ಭಾರತದ ಜೊತೆ ಹಲವು ಒಪ್ಪಂದಗಳಲ್ಲಿ ಅಮೆರಿಕಾ, ರಷ್ಯಾ ಸರಕಾರಗಳು ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿಲ್ಲ

Update: 2018-11-15 07:25 GMT

ರಫೇಲ್ ವಿವಾದದಿಂದ ಮತ್ತೊಂದು ಅಂಶ ಬೆಳಕಿಗೆ

ಹೊಸದಿಲ್ಲಿ, ನ.15: ಬರೋಬ್ಬರಿ  59,000 ಕೋಟಿ ರೂ. ಮೌಲ್ಯದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಫ್ರಾನ್ಸ್ ಸರಕಾರ ಖಾತರಿ ಒದಗಿಸಿಲ್ಲದೇ ಇದ್ದರೂ ಅದು  ಭರವಸೆಯ ಪತ್ರ (ಕಂಫರ್ಟ್ ಲೆಟರ್)  ನೀಡಿದ ಬಳಿಕ ಭಾರತ ಸರಕಾರ ಸೆಪ್ಟೆಂಬರ್ 2016ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತೆಂಬ ಅಂಶ ಬುಧವಾರದ ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ತಿಳಿದು ಬಂದ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ``ಅಂತರ್-ಸರಕಾರ ಒಪ್ಪಂದವೇ  ಖಾತರಿ ಒದಗಿಸಿದಂತೆ'' ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.  `ಸೋವರಿನ್ ಗ್ಯಾರೆಂಟಿ' ಪದವೇ ಇಲ್ಲ, ಭಾರತ ಈ ಹಿಂದೆ ರಷ್ಯ, ಅಮೆರಿಕಾ ಸರಕಾರಗಳೊಂದಿಗೆ ಸಹಿ ಹಾಕಿದ ಒಪ್ಪಂದಗಳ ವೇಳೆಯೂ ಅಲ್ಲಿನ ಸರಕಾರಗಳು ಇಂತಹ  ಖಾತರಿ ಒದಗಿಸಿಲ್ಲ ಎಂದು ಕೆಲವು ಇತರ ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ ಒಂದು ಸರಕಾರ ಒದಗಿಸುವ ಸೋವರಿನ್ ಗ್ಯಾರಂಟಿಯು ಭರವಸೆಯ ಪತ್ರಕ್ಕಿಂತ ಹೆಚ್ಚಿನ ಮಹತ್ವ ಪಡೆದಿದೆ ಎಂಬುದು ನಿಸ್ಸಂಶಯ. ರಫೇಲ್ ಒಪ್ಪಂದದ ಎಲ್ಲಾ ಅಂಶಗಳೂ ಜಾರಿಯಾಗುವಂತೆ ಫ್ರಾನ್ಸ್ ಸರಕಾರ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು  ಭಾರತದ ಕಾನೂನು ಸಚಿವಾಲಯ ಒತ್ತಡ ಹೇರಿದ್ದರೂ  ಫ್ರಾನ್ಸ್ ಸರಕಾರ ಈ ನಿಟ್ಟಿನಲ್ಲಿ ಆಸಕ್ತಿ ವಹಿಸದೆ ಮುಂದಿನ ಹಂತದಲ್ಲಿ ಯಾವುದೇ ವಿವಾದವೆದ್ದರೂ ಭಾರತ ಸರಕಾರವು ಯುದ್ಧ ವಿಮಾನ ಪೂರೈಕೆದಾರ ಕಂಪೆನಿ ಡಸಾಲ್ಟ್ ಏವ್ಯೇಷನ್ ಜತೆಗೆ ಅದನ್ನು ಪರಿಹರಿಸಬೇಕೆಂದು ಹೇಳಿತ್ತು.

ನಂತರ ಭಾರತದಲ್ಲಿ ಸರಕಾರಿ ಮಟ್ಟದಲ್ಲಿ ಬಹಳಷ್ಟು ಚರ್ಚೆಗಳು ನಡೆದು  ಫ್ರಾನ್ಸ್ ಸರಕಾರದ ಭರವಸೆಯ ಪತ್ರ ಒಪ್ಪಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News