ದೇವರ ಮೆರವಣಿಗೆಗೆ ದಾರಿಬಿಡಲು ವಿಮಾನ ನಿಲ್ದಾಣದ ಕಾರ್ಯಾಚರಣೆ ನಿಲ್ಲಿಸಿದರು!

Update: 2018-11-14 16:14 GMT

ತಿರುವನಂತಪುರಂ, ನ.14: ದೇವರ ಮೂರ್ತಿಯ ಮೆರವಣಿಗೆ ಹಾದುಹೋಗುವ ಕಾರಣ ಬುಧವಾರ ಸಂಜೆ 4ರಿಂದ ರಾತ್ರಿ 9ರವರೆಗೆ ಕೇರಳದ ತಿರುವನಂತಪುರಂನ ವಿಮಾನ ನಿಲ್ದಾಣ ಕಾರ್ಯನಿರ್ವಹಿಸಿಲ್ಲ ಎಂದು ವಿಮಾನನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತೀ ವರ್ಷ ತಿರುವನಂಪುರಂನ ಪದ್ಮನಾಭ ಸ್ವಾಮಿ ದೇವಸ್ಥಾನದ ‘ಆರಟು’(ದೇವರ ಸ್ನಾನ) ಪ್ರಯುಕ್ತ ದೇವರ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಶಂಖುಮುಖಂ ಬೀಚ್‌ನಲ್ಲಿ ಪವಿತ್ರ ಸ್ನಾನ ಮಾಡುವ ಆಚರಣೆಯಿದೆ. ಇಲ್ಲಿ ವಿಮಾನನಿಲ್ದಾಣ ಆರಂಭಕ್ಕೂ ಮುನ್ನ, ಅಂದರೆ ತಿರುವಾಂಕೂರು ರಾಜಮನೆತನದ ಕೊನೆಯ ದೊರೆ ಚಿಹಿರ ತಿರುನಾಳ್ ಬಲರಾಮ ವರ್ಮನ ಕಾಲದಿಂದಲೂ ಇದೇ ದಾರಿಯಲ್ಲಿ ದೇವರ ‘ಆರಟ್ಟು’ ಮೆರವಣಿಗೆ ಸಾಗುತ್ತಿತ್ತು. ವಿಮಾನ ನಿಲ್ದಾಣ ಆರಂಭವಾದ ಬಳಿಕ ನಿಲ್ದಾಣದ ರನ್‌ವೇಯ ಮೂಲಕ ಮೆರವಣಿಗೆ ಸಾಗುವ ಕಾರಣ ಪ್ರತೀ ವರ್ಷದ ನಿರ್ಧಿಷ್ಟ ದಿನ ಕೆಲವು ಹೊತ್ತು ವಿಮಾನ ನಿಲ್ದಾಣ ಕಾರ್ಯಾಚರಿಸುವುದಿಲ್ಲ.

ಗರುಡ ವಾಹನ(ಪಲ್ಲಕ್ಕಿ)ದಲ್ಲಿ ಇರಿಸಲಾದ ದೇವರ ಮೂರ್ತಿಯನ್ನು ಭಕ್ತರು ಹೊತ್ತುಕೊಂಡು ಸಾಗುತ್ತಾರೆ. ಆನೆಗಳು, ಬ್ಯಾಂಡ್‌ವಾದ್ಯ, ವಾಲಗಗಳೊಂದಿಗೆ ನೂರಾರು ಭಕ್ತರು ಮೆರವಣಿಗೆಯಲ್ಲಿ ಸಾಗುತ್ತಾರೆ. ತಿರುವಾಂಕೂರು ರಾಜಮನೆತದ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಮೆರವಣಿಗೆ ಇದೇ ದಾರಿಯಲ್ಲಿ ವಾಪಾಸಾಗಿ ದೇವಸ್ಥಾನಕ್ಕೆ ಮರಳುತ್ತದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ವಿಮಾನ ನಿಲ್ದಾಣದ ಆವರಣ ಪ್ರವೇಶಿಸಲು ವಿಶೇಷ ಪಾಸ್ ಪಡೆದುಕೊಳ್ಳಬೇಕು. ಈ ಅವಧಿಯಲ್ಲಿ ವಿಮಾನಗಳ ಹಾರಾಟ ಸೂಚಿತ ಪಟ್ಟಿಯಲ್ಲಿ ಅಗತ್ಯ ಮಾರ್ಪಾಟು ಮಾಡುವಂತೆ ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳಿಗೆ ‘ನೋಟಮ್’(ನೋಟಿಸ್ ಟು ಏರ್‌ಮೆನ್) ಜಾರಿಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News