ನಿವೃತ್ತಿ ಹಣ ನೀಡಲು ನಿರಾಕರಿಸಿದ ತಂದೆಯನ್ನು ಹೊಡೆದು ಸಾಯಿಸಿದ ಪುತ್ರ

Update: 2018-11-13 07:09 GMT

ರಚಕೊಂಡ,ನ.13 : ನಿವೃತ್ತಿ ಹಣ ನೀಡಲು ನಿರಾಕರಿಸಿದ ತಂದೆಯನ್ನು 22 ವರ್ಷದ ಪುತ್ರನೊಬ್ಬ ಕೊಲೆಗೈದ ಘಟನೆ ತೆಲಂಗಾಣದ ರಚಕೊಂಡ ಎಂಬಲ್ಲಿಂದ ವರದಿಯಾಗಿದೆ.

ಕೊಲೆಗೀಡಾದ ವ್ಯಕ್ತಿಯನ್ನು  ಕೃಷ್ಣ ಎಂದು ಗುರುತಿಸಲಾಗಿದೆ.

ಜಲ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಕೃಷ್ಣ ಜೂನ್ 2017ರಲ್ಲಿ ಸೆವೆಯಿಂದ ನಿವೃತ್ತಿಗೊಂಡಾಗ ಒಟ್ಟು ರೂ. 6 ಲಕ್ಷ ನಿವೃತ್ತಿ ನಿಧಿ ಪಡೆದಿದ್ದರು. ನಂತರ ತನ್ನ ಹೆಸರಿನಲ್ಲಿದ್ದ ಜಮೀನನ್ನೂ ರೂ. 10 ಲಕ್ಷಕ್ಕೆ ಆತ ಮಾರಾಟ ಮಾಡಿದ್ದರು.

ತಂದೆಯ ಬಳಿ ಈ ರೀತಿ ಒಟ್ಟುಗೂಡಿದ್ದ ಹಣವನ್ನು ತನಗೂ ತನ್ನ ಇಬ್ಬರು ಸೋದರಿಯರ ನಡುವೆ ಹಂಚಬೇಕೆಂದು ಆರೋಪಿ ತರುಣ್ ಪಟ್ಟು ಹಿಡಿದಿದ್ದ. ಕೊನೆಗೆ ಕೃಷ್ಣ ತನ್ನ ಬಳಿ ರೂ. 2 ಲಕ್ಷ ಇರಿಸಿಕೊಂಡು ಬಾಕಿ ಹಣವನ್ನು ಮಕ್ಕಳಲ್ಲಿ ಹಂಚಿದ್ದ. ಆದರೆ ಸ್ವಲ್ಪ ಸಮಯದ ನಂತರ ತರುಣ್ ಮತ್ತೆ ಹಣಕ್ಕಾಗಿ ಪೀಡಿಸಲಾರಂಭಿಸಿದ್ದ. ಆದರೆ ಈ ಬಾರಿ ಹಣ ನೀಡಲು ನಿರಾಕರಿಸಿದ ತಂದೆಯ ಮೇಲೆ ತರುಣ್ ರಾಡ್ ಒಂದರಲಿಂದ ಹಲ್ಲೆ ನಡೆಸಿದ ಪರಿಣಾಮ ಅವರು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರು. ತಂದೆಯ ಮೇಲೆ ಹಲ್ಲೆಗೈಯ್ಯಲು ತರುಣ್ ಸೋದರಿಯರೂ ಆತನನ್ನು ಉತ್ತೇಜಿಸಿದ್ದರೆನ್ನಲಾಗಿದೆ.

ಗಂಭೀರ ಗಾಯಗೊಂಡ ಕೃಷ್ಣನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು. ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ತರುಣ್ ಮತ್ತಾತನ ಇಬ್ಬರು ಸೋದರಿಯರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News