ರಕ್ಷಣಾ ಖರೀದಿ ಭರದಿಂದ ನಡೆಯುತ್ತಿದೆ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

Update: 2018-11-15 17:39 GMT

ಹೊಸದಿಲ್ಲಿ,ನ.15: ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನಗಳ ಖರೀದಿ ಕುರಿತಂತೆ ಸೃಷ್ಟಿಯಾಗಿರುವ ವಿವಾದಗಳ ನಡುವೆಯೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು,ರಕ್ಷಣಾ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ ಮತ್ತು ಅದು ಭರದಿಂದ ಸಾಗುತ್ತಿದೆ,ಆದರೆ ಅಗತ್ಯವಾಗಿರುವ ಶ್ರದ್ಧೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಗುರುವಾರ ಇಲ್ಲಿ ಹೇಳಿದರು.

 ಇಂಡಿಯನ್ ಡಿಫೆನ್ಸ್ ಕಾಂಕ್ಲೇವ್‌ನಲ್ಲಿ ದೇಶಿಯ ರಕ್ಷಣಾ ಉಪಕರಣಗಳ ತಯಾರಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಸಶಸ್ತ್ರ ಪಡೆಗಳು ನಿಮ್ಮಿಂದ ಉತ್ಪನ್ನಗಳನ್ನು ಖರೀದಿಸುವುದನ್ನು ತಾನು ಕಡ್ಡಾಯಗೊಳಿಸುವಂತಿಲ್ಲ. ಹೀಗಾಗಿ ನೀವು ನಿಮ್ಮ ಉತ್ಪನ್ನಗಳ ಗುಣಮಟ್ಟ, ಉದ್ದೇಶ,ಉಪಯುಕ್ತತೆ ಮತ್ತು ಪ್ರಸಕ್ತತೆಯನ್ನು ಸಶಸ್ತ್ರ ಪಡೆಗಳಿಗೆ ಮನದಟ್ಟು ಮಾಡುವುದು ಅಗತ್ಯವಾಗಿದೆ. ಕಾರ್ಯಾಚರಣೆಗಳಿಗೆ ಸಶಸ್ತ್ರ ಪಡೆಗಳ ಸನ್ನದ್ಧತೆಗೆ ಯಾವುದೇ ತಡೆಯುಂಟಾಗದಂತೆ ನೊಡಿಕೊಳ್ಳುವ ನಿಟ್ಟಿನಲ್ಲಿ ತಾನು ಶ್ರಮಿಸಬೇಕಿದೆ ಎಂದು ಹೇಳಿದರು.

ತನ್ನ ಪೂರ್ವಾಧಿಕಾರಿಗಳಾಗಿದ್ದ ಮನೋಹರ ಪಾರಿಕ್ಕರ್ ಮತ್ತು ಅರುಣ್ ಜೇಟ್ಲಿ ಅವರನ್ನು ಪ್ರಶಂಸಿಸಿದ ಸೀತಾರಾಮನ್, ಅವರು ರಕ್ಷಣಾ ಖರೀದಿಯನ್ನು ಸರಳಗೊಳಿಸುವ ಜೊತೆಗೆ ಅದರಲ್ಲಿ ಪಾರದರ್ಶಕತೆಯನ್ನೂ ಖಚಿತಪಡಿಸಿದ್ದಾರೆ ಎಂದರು.

ದೇಶಿಯ ಮಾರುಕಟ್ಟೆಯನ್ನು ಮಾತ್ರ ಕೇಂದ್ರೀಕರಿಸದೆ ರಫ್ತು ಮಾರುಕಟ್ಟೆಯತ್ತಲೂ ಗಮನ ಹರಿಸುವಂತೆ ರಕ್ಷಣಾ ತಯಾರಕರನ್ನು ಆಗ್ರಹಿಸಿದ ಅವರು,ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಉದ್ಯಮಕ್ಕೆ ಸಾಧ್ಯವಿರುವ ಎಲ್ಲ ನೆರವುಗಳು ದೊರೆಯುವಂತೆ ಸರಕಾರವು ನೋಡಿಕೊಳ್ಳಲಿದೆ ಎಂದು ಭರವಸೆಯನ್ನು ನೀಡಿದರು.

ದೇಶಿಯ ರಕ್ಷಣಾ ಉಪಕರಣಗಳ ತಯಾರಕರನ್ನು ಉತ್ತೇಜಿಸಲು ಈ ಹಿಂದೆ ಆರ್ಡನನ್ಸ್ ಫ್ಯಾಕ್ಟರಿಗಳು ಮತ್ತು ಸಾರ್ವಜನಿಕ ಕ್ಷೇತ್ರದ ರಕ್ಷಣಾ ಉದ್ಯಮಗಳಿಗೆ ಮೀಸಲಾಗಿದ್ದ ಹಲವಾರು ಉಪಕರಣಗಳನ್ನು ಆ ಪಟ್ಟಿಯಿಂದ ತೆಗೆಯಲಾಗಿದೆ ಎಂದು ತಿಳಿಸಿದ ಅವರು,ಸರಕಾರದ ‘ಮೇಕ್ ಇನ್ ಇಂಡಿಯಾ ’ ಕೇವಲ ಕಾಗದದ ಮೇಲಿನ ಯೋಜನೆಯಲ್ಲ ಮತ್ತು ಅಗತ್ಯ ಆದೇಶಗಳನ್ನು ಹೊರಡಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News