ಶ್ವೇತಭವನದಲ್ಲಿ ದೀಪಾವಳಿ ದೀಪ ಬೆಳಗಿದ ಟ್ರಂಪ್!

Update: 2018-11-14 03:29 GMT

ವಾಷಿಂಗ್ಟನ್, ನ.14: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಶ್ವೇತಭವನದಲ್ಲಿ ಆಯೋಜಿಸಿದ್ದ ದೀಪಾವಳಿ ಸಂಭ್ರಮದಲ್ಲಿ ಭಾಗವಹಿಸಿ ದೀಪ ಬೆಳಗುವ ಮೂಲಕ ಅಚ್ಚರಿ ಮೂಡಿಸಿದರು.

ಟ್ರಂಪ್ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಮೂಲದ ಅಮೆರಿಕನ್ನರನ್ನು ಒಳಗೊಂಡ ಈ ಸಮಾರಂಭದಲ್ಲಿ ಟ್ರಂಪ್ ದಿಢೀರನೇ ಪ್ರತ್ಯಕ್ಷರಾದರು. "ಭಾರತ ಹಾಗೂ ಅಮೆರಿನ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಬಹುಶಃ ಹಿಂದೆಂದಿಗಿಂತಲೂ ನಿಕಟ ಎಂಬ ಭಾರತೀಯ ರಾಯಭಾರಿ ನವತೇಜ್ ಸರ್ನಾ ಅವರ ಮಾತನ್ನು ನಾನು ಒಪ್ಪುತ್ತೇನೆ" ಎಂದು ಟ್ರಂಪ್ ಬಣ್ಣಿಸಿದರು.

ಫೆಡರಲ್ ಕಮ್ಯುನಿಕೇಶನ್ಸ್ ಕಮಿಷನ್ ಅಧ್ಯಕ್ಷ ಅಜಿತ್ ಪೈ, ಡ್ರಗ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ ಆಡಳಿತಾಧಿಕಾರಿ ಉತ್ತಮ್ ಧಿಲ್ಲಾನ್, ಸೆಂಟರ್ ಫಾರ್ ಮೆಡಿಕೇರ್ ಆ್ಯಂಡ್ ಮೆಡಿಕೇಟೆಡ್ ಸರ್ವೀಸಸ್‌ನ ಆಡಳಿತಾಧಿಕಾರಿ ಸೀಮಾ ವರ್ಮಾ ಮತ್ತು ಟ್ರಂಪ್ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಮೂಲದ ಇತರ ಅಧಿಕಾರಿಗಳು ಈ ಚುಟುಕು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಯೂರೋಪ್ ಪ್ರವಾಸದಿಂದ ಆಗಮಿಸಿದ ತಕ್ಷಣ ಟ್ರಂಪ್ ಈ ಸಮಾರಂಭಕ್ಕೆ ಹಾಜರಾದರು.
 ಆಡಳಿತದ ಜಂಜಾಟಗಳ ನಡುವೆ ಕೂಡಾ ಆರಾಮದಾಯಕ ಮತ್ತು ಸಂತೋಷದಿಂದ ಇದ್ದ ಟ್ರಂಪ್, ದೀಪ ಬೆಳಗಲು ಒಂದಷ್ಟು ಶ್ರಮಪಡಬೇಕಾಯಿತು. ಈ ಸಂದರ್ಭದಲ್ಲಿ ಹಾಸ್ಯ ಚಟಾಕಿಯನ್ನೂ ಹಾರಿಸಿದರು.

ಎಲ್ಲ ರಾಜಕೀಯ ಪ್ರಶ್ನೆಗಳನ್ನು ನಿರ್ಲಕ್ಷಿಸಿದ ಟ್ರಂಪ್, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತು ಭಾರತೀಯ ಮೂಲದವರು ಅಮೆರಿಕಕ್ಕೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News