ಮೋಡಿಗೊಳಿಸುವಂಥ ವ್ಯಕ್ತಿತ್ವದ ನೆಹರೂ

Update: 2018-11-13 18:39 GMT

ನೆಹರೂರವರ ಹೆಸರಿನಲ್ಲಿರುವ ವಸ್ತು ಸಂಗ್ರಹಾಲಯದ ಸ್ವರೂಪವನ್ನು ಬದಲಾಯಿಸುವ ಮೂಲಕ ಅಥವಾ ನೆಹರೂರವರ ವಿಚಾರ ಮತ್ತು ಸಾಧನೆಯನ್ನು ಅಣಕಿಸುವುದರ ಮೂಲಕ ತಾವು ಏನನ್ನೋ ಸಾಧಿಸುತ್ತೇವೆ ಎಂದು ಕೆಲವರು ಭ್ರಮೆಯಲ್ಲಿದ್ದಾರೆ. ನೆಹರೂ ಈ ದೇಶದ ಪ್ರಧಾನಿಯಾದಾಗ ಖಜಾನೆಯಲ್ಲಿ ಕಿಲುಬು ಕಾಸೂ ಇರಲಿಲ್ಲ, ವಿಮಾನ ನಿಲ್ದಾಣಗಳಿರಲಿಲ್ಲ, ಕೈಗಾರಿಕೆಗಳಿರಲಿಲ್ಲ, ಆಸ್ಪತ್ರೆಗಳೂ ಇರಲಿಲ್ಲ, ಅನಕ್ಷರಸ್ಥರು ತುಂಬಿ ತುಳುಕುತ್ತಿದ್ದರು, ಬಡತನ ನಮ್ಮನ್ನು ಕಿತ್ತು ತಿನ್ನುತ್ತಿತ್ತು. 200 ವರ್ಷಗಳ ಕಾಲ ನಮ್ಮನ್ನು ಆಳಿದ ಬ್ರಿಟಿಷರು ನಮ್ಮನ್ನು ಕೊಳ್ಳೆ ಹೊಡೆದು ಬರಿದಾದ ಬಡತನದ ದೇಶವನ್ನು ಬಿಟ್ಟು ಹೋಗಿದ್ದರು.

ಅಂತಹ ಸಂದರ್ಭದಲ್ಲಿ ನೆಹರೂ ಪ್ರಧಾನಿಯಾಗಿದ್ದು ಎಂಬುದು, ಇಂದು ಟೀಕಿಸುವ ಜನರಿಗೆ ನೆನಪಿರಲಿ. ಕೈಗಾರಿಕೆಗಳು ಮತ್ತು ಅಣೆಕಟ್ಟುಗಳು, ನಮ್ಮ ದೇಶದ ದೇವಾಲಯಗಳು ಎಂದು ಹೇಳಿದವರು ನೆಹರೂ. ಪಂಚವಾರ್ಷಿಕ ಯೋಜನೆಯ ಮೂಲಕ ನವಭಾರತವನ್ನು ಕಟ್ಟಲು ಸಂಕಲ್ಪಮಾಡಿದವರು ನೆಹರೂ. ಅಲಿಪ್ತ ನೀತಿಯ ಮೂಲಕ ವಿಶ್ವದ ಎಲ್ಲರ ಬಾಂಧವ್ಯವನ್ನು ಹೊಂದಿದ್ದವರು ನೆಹರೂ. ಇಂದು ಎಲ್ಲಾ ರೀತಿಯ ಸೌಲಭ್ಯ ಸೌಕರ್ಯಗಳಿದ್ದು, ಕಳೆದ 7 ದಶಕದ ಅವಧಿಯಲ್ಲಿ ದೇಶ ವೈಜ್ಞಾನಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಾಕಷ್ಟು ಅಭಿವೃದ್ಧಿಯನ್ನು ಕಂಡು ವಿಶ್ವದ ಗಮನವನ್ನು ಸೆಳೆದಿರುವ ಸಂದರ್ಭದಲ್ಲಿ ‘‘ನನ್ನಿಂದಲೇ ಈ ದೇಶ, ನಾನೇ ಈ ದೇಶದ ಸರ್ವಸ್ವ’’ ಎಂಬ ಧೋರಣೆಯನ್ನು ಹೊಂದಿರುವ ನಾಯಕತ್ವದ ನಡುವೆ, ವಿರೋಧ ಪಕ್ಷದವರನ್ನ್ನೂ ಪ್ರೀತಿಸುತ್ತಿದ್ದ, ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿದ್ದ ಅಸೂಯೆ, ದ್ವೇಷದ ರಾಜಕಾರಣದಿಂದ ದೂರ ಉಳಿದು ಮುತ್ಸದ್ದಿತನದಿಂದ ಮೆರೆದ ನೆಹರೂ ಮತ್ತೆ ಮತ್ತೆ ನಮಗೆ ನೆನಪಾಗುತ್ತಾರೆ.

