ಚಂಡಮಾರುತ ‘ಗಜ’ ಅಪ್ಪಳಿಸುವ ಸಾಧ್ಯತೆ: ತಮಿಳುನಾಡು, ಪುದುಚೇರಿಯಲ್ಲಿ ರೆಡ್ ಅಲರ್ಟ್

Update: 2018-11-13 14:32 GMT

 ಚೆನ್ನೈ, ನ. 13: ಕಡಲೂರು ಹಾಗೂ ಪಂಬನ್ ನಡುವೆ ಇರುವ ತಮಿಳುನಾಡು ಕರಾವಳಿಯಲ್ಲಿ ನವೆಂಬರ್ 15ರಂದು ಚಂಡ ಮಾರುತ ‘ಗಜ’ ದಾಟಿ ಸಾಗಲಿದೆ. ಇದರಿಂದ ಗಾಳಿಯಿಂದ ಒಡಗೂಡಿದ ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಚಂಡ ಮಾರುತದ ಮುನ್ನೆಚ್ಚರಿಕೆ ಕ್ರಮವಾಗಿ ತಮಿಳು ನಾಡು ಸರಕಾರ ಸೋಮವಾರ ಆಡಳಿತ ಯಂತ್ರವನ್ನು ಚುರುಕಗೊಳಿಸಿದೆ ಹಾಗೂ 30,500 ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಿದೆ.

ಚಂಡಮಾರುತ ಮುನ್ನೆಚ್ಚರಿಕೆಯಲ್ಲಿ ಸಮೀಪದ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕೂಡ ಒಳಗೊಂಡಿದೆ. ಪರಿಸ್ಥಿತಿ ಎದುರಿಸಲು ಕಟ್ಟೆಚ್ಚರ ವಹಿಸಲಾಗಿದೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಿರುಗಾಳಿ ಸೋಮವಾರ ಬಂಗಾಳ ಕೊಲ್ಲಿಯ ಮೇಲಿನಿಂದಾಗಿ ಚೆನ್ನೈಯಿಂದ ಸುಮಾರು 730 ಕಿ. ಮೀ. ಪೂರ್ವ ಈಶಾನ್ಯದತ್ತ ಸಾಗಲಿದೆ. ಅದು ಅನಂತರ ಪಶ್ಚಿಮ ನೈಋತ್ಯದತ್ತ ಮುಂದುವರಿಯಲಿದೆ. ಬಳಿಕ ತೀವ್ರಗೊಂಡು ಮಂಗಳವಾರ ಚಂಡಮಾರುತವಾಗಿ ಬದಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡ ಮಾರುತ ಹಾಗೂ ಭಾರೀ ಮಳೆಯ ಹಿನ್ನೆಲೆಯಲ್ಲಿ ಸಿದ್ದವಾಗಿರಲು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಸಚಿವರು ಹಾಗೂ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ತಗ್ಗು ಪ್ರದೇಶದಲ್ಲಿರುವವರಿಗೆ ಆಹಾರ ಹಾಗೂ ಪರಿಹಾರ ಕೇಂದ್ರಗಳನ್ನು ಸಿದ್ದಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ 30,500 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಬಿ. ಉದಯ ಕುಮಾರ್ ಹೇಳಿದ್ದಾರೆ. ರಾಜ್ಯಾದ್ಯಂತ ಒಟ್ಟು 4,399 ಸ್ಥಳಗಳನ್ನು ದುರ್ಬಲ ಎಂದು ಗುರುತಿಸಲಾಗಿದೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತ ಸ್ಪಂದನಾ ಪಡೆಯನ್ನು ಸಿದ್ದವಾಗಿ ಇರಿಸಲಾಗಿದೆ. ಕರಾವಳಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸಿದ್ದತೆಯನ್ನು ಮರು ಪರಿಶೀಲಿಸಲು ಸಭೆಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಡಲರೂರು ಹಾಗೂ ನಾಗಪಟ್ಟಣಂ ಸಹಿತ ಕರಾವಳಿ ಹಾಗೂ ದುರ್ಬಲ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಉದಯ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News