ವಕೀಲೆ ದೀಪಿಕಾ ರಜಾವತ್ ರನ್ನು ಕೈಬಿಟ್ಟ ಕಥುವಾ ಸಂತ್ರಸ್ತೆಯ ಕುಟುಂಬ

Update: 2018-11-15 11:06 GMT

ಜಮ್ಮು, ನ.15: ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಕುಟುಂಬವು ತಮ್ಮ ವಕೀಲೆ ದೀಪಿಕಾ ರಜಾವತ್ ಅವರನ್ನು ಕೈಬಿಟ್ಟಿದೆ. ಆಕೆ ಇಲ್ಲಿನ ತನಕ ಕೇವಲ ಎರಡು ಬಾರಿ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಆಗಮಿಸಿದ್ದರೆಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

ವಕೀಲೆಯನ್ನು ಕೈಬಿಟ್ಟ ಬಗ್ಗೆ ಸಂತ್ರಸ್ತೆಯ ತಂದೆ ಪಂಜಾಬ್ ರಾಜ್ಯದ ಪಠಾಣ್ ಕೋಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದೀಪಿಕಾ ಇನ್ನು ಮುಂದೆ ತಮ್ಮನ್ನು ಪ್ರತಿನಿಧಿಸುವುದಿಲ್ಲ ಹಾಗೂ ಆಕೆಗೆ ನೀಡಲಾಗಿದ್ದ ಪವರ್ ಆಫ್ ಅಟಾರ್ನಿಯನ್ನು ವಾಪಸ್ ಪಡೆಯಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.

``ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ 100 ಬಾರಿ ವಿಚಾರಣೆ ನಡೆದು ಸುಮಾರು 100 ಮಂದಿ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿದ್ದರೂ ದೀಪಿಕಾ ಅವರು ಮಾತ್ರ ಕೇವಲ ಎರಡು ಬಾರಿ ಹಾಜರಾಗಿದ್ದಾರೆ” ಎಂದು ಸಂತ್ರಸ್ತೆಯ ತಂದೆ ದೂರಿದ್ದಾರೆ.

ಕಥುವಾದ ಎಂಟು ವರ್ಷದ ಸಂತ್ರಸ್ತೆಯ ಕುಟುಂಬದ ಪರ ವಾದಿಸಲು ದೀಪಿಕಾ ರಜಾವತ್ ಅವರು ಒಪ್ಪಿದಾಗ ಭಾರೀ ಸುದ್ದಿಯಾಗಿದ್ದರಲ್ಲದೆ, ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದೂ ಅವರು ದೂರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಂಜಿ ರಾಮ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News