ಸುಕ್ಮಾ ಎನ್‌ಕೌಂಟರ್: ಇಬ್ಬರು ಶಂಕಿತ ನಕ್ಸಲೀಯರ ವಶ

Update: 2018-11-13 14:57 GMT

 ಸುಕ್ಮಾ, ನ. 13: ಛತ್ತೀಸ್‌ಗಡದ ಸುಕ್ಮಾದಲ್ಲಿ ಸೋಮವಾರ ಎನ್‌ಕೌಂಟರ್ ನಡೆದ ಬಳಿಕ ವಿಚಾರಣೆಗಾಗಿ ಇಬ್ಬರು ಶಂಕಿತ ನಕ್ಸಲೀಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ರವಿವಾರ ಛತ್ತೀಸ್‌ಗಡ ವಿಧಾನ ಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಗಿದ ಕೆಲವೇ ಗಂಟೆಗಳ ಬಳಿಕ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದರು. ಮುದ್ವಾಲ್ ಗ್ರಾಮದ ಸಮೀಪ ಸುಕ್ಮಾದ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ಹಾಗೂ ನಕ್ಸಲೀಯರ ನಡುವೆ ರವಿವಾರ ಗುಂಡಿನ ಚಕಮಕಿ ನಡೆದಿತ್ತು. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದರು. ಭದ್ರತಾ ಪಡೆ ಸಾಗುತ್ತಿರುವಾಗ ದಾಳಿ ನಡೆಸಲು ನಕ್ಸಲೀಯರು ಸಿದ್ದತೆ ನಡೆಸಿದ್ದರು. ಆದರೆ, ಭದ್ರತಾ ಪಡೆ ಮುನ್ನೆಚ್ಚರಿಕೆ ವಹಿಸಿದ್ದರಿಂದ ಸಂಭವಿಸಬಹುದಾಗಿದ್ದ ದುರಂತವೊಂದು ತಪ್ಪಿತು ಎಂದು ಘಟನೆ ಕುರಿತ ಪ್ರಾಥಮಿಕ ವರದಿ ಸೂಚಿಸಿದೆ. ದರ್ಭಾ ವಲಯದ ಕಂಗೇರ್-ಕಣಿವೆ ಪ್ರದೇಶದಿಂದ ಇಬ್ಬರು ನಕ್ಸಲೀಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶೋಧ ವೇಳೆ ಇವರಿಂದ ರೈಫಲ್, ಸ್ಥಳೀಯ ನಿರ್ಮಿತ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News