ರಫೇಲ್ ವಿವಾದಕ್ಕೆ ತಿರುವು: ಸಂಪೂರ್ಣ ಹೊಣೆಗಾರಿಕೆಯ ಜವಾಬ್ದಾರಿಯಿಂದ ಫ್ರಾನ್ಸ್ ಸರಕಾರ ನುಣುಚಿಕೊಂಡಿದ್ದೇಕೆ?

Update: 2018-11-14 16:42 GMT

ರಫೇಲ್ ಯುದ್ಧ ವಿಮಾನ ಒಪ್ಪಂದ ಭಾರತ ಹಾಗೂ ಫ್ರಾನ್ಸ್ ಸರ್ಕಾರಗಳ ನಡುವೆ ಆಗಿರುವುದು. ಆದ್ದರಿಂದ ಭಾರತದ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸುತ್ತಾ ಬಂದಿದ್ದಾರೆ.

ಆದರೆ "ದ ವೈರ್"ಗೆ ಲಭ್ಯವಾಗಿರುವ ಸರ್ಕಾರಿ ದಾಖಲೆಗಳು ಬೇರೆಯೇ ಕಥೆ ಹೇಳುತ್ತವೆ. "ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಸರ್ಕಾರ-ಸರ್ಕಾರಗಳ ನಡುವೆ ಆಗಿರುವ ರಫೇಲ್ ಖರೀದಿ ಕರಡು ಒಪ್ಪಂದದಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳು ಸ್ವೀಕಾರಾರ್ಹವಲ್ಲ ಎಂದು ಫ್ರಾನ್ಸ್ ಹೇಳಿದ ಹಿನ್ನೆಲೆಯಲ್ಲಿ, 2016ರ ಸೆಪ್ಟೆಂಬರ್‍ನಲ್ಲಿ ಉಭಯ ಸರ್ಕಾರಗಳು ಸಹಿ ಮಾಡಿದ ಅಂತರ ಸರ್ಕಾರ ಒಪ್ಪಂದ (ಐಜಿಎ) ವೇಳೆ ಈ ಅಂಶವನ್ನು ದುರ್ಬಲಗೊಳಿಸಲಾಗಿದೆ ಮತ್ತು ಕೈಬಿಡಲಾಗಿದೆ" ಎಂದು ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ಅಭಿಪ್ರಾಯಪಟ್ಟಿರುವುದು ಇದೀಗ ಬೆಳಕಿಗೆ ಬಂದಿದೆ.

ಅಂದರೆ ಉಭಯ ಸರ್ಕಾರಗಳ ನಡುವಿನ ಕರಡು ಒಪ್ಪಂದದಲ್ಲಿ ಉಲ್ಲೇಖವಿದ್ದು, ಫ್ರಾನ್ಸ್ ಸ್ವೀಕರಿಸದ ಎರಡು ಪ್ರಮುಖ ಅಂಶಗಳು ಯಾವುವು?... ಸರ್ಕಾರಗಳ ನಡುವಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವಾಲಯ, "ಸಾಧನಗಳ ಪೂರೈಕೆ ಮತ್ತು ಸಂಬಂಧಿತ ಕೈಗಾರಿಕಾ ಸೇವೆಗಳ ಹೊಣೆಗಾರಿಕೆ ಮತ್ತು ಒಪ್ಪಂದದ ಸಂಪೂರ್ಣ ನಿರ್ವಹಣೆ ವಿದೇಶಿ ಸರ್ಕಾರದ ಬಳಿಯೇ ಉಳಿದಿದೆ” ಎಂದು ರಕ್ಷಣಾ ಸಚಿವಾಲಯಕ್ಕೆ ತನ್ನ ಸ್ಪಷ್ಟ ಅಭಿಪ್ರಾಯವನ್ನು ನೀಡಿದೆ.

ಸಚಿವಾಲಯ ಉಲ್ಲೇಖಿಸಿರುವ ಎರಡನೇ ಪ್ರಮುಖ ಷರತ್ತು ಎಂದರೆ, "ವ್ಯಾಜ್ಯ ಪರಿಹಾರ ವ್ಯವಸ್ಥೆಯು ಸರ್ಕಾರದಿಂದ ಸರ್ಕಾರ ಮಟ್ಟದಲ್ಲೇ ಉಳಿದಿದೆ".