ಭಾರತದ ರಾಜಕೀಯ ಇತಿಹಾಸದಲ್ಲಿ ಜವಾಹರ ಲಾಲ್ ನೆಹರೂರವರ ವ್ಯಕ್ತಿತ್ವ ಶತ ಶತಮಾನಗಳಾದರೂ ಅಚ್ಚಳಿಯದೆ ಉಳಿಯುವಂತಹದು. ಅವರನ್ನು ಅನೇಕ ಕಾರಣಗಳಿಗಾಗಿ ಮೆಚ್ಚಿಕೊಳ್ಳುವವರು ಇದ್ದಾರೆ, ಹಾಗೆಯೇ ಕೆಲವು ಕಾರಣಗಳಿಗಾಗಿ ಅವರ ನಿಲುವುಗಳನ್ನು ಒಪ್ಪಿಕೊಳ್ಳದಿರುವವರೂ ಇದ್ದಾರೆ. ಆದರೂ ಅವರ ವ್ಯಕ್ತಿತ್ವವನ್ನು, ಪಾಂಡಿತ್ಯವನ್ನು, ಆಡಳಿತ ವೈಖರಿಯನ್ನು ಎಲ್ಲರೂ ಒಪ್ಪುತ್ತಾರೆ. ನೆಹರೂ ಕುಟುಂಬವು ದೇಶಕ್ಕೆ ಸೇವೆ ಮತ್ತು ತ್ಯಾಗ ಮಾಡಿರುವುದರಿಂದ ಸ್ವಾತಂತ್ರ್ಯ ಬಂದು 7 ದಶಕಗಳು ಸಮೀಪಿಸುತ್ತಿದ್ದರೂ, ಆ ಕುಟುಂಬದ ಬಗ್ಗೆ ಗೌರವ ಮತ್ತು ಆಸಕ್ತಿ ಜನರಲ್ಲಿ ಉಳಿದಿದೆ. ಮೋತಿಲಾಲ್ ನೆಹರೂರವರು ವೈಭವಯುತ ಬಂಗಲೆಯಾದ ಆನಂದ ಭವನವನ್ನು ರಾಷ್ಟ್ರಕ್ಕೆ ಸಮರ್ಪಿಸಿ, ಸ್ವರಾಜ್ಯ ಭವನವೆಂದು ಮರು ನಾಮಕರಣ ಮಾಡಿದ್ದು ಮತ್ತು ಸ್ವಾತಂತ್ರ್ಯ ಚಳವಳಿಗೆ ಅನೇಕ ರೀತಿಯ ಆರ್ಥಿಕ ನೆರವನ್ನು ನೀಡಿದ್ದು, ಆ ಕುಟುಂಬವು ದೇಶಕ್ಕಾಗಿ ಮಾಡಿದಂತಹ ಅನೇಕ ಸೇವೆಗಳಲ್ಲಿ ಮೊದಲನೆಯದಾಯಿತು. ನೆಹರೂ ಇಂಗ್ಲೆಂಡ್‌ನಲ್ಲಿ ಶಿಕ್ಷಣ ಪಡೆದು ವಿದೇಶಿ ಸಂಸ್ಕೃತಿಯನ್ನು ಮೈಗೂಡಿಸಿ-ಕೊಂಡಿದ್ದರು. ಆದರೆ, 1916ರಲ್ಲಿ ಪಂಡಿತ್ ಮದನ ಮೋಹನ ಮಾಳವೀಯರವರ ಅನೇಕ ರೈತರ ಸಭೆಗಳನ್ನು ಕಂಡು ರಾಷ್ಟ್ರದ ವಿಚಾರದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡರು. ವಿದೇಶಿ ವಸ್ತು ಮತ್ತು ಆಹಾರ ಪದಾರ್ಥಗಳು, ಉಡುಪು, ಎಲ್ಲವನ್ನು ಬದಲಾಯಿಸಿಕೊಂಡು ಪಾದಯಾತ್ರೆ ನಡೆಸಿದರು. 1920ರಲ್ಲಿ ಜಲಿಯನ್ ವಾಲಾ ಬಾಗ್‌ನಲ್ಲಿ ನಡೆದಂತಹ ನರಮೇಧವನ್ನು ಧಿಕ್ಕರಿಸಿ, ಮಹಾತ್ಮಾ ಗಾಂಧೀಜಿ ನೀಡಿದ ಹೋರಾಟದ ಕರೆಗೆ ಓಗೊಟ್ಟು, ಅದರಲ್ಲಿ ಭಾಗವಹಿಸಿ, ಮೊದಲ ಬಾರಿಗೆ ಸೆರೆಮನೆಯ ರುಚಿಯನ್ನು ಕಂಡರು. ಇಲ್ಲಿ ಆರಂಭವಾಯಿತು ಇವರ ಸ್ವಾತಂತ್ರ್ಯದ ಕಿಚ್ಚು ಮತ್ತು ಮಹಾತ್ಮಾ ಗಾಂಧೀಜಿಯವರ ಪ್ರಭಾವ. 1927ರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾದರು. 1928ರಲ್ಲಿ ಸೈಮನ್ ಕಮಿಷನ್ ವಿರುದ್ಧ ನಡೆದಂತಹ ಹೋರಾಟದಲ್ಲಿ ನಾಯಕತ್ವವನ್ನು ವಹಿಸಿ ಮತ್ತೆ 1930ರಲ್ಲಿ ಬಂಧನಕ್ಕೆ ಗುರಿಯಾದರು. 1928ರಲ್ಲಿ ಮೋತಿಲಾಲ್ ನೆಹರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು. ನೆಹರೂರವರು ಮತ್ತೊಮ್ಮೆ ಕಾರ್ಯದರ್ಶಿಯಾದರು.

