ವಿಶ್ವಾದ್ಯಂತ ಸುಳ್ಳುಸುದ್ದಿಗಳನ್ನು ತಡೆಯಲು ವಾಟ್ಸ್‌ಆ್ಯಪ್‌ನಿಂದ 20 ತಂಡಗಳ ಆಯ್ಕೆ

Update: 2018-11-13 15:11 GMT

ಹೊಸದಿಲ್ಲಿ,ನ.13: ಭಾರತದ ತಜ್ಞರು ಮತ್ತು ಭಾರತ ಮೂಲದವರು ಸೇರಿದಂತೆ ವಿಶ್ವಾದ್ಯಂತ 20 ಸಂಶೋಧನಾ ತಂಡಗಳನ್ನು ತಾನು ಆಯ್ಕೆ ಮಾಡಿದ್ದು, ಸುಳ್ಳುಸುದ್ದಿಗಳು ಹೇಗೆ ಹರಡುತ್ತವೆ ಮತ್ತು ಅವುಗಳನ್ನು ತಡೆಯಲು ಯಾವ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಈ ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಮಂಗಳವಾರ ಪ್ರಕಟಿಸಿದೆ.

ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಅ್ಯಂಡ್ ಪಾಲಿಟಿಕಲ್ ಸೈನ್ಸ್ (ಎಲ್‌ಎಸ್‌ಇ)ನ ಶಕುಂತಲಾ ಬನಾಜಿ,ಬೆಂಗಳೂರಿನ ಮಾಧ್ಯಮ ಮತ್ತು ಕಲಾ ಸಂಸ್ಥೆ ‘ಮರಾ’ದ ಅನುಷಿ ಅಗರವಾಲ್ ಮತ್ತು ನಿಹಾಲ ಪಸಾನಾ ಹಾಗೂ ಎಲ್‌ಎಸ್‌ಇಯ ರಾಮನಾಥ ಭಟ್ ಅವರನ್ನು ಭಾರತದಲ್ಲಿ ವಾಟ್ಸ್‌ಆ್ಯಪ ಸಂದೇಶಗಳು ಮತ್ತು ಗುಂಪು ಹಿಂಸಾಚಾರಗಳ ಕುರಿತು ಅಧ್ಯಯನಕ್ಕಾಗಿ ಆಯ್ಕೆ ಮಾಡಲಾಗಿದೆ. ವಾಟ್ಸ್‌ಆ್ಯಪ್ ವದಂತಿಗಳಿಂದಾಗಿ ಈವರೆಗೆ ಭಾರತದಲ್ಲಿ 30ಕ್ಕೂ ಅಧಿಕ ಜನರು ಗುಂಪು ಹಿಂಸಾಚಾರಗಳಲ್ಲಿ ಹತ್ಯೆಯಾಗಿದ್ದು,ಈ ಪಿಡುಗನ್ನು ತಡೆಯಲು ಪರಿಹಾರ ಕ್ರಮವನ್ನು ಕಂಡುಕೊಳ್ಳಲು ಈ ತಂಡಗಳು ಶ್ರಮಿಸಲಿವೆ.

ತನ್ನ ವೇದಿಕೆಯ ಮೂಲಕ ಸುಳ್ಳುಸುದ್ದಿಗಳು ಮತ್ತು ಪ್ರಚೋದಕ ಸಂದೇಶಗಳು ಹರಡುವುದನ್ನು ತಡೆಯಲು ಅಗತ್ಯ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರವು ವಾಟ್ಸ್‌ಆ್ಯಪ್‌ಗೆ ತಾಕೀತು ಮಾಡಿತ್ತು.

ರಾಂಚಿಯ ಸೈಬರ್ ಪೀಸ್ ಫೌಂಡೇಷನ್‌ನ ವಿನೀತ ಕುಮಾರ್ ಮತ್ತು ಆನಂದ ರಾಜೆ ಹಾಗೂ ದಿಲ್ಲಿಯ ಸೈಬರ್ ಕೆಫೆ ಅಸೋಸಿಯೇಷನ್ ಆಫ್ ಇಂಡಿಯಾದ ಅಮೃತಾ ಚೌಧರಿ ಅವರ ತಂಡವು ಡಿಜಿಟಲ್ ಸಾಕ್ಷರತೆ ಮತ್ತು ಉದಯೋನ್ಮುಖ ಡಿಜಿಟಲ್ ಸಮಾಜಗಳ ಮೇಲೆ ತಪ್ಪುಮಾಹಿತಿಗಳ ಪರಿಣಾಮ ಕುರಿತು ಅಧ್ಯಯನ ನಡೆಸಲಿದೆ.