ಆದಾಗ್ಯೂ ಐಜಿಎ ಒಪ್ಪಂದ ಮಾತುಕತೆಯ ವೇಳೆ ಕೆಲ ನಿರ್ದಿಷ್ಟ ಸೂಕ್ಷ್ಮ ವಿವಾದಗಳು ಉದ್ಭವಿಸಿದ್ದು, ಇಲ್ಲಿ ಫ್ರಾನ್ಸ್ ಸರ್ಕಾರ ತನ್ನ ಸ್ವಂತ ಜವಾಬ್ದಾರಿ ಹಾಗೂ ಹೊಣೆಗಾರಿಕೆಗಳನ್ನು ಕೈಗಾರಿಕಾ ಪೂರೈಕೆ ಕಂಪನಿಯಾದ ಡಸಾಲ್ಟ್ ಏವಿಯೇಷನ್ ಗೆ ವರ್ಗಾಯಿಸಿದೆ.

ಉದಾಹರಣೆಗೆ, ಭವಿಷ್ಯದಲ್ಲಿ ಒಪ್ಪಂದವನ್ನು ಉಲ್ಲಂಘಿಸಿದ ಪಕ್ಷದಲ್ಲಿ ಅಥವಾ ಯಾವುದೇ ವ್ಯಾಜ್ಯ ಸೃಷ್ಟಿಯಾದಲ್ಲಿ, ಭಾರತ ಸರ್ಕಾರವು ವ್ಯಾಜ್ಯ ನಿರ್ಣಯ ಪ್ರಕ್ರಿಯೆಯನ್ನು ಸಾಧನ ಪೂರೈಸಿದ ಕಂಪನಿಯಾದ ಡಸಾಲ್ಟ್ ವಿರುದ್ಧ ನಡೆಸಬೇಕು ಎಂದು ಫ್ರಾನ್ಸ್ ಸರ್ಕಾರ ಪಟ್ಟುಹಿಡಿದಿದೆ. ಈ ಮೂಲಕ ಫ್ರಾನ್ಸ್ ಸರ್ಕಾರ, ಒಪ್ಪಂದದ ಜಾರಿ ವಿಷಯದಲ್ಲಿ ನೇರವಾಗಿ ಸಂಪೂರ್ಣ ಖಾತ್ರಿಯನ್ನು ನೀಡುವ ಹೊಣೆಯಿಂದ ನುಣುಚಿಕೊಂಡಿದ್ದು, ಅದನ್ನು ಕಂಪನಿಗೇ ಬಿಟ್ಟುಬಿಟ್ಟಿದೆ. ಫ್ರಾನ್ಸ್ ಸರ್ಕಾರ ನೇರವಾಗಿ ಸಂಪೂರ್ಣ ಖಾತರಿಯನ್ನು ನೀಡುವ ಅಂಶವನ್ನು 36 ರಫೇಲ್ ಯುದ್ಧವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಉಭಯ ಸರ್ಕಾರಗಳ ನಡುವೆ ಮಾಡಿಕೊಂಡ ಒಪ್ಪಂದದ ಪ್ರಮುಖ ಅಂಶ ಎಂದು ಕಾನೂನು ಸಚಿವಾಲಯ ಪರಿಗಣಿಸಿತ್ತು. ಆದರೆ ಅಂತಿಮ ಒಪ್ಪಂದದಲ್ಲಿ ಈ ಸಂಪೂರ್ಣ ಖಾತರಿ ಹೊಣೆಯಿಂದ ಫ್ರಾನ್ಸ್ ಸರ್ಕಾರ ನುಣುಚಿಕೊಂಡಿದೆ.

ಆದರೆ ಕಾನೂನು ಸಚಿವಾಲಯ, ಐಜಿಎ ಒಪ್ಪಂದದಲ್ಲಿ ಹೊಸದಾಗಿ ಒಂದು ವಿಧಿಯನ್ನು ಸೇರಿಸಿದ್ದು, ಇದರಲ್ಲಿ ಫ್ರಾನ್ಸ್ ಸರ್ಕಾರ ಮತ್ತು ಕೈಗಾರಿಕಾ ಪೂರೈಕೆದಾರ ಕಂಪನಿಯ "ಜಂಟಿ ಹಾಗೂ ವಿವಿಧ ಹೊಣೆಗಾರಿಕೆ"ಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಇಷ್ಟಾಗಿಯೂ ಈ ಒಪ್ಪಂದದ ಜಾರಿ ಸಂದರ್ಭದ ಭವಿಷ್ಯದ ಹೊಣೆಗಾರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಫ್ರಾನ್ಸ್ ಸರ್ಕಾರ ವಹಿಸಿಕೊಳ್ಳಬೇಕು ಎಂಬ ಸಚಿವಾಲಯ ನೀಡಿದ ಸಲಹೆಯ ಮಟ್ಟವನ್ನು ಇದು ತಲುಪಿಲ್ಲ.

ಕ್ರಮೇಣ ಫ್ರಾನ್ಸ್ ಸರ್ಕಾರ, "ಲೆಟರ್ ಆಫ್ ಕಂಫರ್ಟ್" ನೀಡಲು ಒಪ್ಪಿಕೊಂಡಿದ್ದರೂ, ಕಾನೂನಾತ್ಮಕವಾಗಿ ಇದು ಸಂಪೂರ್ಣ ಖಾತರಿಗಿಂತ ದುರ್ಬಲ.