ಮುಂದಿನ ಕೆಲವೇ ವರ್ಷಗಳಲ್ಲಿ ಸಣ್ಣ ವಯಸ್ಸಿನಲ್ಲೇ ನೆಹರೂರವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು. 1930ರ ದಂಡಿಯಾತ್ರೆ, 1942ರ ಕ್ವಿಟ್ ಇಂಡಿಯಾ ಚಳವಳಿ, ಹೀಗೆ ಅನೇಕ ಚಳವಳಿಗಳಲ್ಲಿ ಗಾಂಧೀಜಿಯವರೊಂದಿಗೆ ಪ್ರಮುಖ ಪಾತ್ರವನ್ನು ನಿರ್ವಹಿಸಿ, ಒಟ್ಟು 7 ವರ್ಷ 10 ತಿಂಗಳು ಕಾಲ ಸೆರೆಮನೆ ಕಂಡಂತಹ ಮಹಾನ್ ದೇಶ ಭಕ್ತ. 1947ರಲ್ಲಿ ನೆಹರೂ ಭಾರತದ ಪ್ರಥಮ ಪ್ರಧಾನಿಯಾಗಿ 17 ವರ್ಷಗಳ ಕಾಲ ಈ ದೇಶವನ್ನು ಮುನ್ನ್ನಡೆಸಿದರು. ನೆಹರೂ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರದ ಅಭಿವೃದ್ಧಿಗಾಗಿ ಬೃಹತ್ ಕೈಗಾರಿಕೆಗಳು ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದರು. ಬೃಹತ್ ಅಣೆಕಟ್ಟುಗಳನ್ನು ಕಟ್ಟುವಂತಹ ಕಾರ್ಯವನ್ನು ಮಾಡಿದರು. ನೆಹರೂ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷ ಎಂಬ ಭೇದವನ್ನೆಣಿಸದೆ ಉತ್ತಮವಾದಂತಹ ನಾಯಕರನ್ನು ಸದಾ ಗೌರವಿಸುತ್ತಾ ಅವರ ಸಲಹೆ, ಮಾರ್ಗದರ್ಶನಗಳಿಗೆ ಆದ್ಯತೆ ನೀಡುತ್ತಿದ್ದರು. ಮಾಜಿ ಪ್ರಧಾನಿ ವಾಜಪೇಯಿಯವರು ಅಂದು ಲೋಕಸಭೆಗೆ ಪ್ರವೇಶಿಸಿದ ಸಂದರ್ಭಗಳಲ್ಲಿ ಇನ್ನೂ ಯುವಕರಾಗಿದ್ದರು. ಆದರೆ, ಅತ್ಯಂತ ಪ್ರತಿಭಾನ್ವಿತರಾಗಿದ್ದರು. ಅದಕ್ಕಾಗಿ ನೆಹರೂರವರು ವಿದೇಶಿ ಪ್ರತಿನಿಧಿಗಳು ಭಾರತಕ್ಕೆ ಭೇಟಿಕೊಟ್ಟಂತಹ ಸಂದರ್ಭಗಳಲ್ಲಿ ವಾಜಪೇಯಿರವರನ್ನು ಅವರಿಗೆ ಪರಿಚಯಿಸುತ್ತ ಹೆಮ್ಮೆಯ ಅಭಿಮಾನದ ಮಾತುಗಳನ್ನಾಡುತ್ತಿದ್ದರು.

