ರಾಕೇಶ್ ಅಸ್ತಾನ ಲಂಚ ಪ್ರಕರಣ: ಮಧ್ಯವರ್ತಿ ಮನೋಜ್ ಪ್ರಸಾದ್‌ಗೆ ಜಾಮೀನು ನಿರಾಕರಣೆ

Update: 2018-11-13 13:14 GMT

ಹೊಸದಿಲ್ಲಿ,ನ.13: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಭಾಗಿಯಾಗಿರುವ ಲಂಚ ಪ್ರಕರಣದಲ್ಲಿ ಮಧ್ಯವರ್ತಿಯಾಗಿರುವ ಮನೋಜ್ ಪ್ರಸಾದ್‌ಗೆ ಜಾಮೀನು ಮಂಜೂರು ಮಾಡಲು ದಿಲ್ಲಿ ಉಚ್ಚ ನ್ಯಾಯಾಲಯ ನಿರಾಕರಿಸಿದೆ. ಆರೋಪಿ ವಿರುದ್ಧ ಮಾಡಲಾಗಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದೆ ಮತ್ತು ತನಿಖೆಯು ಸದ್ಯ ನಿರ್ಣಾಯಕ ಹಂತದಲ್ಲಿದೆ ಎಂಬ ಸಿಬಿಐಯ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಧೀಶ ನಜ್ಮಿ ವಝೀರಿ ಆರೋಪಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದರು. ಜಾಮೀನು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ತಾನು ಹಾಕಿದ್ದ ಅರ್ಜಿ ತಿರಸ್ಕರಿಸಲ್ಪಟ್ಟ ಕಾರಣ ಪ್ರಸಾದ್ ಸೋಮವಾರಂದು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪುನಃ ಜಾಮೀನು ಅರ್ಜಿ ಸಲ್ಲಿಸಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಅನ್ನು ರದ್ದುಗೊಳಿಸುವಂತೆ ಕೋರಿ ಪ್ರಸಾದ್,ಅಸ್ತಾನ ಮತ್ತು ಸಿಬಿಐ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಕುಮಾರ್ ಉಚ್ಚ ನ್ಯಾಯಾಲಯದಲ್ಲಿ ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದ್ದಾರೆ. ತನ್ನನ್ನು ಬಂಧನಲ್ಲಿಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪ್ರಸಾದ್ ತನ್ನ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದರು. ಇದನ್ನು ತಳ್ಳಿಹಾಕಿರುವ ತನಿಖಾ ಸಂಸ್ಥೆ, ಆರೋಪಿತನು ಓರ್ವ ಪ್ರಭಾವಿ ವ್ಯಕ್ತಿಯಾಗಿದ್ದು ಜಾಮೀನಿನಲ್ಲಿ ಬಿಡುಗಡೆ ಹೊಂದಿದರೆ ತನಿಖೆಯ ಮೇಲೆ ಪ್ರಭಾವ ಬೀರಿ ಪ್ರಕರಣದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿತ್ತು. ದುಬೈಯ ಬುರ್ಜ್ ಖಲೀಫಾದ ನಿವಾಸಿಯಾಗಿರುವ ಪ್ರಸಾದ್‌ನನ್ನು ಅಕ್ಟೋಬರ್ 17ರಂದು ಸಿಬಿಐ ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News