ಅಂತರರಾಷ್ಟ್ರೀಯ ವ್ಯಾಪಾರ ಕಾನೂನುಗಳ ಬಗೆಗಿನ ವಿಶ್ವಸಂಸ್ಥೆಯ ಆಯೋಗದ ನಿಯಮಾವಳಿ ಅನ್ವಯ ಜಿನೀವಾದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಂತರರಾಷ್ಟ್ರೀಯ ವ್ಯಾಜ್ಯ ನಿರ್ಣಯ ವ್ಯವಸ್ಥೆಯ ಎದುರು ಕಾನೂನಾತ್ಮಕವಾಗಿ ಈ ಒಪ್ಪಂದ ನಿಲ್ಲುತ್ತದೆಯೇ ಎನ್ನುವುದು ರಕ್ಷಣಾ ಸಚಿವಾಲಯದ ಆತಂಕವಾಗಿದೆ. ಏಕೆಂದರೆ, ಭಾರತ ಸರ್ಕಾರ ಮತ್ತು ಫ್ರಾನ್ಸ್‍ನ ಪೂರೈಕೆ ಕಂಪನಿ ಡಸಾಲ್ಟ್ ನಡುವೆ ಎಲ್ಲೂ ನೇರ ಒಪ್ಪಂದವಾಗಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ಡಸಾಲ್ಟ್ ಜತೆ ನೇರ ಒಪ್ಪಂದವಾಗಿಲ್ಲ; ಭಾರತ ಸರ್ಕಾರ ಒಪ್ಪಂದ ಮಾಡಿಕೊಂಡಿರುವುದು ಫ್ರಾನ್ಸ್ ಸರ್ಕಾರದ ಜತೆಗೆ ಎಂದು ಬಹಿರಂಗವಾಗಿ ಸ್ಪಷ್ಟಪಡಿಸಿದ್ದಾರೆ. ಇದರ ಪರಿಣಾಮವಾಗಿ ರಕ್ಷಣಾ ಸಚಿವಾಲಯ ಕೂಡಾ ಈ ನಡೆಯನ್ನು ಪ್ರಶ್ನಿಸಿದೆ. "ಸರ್ಕಾರದಿಂದ ಸರ್ಕಾರದ ನಡುವಿನ ಖರೀದಿ ಒಪ್ಪಂದದಲ್ಲಿ ಫ್ರಾನ್ಸ್‍ ನ ಕೈಗಾರಿಕಾ ಪೂರೈಕೆದಾರ ಕಂಪನಿಯ ಜತೆಗೆ ವ್ಯಾಜ್ಯ ಪರಿಹಾರದ ಅಂಶವನ್ನು ಸೇರಿಸಲಾಗಿದೆಯೇ?” ಎನ್ನುವುದು ರಕ್ಷಣಾ ಸಚಿವಾಲಯದ ಪ್ರಶ್ನೆ.

ರಕ್ಷಣಾ ಸಚಿವಾಲಯದ ಈ ಪ್ರಶ್ನೆಗೆ ಕಾನೂನು ಸಚಿವಾಲಯ ಸ್ಪಷ್ಟನೆ ನೀಡಿ, "ಭಾರತ ಸರ್ಕಾರ, ಫ್ರಾನ್ಸ್ ಕೈಗಾರಿಕಾ ಪೂರೈಕೆದಾರ ಕಂಪನಿ ಡಸಾಲ್ಟ್ ಜತೆ ನೇರ ವ್ಯಾಜ್ಯ ಪರಿಹಾರಕ್ಕೆ ಮುಂದಾಗುವುದು ಸಮರ್ಥನೀಯವಲ್ಲ; ಏಕೆಂದರೆ ವ್ಯಾಜ್ಯ ಪರಿಹಾರ ಒಪ್ಪಂದಕ್ಕೆ ಭಾರತ ಸಹಿ ಮಾಡಿಲ್ಲ ಅಥವಾ ಅದನ್ನೂ ದೃಢೀಕರಿಸಲೂ ಇಲ್ಲ" ಎಂದಿದೆ.

