ಸಂಘಪರಿವಾರದಿಂದ ಬೆದರಿಕೆ: ಟಿ.ಎಂ.ಕೃಷ್ಣರ ಕಾರ್ಯಕ್ರಮ ರದ್ದುಗೊಳಿಸಿದ ಎಎಐ

Update: 2018-11-15 18:53 GMT

ಹೊಸದಿಲ್ಲಿ,ನ.15: ಸಘಪರಿವಾರದಿಂದ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಮತ್ತು ಎಸ್ಪಿಐಸಿ-ಎಂಎಸಿಎವೈ ಜಂಟಿಯಾಗಿ ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಖ್ಯಾತ ಕರ್ನಾಟಿಕ್ ಸಂಗೀತಗಾರ ಟಿ.ಎಂ. ಕೃಷ್ಣ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ನೆಹರೂ ಪಾರ್ಕ್‌ನಲ್ಲಿ ನವೆಂಬರ್ 17-18ರಂದು ನಡೆಯಲಿರುವ ಉದ್ಯಾನವನದಲ್ಲಿ ನೃತ್ಯ ಮತ್ತು ಸಂಗೀತ ಹಬ್ಬದ ಭಾಗವಾಗಿ ಟಿ.ಎಂ. ಕೃಷ್ಣರ ಸಂಗೀತ ಕಛೇರಿಯನ್ನು ಆಯೋಜಿಸಲಾಗಿತ್ತು. ಹಬ್ಬದ ಭಾಗವಾಗಿ ಆಯೋಜಿಸಿರುವ ಸಂಗೀತ ಕಾರ್ಯಕ್ರಮದಲ್ಲಿ ಕಛೇರಿ ನಡೆಸಲು ನನ್ನನ್ನು ಆಹ್ವಾನಿಸಲಾಗಿದೆ ಎಂದು ಕೃಷ್ಣ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಕೃಷ್ಣ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದನ್ನು ವಿರೋಧಿಸಿ ಟ್ವಿಟ್ಟರ್‌ನಲ್ಲಿ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು. ಕೃಷ್ಣ ಅವರು ಜೀಸಸ್ ಮತ್ತು ಅಲ್ಲಾಹುವಿನ ಹಾಡುಗಳನ್ನು ಹಾಡುತ್ತಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರೆ ಇನ್ನು ಕೆಲವರು ಕೃಷ್ಣರನ್ನು ದೇಶದ್ರೋಹಿ, ನಗರ ನಕ್ಸಲ್ ಎಂದೆಲ್ಲಾ ಕರೆದಿದ್ದರು. ಈ ಟ್ವೀಟ್‌ಗಳೊಂದಿಗೆ ರೈಲ್ವೇ, ಕಲ್ಲಿದ್ದಲು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಪಿಯೂಶ್ ಗೋಯಲ್ ಮತ್ತು ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನೂ ಟ್ಯಾಗ್ ಮಾಡಲಾಗಿದ್ದು ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಯಾರು ವಹಿಸಿಕೊಂಡಿದ್ದಾರೆ ಎಂದು ತಿಳಿದಿದೆಯೇ ಎಂದು ಪ್ರಶ್ನಿಸಲಾಗಿತ್ತು. ಬೆದರಿಕೆಗಳ ಹಿನ್ನೆಲೆಯಲ್ಲಿ ಕೃಷ್ಣರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ನಿರಾಕರಿಸಿರುವ ಎಎಐ ಮುಖ್ಯಸ್ಥ ಗುರುಪ್ರಸಾದ್ ಮೊಹಪಾತ್ರ ಕೆಲವೊಂದು ತುರ್ತು ಸಮಸ್ಯೆಗಳ ಕಾರಣದಿಂದ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News