ಸೋನಿಯಾ ಇಟಲಿ ಏಜೆಂಟ್: ಆದಿತ್ಯನಾಥ್

Update: 2018-11-16 04:45 GMT

ಜಶ್‌ಪುರ (ಛತ್ತೀಸ್‌ಗಢ), ನ.16: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು 'ಇಟಲಿಯ ಏಜೆಂಟ್' ಎಂದು ಕರೆಯುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಛತ್ತೀಸ್‌ಗಢದ ಎರಡನೇ ಹಂತದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಇಟಲಿ ಏಜೆಂಟ್, ರಾಜ್ಯದ ಬುಡಕಟ್ಟು ಜನರ ಮತಾಂತರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು" ಎಂದು ಗಂಭೀರ ಆರೋಪ ಮಾಡಿದರು,

ಇಟಲಿಯಿಂದ ಆಮದಾದ ಏಜೆಂಟರು ಬುಡಕಟ್ಟು ಜನರ ಮತಾಂತರದಂತಹ ರಾಷ್ಟ್ರವಿರೋಧಿ ಕೃತ್ಯ ಎಸಗಿದ್ದಾರೆ ಎಂದು ಆದಿತ್ಯನಾಥ್ ಹೇಳಿದರು. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಎಂದು ಆಪಾದಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಮತಾಂತರ ದಂಧೆ ಮಿತಿಮೀರಿತ್ತು ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯ ದಿವಂಗತ ಸಂಸದ ದಿಲೀಪ್ ಸಿಂಗ್ ಜುದೇವ್ ಇದರ ವಿರುದ್ಧ ಹೋರಾಡಿ ಜಶ್‌ಪುರ ಮತ್ತೊಂದು ಬಸ್ತರ್ ಆಗುವುದನ್ನು ತಡೆದರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಬಣ್ಣಿಸಿದರು.

"ಹಾವು ಕಡಿಯುತ್ತದೆ ಎಂದು ಗೊತ್ತಿದ್ದರೂ ಹಿಂದೂ ಸಮಾಜ ಹಾವಿಗೆ ಹಾಲೆರೆಯುತ್ತದೆ. ತ್ಯಾಗಕ್ಕೆ ಹೆಸರಾದ ಹಿಂದೂ ಸಮಾಜ ಇಡೀ ವಿಶ್ವದಲ್ಲೇ ಶ್ರೇಷ್ಠ. ಇತರರಂತೆ ಬಲಾತ್ಕಾರದ ಮತಾಂತರಕ್ಕೆ ಹಿಂದೂಗಳು ಎಂದೂ ಮುಂದಾಗುವುದಿಲ್ಲ. ಛತ್ತೀಸ್‌ಗಢವನ್ನು ರಾಮರಾಜ್ಯವಾಗಿ ಪರಿವರ್ತಿಸುವ ಸರ್ಕಾರ ನಮಗೆ ಬೇಕು" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News