ನೋಟು ನಿಷೇಧ ಬಡವರಿಗೆ ಘಾಸಿ ಮಾಡಿದೆ: ರಾಹುಲ್ ಗಾಂಧಿ

Update: 2018-11-13 14:55 GMT

ಮಹಾಸಮಂದ, ನ. 13: ನೋಟು ನಿಷೇಧದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನೋಟು ನಿಷೇಧ ಬಡವರನ್ನು ಘಾಸಿಗೊಳಿಸಿದೆ ಹಾಗೂ ಸೂಟ್-ಬೂಟ್ ಹಾಕುವ ಶ್ರೀಮಂತರಿಗೆ ಲಾಭ ಮಾಡಿದೆ ಎಂದಿದ್ದಾರೆ. ಛತ್ತೀಸ್‌ಗಡ ವಿಧಾನ ಸಭೆಯ ಎರಡನೇ ಹಂತದ ಚುನಾವಣೆಯ ಹಿನ್ನೆಲೆಯಲ್ಲಿ ಇಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಸರಕಾರ ರಫೇಲ್ ಯುದ್ಧ ವಿಮಾನ ಒಪ್ಪಂದದ ಮೂಲಕ ಅನಿಲ್ ಅಂಬಾನಿ ಅವರಿಗೆ ಲಾಭ ಮಾಡಿ ಕೊಟ್ಟಿದೆ. ಮೋದಿ ಸರಕಾರ 30 ಸಾವಿರ ಕೋ. ರೂಪಾಯಿಯನ್ನು ಬಡವರಿಂದ ಕಸಿದುಕೊಂಡಿದೆ ಹಾಗೂ ಅದನ್ನು ಉದ್ಯಮಿಗಳ ಜೇಬಿಗೆ ಹಾಕಿದೆ ಎಂದರು.

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಅವರು ಹೇಳಿದರು. ‘‘ನೋಟು ನಿಷೇಧ ಜನರ ತಲೆದಿಂಬಿನ ಒಳಗಿದ್ದ ಹಣವನ್ನು ಹೊರ ತರುತ್ತದೆ ಎಂದು ಮೋದಿ ಅವರು ಹೇಳಿದ್ದರು. ಅವರು ಹೇಳಿರುವುದು ಸರಿ. ಆದರೆ, ಯಾರ ಹಣವನ್ನು ಕಿತ್ತುಕೊಳ್ಳಲಾಗುತ್ತದೆ ಎಂದು ಅವರು ಹೇಳಲಿಲ್ಲ. ಎಲ್ಲ ಬಡ ಜನರು ಹಣಕ್ಕಾಗಿ (ನೋಟು ಬದಲಾಯಿಸಿಕೊಳ್ಳಲು) ಸಾಲು ನಿಂತರು. ಯಾರಾದರೂ ಒಬ್ಬ ಕೋಟ್ಯಧಿಪತಿ ಸಾಲಲ್ಲಿ ನಿಂತಿರುವುದು ನೀವು ನೋಡಿದ್ದೀರಾ ? ಯಾರಾದರೂ ಒಬ್ಬ ಸೂಟು-ಬೂಟಲ್ಲಿ ನಿಂತಿರುವುದು ನೀವು ನೋಡಿದ್ದೀರಾ ?’’ ಎಂದು ಅವರು ಪ್ರಶ್ನಿಸಿದರು. ಭಾರತದ ಪ್ರಧಾನ ಮಂತ್ರಿ ಶ್ರೀಮಂತರ ಕಪ್ಪು ಹಣವನ್ನು ಬಿಳುಪು ಮಾಡಲು ನೆರವು ನೀಡಿದ್ದಾರೆ. ಅವರು ಬಡವರಿಂದ ಹಣ ಕಸಿದುಕೊಂಡು, ಶ್ರೀಮಂತರಿಗೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News