ದಿಲ್ಲಿಯ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್‌ನ ಪಿ.ಎನ್.ವಾಸಂತಿ ಮತ್ತು ಪೆನ್ಸಿಲ್ವೇನಿಯಾ ಸ್ಟೇಟ್ ವಿವಿಯ ಎಸ್.ಶ್ಯಾಮಸುಂದರ,ಒಪಿ ಜಿಂದಾಲ್ ಗ್ಲೋಬಲ್ ವಿವಿಯ ಲಿಪಿಕಾ ಕಾಮ್ರಾ ಮತ್ತು ಲಂಡನ್‌ನ ಕ್ವೀನ್ ಮೇರಿ ವಿವಿಯ ಫಿಲಿಪ್ಪಾ ವಿಲಿಯಮ್ಸ್ ಸೇರಿದಂತೆ ಇನ್ನೂ ಹಲವಾರು ಭಾರತೀಯರನ್ನು ವಾಟ್ಸ್ ಆ್ಯಪ್ ಆಯ್ಕೆ ಮಾಡಿಕೊಂಡಿದೆ.

ವಾಟ್ಸ್‌ಆ್ಯಪ್ ಜಾಗತಿಕವಾಗಿ ಮಾಸಿಕ 1.5 ಶತಕೋಟಿಗೂ ಅಧಿಕ ಮತ್ತು ಭಾರತದಲ್ಲಿಯ 200 ಮಿ.ಗೂ ಅಧಿಕ ಸಕ್ರಿಯ ಬಳಕೆದಾರರ ಸುರಕ್ಷತೆಗಾಗಿ ತೀವ್ರ ಕಾಳಜಿಯನ್ನು ಹೊಂದಿದೆ ಎಂದಿರುವ ಅದರ ಅಗ್ರ ಸಂಶೋಧಕಿ ಮೃಣಾಲಿನಿ ರಾವ್ ಅವರು,ಸುಳ್ಳುಸುದ್ದಿಗಳ ಪರಿಣಾಮಗಳನ್ನು ಹೇಗೆ ತಡೆಯಬಹುದು ಎನ್ನುವುದನ್ನು ಈ ಅಂತರರಾಷ್ಟ್ರೀಯ ತಜ್ಞರಿಂದ ನಾವು ಕಲಿತುಕೊಳ್ಳುವ ಅವಕಾಶ ಲಭಿಸಿದೆ. ಈ ತಂಡಗಳ ಅಧ್ಯಯನಗಳು ನಾವು ಇತ್ತೀಚಿಗೆ ಕೈಗೊಂಡಿರುವ ಕ್ರಮಗಳನ್ನು ಇನ್ನಷ್ಟು ಸುಧಾರಿಸಲು ನೆರವಾಗಲಿವೆ ಎಂದು ಹೇಳಿದ್ದಾರೆ.

ಬ್ರಝಿಲ್, ಭಾರತ, ಇಂಡೋನೇಷ್ಯಾ, ಇಸ್ರೇಲ್, ಮೆಕ್ಸಿಕೊ, ನೆದರ್‌ಲ್ಯಾಂಡ್ಸ್, ನೈಜೀರಿಯಾ,ಸಿಂಗಾಪುರ,ಸ್ಪೇನ್,ಬ್ರಿಟನ್ ಮತ್ತು ಅಮೆರಿಕ ಇತ್ಯಾದಿ ದೇಶಗಳ ತಜ್ಞರು ವಾಟ್ಸ್‌ಆ್ಯಪ್‌ನ ಈ ತಂಡಗಳಲ್ಲಿದ್ದಾರೆ.

ಪ್ರತಿ ತಂಡವೂ ತನ್ನ ಯೋಜನೆಗಾಗಿ ವಾಟ್ಸ್‌ಆ್ಯಪ್‌ನಿಂದ 50,000 ಡಾ.ವರೆಗೆ ಸಂಭಾವನೆಯನ್ನು ಪಡೆಯಲಿದೆ. ವಾಟ್ಸ್‌ಆ್ಯಪ್ ಇದಕ್ಕಾಗಿ ಒಟ್ಟು ಒಂದು ಮಿಲಿಯನ್ ಡಾ.ಗಳನ್ನು ವ್ಯಯಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News