"ಭಾರತೀಯ ನಿಯೋಗವು ಒಪ್ಪಂದ ಮಾತುಕತೆ ವೇಳೆ, ಪೂರೈಕೆ ಶಿಷ್ಟಾಚಾರದ ಜಾರಿಗೆ ಸೂಚನೆ ನೀಡುವ ವಿಷಯದಲ್ಲಿ ಕೈಗಾರಿಕಾ ಪೂರೈಕೆದಾರ ಕಂಪನಿಯ ಮೇಲೆ ಫ್ರಾನ್ಸ್ ಸರ್ಕಾರಕ್ಕೆ ಯಾವ ಹಿಡಿತವಿದೆ ಮತ್ತು ಕಾನೂನಾತ್ಮಕವಾಗಿ ಇದು ಪರಿಣಾಮಗಳೇನು ಎಂಬ ಬಗ್ಗೆ ಭಾರತಕ್ಕೆ ತಿಳಿಸಬೇಕು ಎಂದು ಫ್ರಾನ್ಸ್ ಸರ್ಕಾರವನ್ನು ಆಗ್ರಹಿಸಿತ್ತು. ಆದಾಗ್ಯೂ, ಫ್ರಾನ್ಸ್ ನಿಯೋಗ ಈ ಒಪ್ಪಂದದ ಅಂಶಗಳನ್ನು ಭಾರತೀಯ ನಿಯೋಗಕ್ಕೆ ನೀಡಿಲ್ಲ" ಎಂದು ಕಾನೂನು ಸಚಿವಾಲಯ ಸ್ಪಷ್ಟಪಡಿಸಿದೆ.

ಅಂತಿಮವಾಗಿ ಮನೋಹರ್ ಪಾರಿಕ್ಕರ್ ನೇತೃತ್ವದ ರಕ್ಷಣಾ ಸಚಿವಾಲಯ, ಸರ್ಕಾರ- ಸರ್ಕಾರ ನಡುವೆ ಆಗಿರುವ ಒಪ್ಪಂದದ ಪ್ರಮುಖ ಅಂಶವನ್ನು ಉಳಿಸಿಕೊಳ್ಳುವ ಬಗ್ಗೆ ಕಾನೂನು ಸಚಿವಾಲಯ ನೀಡಿದ ಸಲಹೆಯನ್ನು ಒಪ್ಪಿಕೊಂಡಿದೆ. ಒಪ್ಪಂದದ ಜಾರಿಯ ಹೊಣೆಯನ್ನು ಸಂಪೂರ್ಣ ಖಾತರಿಯೊಂದಿಗೆ ನಿರ್ವಹಿಸುವುದು ಫ್ರಾನ್ಸ್ ಸರ್ಕಾರದ ನೇರ ಹೊಣೆಗಾರಿಕೆ ಮತ್ತು ಡಸಾಲ್ಟ್ ಜತೆ ಭವಿಷ್ಯದಲ್ಲಿ ಯಾವುದೇ ವ್ಯಾಜ್ಯ ಸೃಷ್ಟಿಯಾದ ಸಂದರ್ಭದಲ್ಲಿ ಭಾರತ ನೇರವಾಗಿ ಡಸಾಲ್ಟ್ ಜತೆ ವ್ಯವಹರಿಸುವುದಿಲ್ಲ ಎನ್ನುವುದು ಈ ಪ್ರಮುಖ ಅಂಶವಾಗಿದೆ.

ಆದರೆ ಫ್ರಾನ್ಸ್‍ಗೆ ಇದು ಸ್ವೀಕಾರಾರ್ಹವಾಗಿಲ್ಲ. ಕೊನೆಗೆ ರಕ್ಷಣಾ ಸಚಿವರು ಈ ಸಂಬಂಧ ಹೇಳಿಕೆ ನೀಡಿ, ಈ ಪ್ರಮುಖ ಅಂಶಗಳನ್ನು ಕೈಬಿಡುವ ಬಗ್ಗೆ ಭದ್ರತೆ ಬಗೆಗಿನ ಸಚಿವ ಸಂಪುಟ ಸಮಿತಿಯ ಮಟ್ಟದಲ್ಲಿ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದರು. ಅಂತಿಮವಾಗಿ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ (ಸಿಸಿಎಸ್) ಈ ಎರಡು ಪ್ರಮುಖ ಅಂಶಗಳ ಬಗ್ಗೆ ನಿರ್ಧಾರ ಕೈಗೊಂಡು, ಇದನ್ನು ಮನ್ನಾ ಮಾಡಲು, 2016ರ ಆಗಸ್ಟ್ 24ರಂದು ನಡೆದ ಸಭೆಯಲ್ಲಿ ನಿರ್ಧರಿಸಿತು.

ಭಾರತ ಮತ್ತು ಫ್ರಾನ್ಸ್ ನಡುವಿನ ಒಪ್ಪಂದಕ್ಕೆ ಅಂತಿಮವಾಗಿ 2016ರ ಸೆಪ್ಟೆಂಬರ್ 23ರಂದು ಸಹಿ ಮಾಡಲಾಯಿತು.

Writer - ಎಂ.ಕೆ.ವೇಣು, thewire.in

contributor

Editor - ಎಂ.ಕೆ.ವೇಣು, thewire.in

contributor

Similar News