ರಾಜಪಕ್ಷ ಸರಕಾರ ವಿರುದ್ಧ ಅವಿಶ್ವಾಸಮತ ನಿರ್ಣಯ ಅಂಗೀಕರಿಸಿದ ಶ್ರೀಲಂಕಾ ಸಂಸತ್ತು

Update: 2018-11-14 07:22 GMT

ಕೊಲಂಬೊ, ನ.14: ದೇಶದ ಸಂಸತ್ತನ್ನು ವಿಸರ್ಜಿಸಲು ಅಧ್ಯಕ್ಷರು ಹೊರಡಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿದ ಮರುದಿನವೇ ವಿವಾದಿತವಾಗಿ ನೇಮಕಗೊಂಡ ಮಹಿಂದ ರಾಜಪಕ್ಷ ಅವರ ಸರಕಾರದ ವಿರುದ್ಧ ಶ್ರೀಲಂಕಾದ ಸಂಸತ್ತು ಅವಿಶ್ವಾಸಮತ ನಿರ್ಣಯ ಅಂಗೀಕರಿಸಿದೆ.

ರಾಜಪಕ್ಷ ಸರಕಾರದ ವಿರುದ್ಧದ ಅವಿಶ್ವಾಸ ಮತಕ್ಕೆ 225 ಸದಸ್ಯರ ಸಂಸತ್ತಿನ ಬಹುಸಂಖ್ಯಾತ ಸದಸ್ಯರು ಬೆಂಬಲಿಸಿದ್ದಾರೆಂದು ಸ್ಪೀಕರ್ ಕರು ಜಯಸೂರ್ಯ ಘೋಸಿಸಿದರು. ರನಿಲ್ ವಿಕ್ರೆಮೆಸಿಂಘೆ ಸ್ಥಾನದಲ್ಲಿ ರಾಜಪಕ್ಷ ಅವರನ್ನು ಅಕ್ಟೋಬರ್ 26ರಂದು ದೇಶದ ಪ್ರಧಾನಿಯನ್ನಾಗಿಸಲಾಗಿತ್ತು.

ರಾಜಪಕ್ಷ ಅವರು ಅವಿಶ್ವಾಸಮತ ನಿರ್ಣಯದಲ್ಲಿ ಸೋತರೂ ಅದಾಗಲೇ ಪ್ರಧಾನಿಯ ಅಧಿಕೃತ ನಿವಾಸವನ್ನು ಬಿಟ್ಟುಕೊಡಲು ನಿರಾಕರಿಸಿರುವ ವಿಕ್ರೆಮೆಸಿಂಘೆ ಈ ಸಾಂವಿಧಾನಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಗೆದ್ದಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಅವರ ಪಕ್ಷ ಸಂಸತ್ತಿನಲ್ಲಿ ಅತಿ ದೊಡ್ಡ ಪಕ್ಷವಾಗಿದ್ದರೂ, ರಾಜಪಕ್ಷ ಅವರನ್ನು ಬೆಂಬಲಿಸಿರುವ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ.

ಸ್ಪೀಕರ್ ಅವಿಶ್ವಾಸ ಮತ ಪ್ರಕ್ರಿಯೆ ಆರಂಭಿಸುತ್ತಿದ್ದಂತೆಯೇ ಭಾರೀ ಕೋಲಾಹಲದ ಪರಿಸ್ಥಿತಿಯ ನಡುವೆಯೇ ರಾಜಪಕ್ಷ (72) ಹಾಗೂ ಸಂಸದರಾಗಿರುವ ಅವರ ಪುತ್ರ ನಮಲ್ ಅಲ್ಲಿಂದ ಹೊರನಡೆದರು. ರಾಜಪಕ್ಷ ಅವರನ್ನು ಬೆಂಬಲಿಸುವ ಸಂಸದರು ಶಾಸಕಾಂಗದ ಅಧಿಕಾರದ ಸಂಕೇತವಾಗಿರುವ ಗದೆಯನ್ನು ಸೆಳೆಯಲು ಯತ್ನಿಸಿ ಗದ್ದಲವೆಬ್ಬಿಸಲು ಯತ್ನಿಸಿದರೂ ಜಯಸೂರ್ಯ ಪ್ರಕ್ರಿಯೆ ಮುಂದುವರಿಸಿದರು.

ತಮ್ಮ ವಿರುದ್ಧವಾಗಿ ಸ್ಪೀಕರ್ ಕಾರ್ಯಾಚರಿಸಿದ್ದಾರೆಂದು ರಾಜಪಕ್ಷ ಅವರ ಹಲವು ಸಚಿವರು ಸಂಸತ್ತಿನ ಹೊರಗೆ ಬಂದು ನಂತರ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News