ ಭೋಪಾಲ್ ಆಗ್ನೇಯ ಕ್ಷೇತ್ರಗಳಲ್ಲೂ ದುರಂತದ ಹಾನಿಯಿಂದಾಗಿ ವಲಸೆ ಬಂದ ಬಹಳಷ್ಟು ಸಂಖ್ಯೆಯ ಮಂದಿ ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಾದರೂ ಭೋಪಾಲ್ ದುರಂತ ಮಾತನಾಡಬೇಕು. ಭಾರತದಲ್ಲಿ ಇನ್ನೂ ನೂರಾರು ಭೋಪಾಲ್‌ಗಳಿವೆ. ಅವೆಲ್ಲವೂ ಒಂದಲ್ಲ ಒಂದು ದಿನ ಅನಾಹುತಗಳನ್ನು ಸೃಷ್ಟಿಸಬಹುದು. ಭೋಪಾಲ್ ದುರಂತದಿಂದ ನಾವು ಪಾಠ ಕಲಿಯದೇ ಇದ್ದರೆ, ಮುಂದಿನ ಬಾರಿ ದೇಶ ತೆರುವ ಶುಲ್ಕವನ್ನು ಊಹಿಸುವುದಕ್ಕೆ ಅಸಾಧ್ಯ. ಈ ಹಿನ್ನೆಲೆಯಲ್ಲಿ ಭೋಪಾಲ್ ದುರಂತ ಪ್ರದೇಶಗಳಿಗೆ ನ್ಯಾಯವನ್ನು ನೀಡುತ್ತಲೇ, ಭವಿಷ್ಯದಲ್ಲಿ ಸಂಭವಿಸಬಹುದಾದ ಅಂತಹ ದುರಂತಗಳನ್ನು ಯಾವ ರೀತಿಯಲ್ಲಿ ಎದುರಿಸಬಹುದು ಎನ್ನುವುದರ ಕುರಿತಂತೆಯೂ ಸರಕಾರ ಎಚ್ಚೆತ್ತುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News