ರಾಜಕಾರಣಿಯಾದವರಿಗೆ ರಾಜಕೀಯ ಭಿನ್ನಾಭಿಪ್ರಾಯ ಏನೇ ಇದ್ದರೂ ವ್ಯಕ್ತಿಗತವಾದಂತಹ ದ್ವೇಷ, ಅಸೂಯೆಗಳು ಮತ್ತು ಪ್ರತಿಭಾವಂತರ ಬಗ್ಗೆ ಹೊಟ್ಟೆಕಿಚ್ಚಿನ ಭಾವನೆ ಇರಬಾರದು ಎಂಬುದನ್ನು ತೋರಿಸಿದ್ದು ನೆಹರೂರವರ ದೊಡ್ಡತನ. ನೆಹರೂ ರೂಪಿಸಿದಂತಹ ಪಂಚವಾರ್ಷಿಕ ಯೋಜನೆಗಳು ಅನುಷ್ಠಾನವಾಗು ವುದರಲ್ಲಿ ಕೆಲವೊಂದು ಲೋಪಗಳಿದ್ದರೂ, ಅವರ ಆದ್ಯತೆಗಳಲ್ಲಿ ಕೆಲವೊಂದು ತಪ್ಪುಗಳಿದ್ದರೂ ದೇಶದ ಪ್ರಗತಿಗೆ ಇದರಿಂದ ಹೆಚ್ಚಿನ ನೆರವಾಗಿದೆ ಎಂಬುದರಲ್ಲಿ ಎರಡನೇ ಮಾತಿಲ್ಲ. ನೆಹರೂ ಮತ್ತು ಗಾಂಧೀಜಿಯವರಿಗೆ ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೂ ಇವರ ಸಂಬಂಧ ಗುರು-ಶಿಷ್ಯರ ಸಂಬಂಧವಾಗಿತ್ತು. ಗಾಂಧೀಜಿಯವರು ಅತಿ ಹೆಚ್ಚು ಪ್ರೀತಿಸುತ್ತಿದ್ದ ವ್ಯಕ್ತಿಗಳಲ್ಲಿ ನೆಹರೂ ಮೊದಲಿಗರು. ಅದೇ ರೀತಿಯಲ್ಲಿ ನೆಹರೂ ತಂದೆಯಂತೆ ಹೆಚ್ಚು ಗೌರವವನ್ನು ನೀಡುತ್ತಿದ್ದುದು ಗಾಂಧೀಜಿಗೆ ಮಾತ್ರ. ಮಹಾತ್ಮಾ ಗಾಂಧೀಜಿಯವರ ಆಶೀರ್ವಾದದಿಂದಲೇ ನೆಹರೂ ಈ ರಾಷ್ಟ್ರದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು. ಇತಿಹಾಸ ತಿಳಿಯದ ಅನೇಕರು ಗಾಂಧೀಜಿಯವರ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ನೀಡುತ್ತಾ, ಭಾರತದ ವಿಭಜನೆಗೆ ಗಾಂಧೀಜಿಯವರಿಗೆ ನೆಹರೂರವರ ಮೇಲಿದ್ದ ಪ್ರೀತಿಯೇ ಕಾರಣ ಎಂದು ಸಮರ್ಥಿಸುತ್ತಾರೆ.

ಇತಿಹಾಸವೇನೇ ಇರಲಿ ಒಂದಂತೂ ಸ್ಪಷ್ಟ, ಭಾರತ ದೇಶಕ್ಕೆ ನಾಯಕತ್ವವನ್ನು ನೀಡಿದ ನೆಹರೂ ವಿಶ್ವಮಟ್ಟದಲ್ಲಿಯೂ ಸಹ ಮಾನ್ಯತೆಯನ್ನು ಪಡೆದಂತಹ ನಾಯಕರಾಗಿದ್ದಾರೆ. ದೇಶಕ್ಕಾಗಿ ತ್ಯಾಗವನ್ನು ಮಾಡಿದಂತಹ ಕುಟುಂಬದವರು ಆಗಿದ್ದಾರೆ. ಹಾಗೆಯೇ ಶ್ರೀಮತಿ ಇಂದಿರಾಗಾಂಧಿ, ರಾಜೀವ್‌ಗಾಂಧಿ ಮುಂತಾದ ನಾಯಕರನ್ನು ಈ ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಿದ ವಂಶ ಇದಾಗಿದೆ. ಇಂದು ರಾಷ್ಟ್ರದ ರಾಜಕಾರಣದ ಚಿತ್ರವೇ ಬದಲಾಗಿದೆ. ನೆಹರೂ ತೋರಿದಂತಹ ಹಿರಿತನದ ರಾಜಕಾರಣಿಗಳು ನಮ್ಮೆದುರಿಗೆ ಕಾಣುತ್ತಿಲ್ಲ. ಮುಂದಾಲೋಚನೆಯಿಂದ ದೂರದೃಷ್ಟಿತ್ವದ ಯೋಜನೆಗಳನ್ನು ರೂಪಿಸುವಂತಹ ಕನಸುಗಾರರು ನಮಗೆ ಕಾಣುತ್ತಿಲ್ಲ. ನೆಹರೂರವರಂತೆ ಸಾಂಸ್ಕೃತಿಕವಾಗಿ ಚಿಂತಿಸುವಂತಹ ಸೌಂದರ್ಯದ ಆರಾಧಕರೂ ನಮ್ಮೆದುರಿಗೆ ಇಲ್ಲ. ಹೀಗಾಗಿಯೇ ನೆಹರೂ ನಮಗೆ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ.

Writer - ಕೆ.ಎಸ್. ನಾಗರಾಜ್

contributor

Editor - ಕೆ.ಎಸ್. ನಾಗರಾಜ್

contributor

Similar News