ಬಿನ್ನಿ ಎಫೆಕ್ಟ್: ಫ್ಲಿಪ್‌ಕಾರ್ಟ್‌ಗೆ ಮತ್ತೊಂದು ಆಘಾತ

Update: 2018-11-16 04:15 GMT

ಬೆಂಗಳೂರು, ನ.16: ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್, ವೈಯಕ್ತಿಕ ದುರ್ನಡತೆ ಆರೋಪದ ಹಿನ್ನೆಲೆಯಲ್ಲಿ ಹುದ್ದೆ ತ್ಯಜಿಸಿರುವ ಬೆನ್ನಲ್ಲೇ ಫ್ಲಿಪ್‌ಕಾರ್ಟ್ ಸಹಸಂಸ್ಥೆಯಾದ ಮೈಂತ್ರಾ ಸಿಇಒ ಅನಂತ್ ನಾರಾಯಣ್ ಹಾಗೂ ಸಿಎಫ್‌ಒ ದೀಪಂಜನ್ ಬಸು ರಾಜೀನಾಮೆ ನೀಡಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ತಳಮಳಕ್ಕೆ ಕಾರಣವಾಗಿದೆ.

ಬನ್ಸಾಲ್ ನಿರ್ಗಮನದ ಬಳಿಕ ಫ್ಲಿಪ್‌ಕಾರ್ಟ್‌ನ ಬಹುತೇಕ ಷೇರು ಹೊಂದಿರುವ ವಾಲ್‌ಮಾರ್ಟ್ ಹೇಳಿಕೆ ನೀಡಿ, ನಾರಾಯಣ್ ಅವರು ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿಯವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಸ್ಪಷ್ಟಪಡಿಸಿತ್ತು. ಇದಕ್ಕೂ ಮುನ್ನ ನಾರಾಯಣ್ ಅವರು ಗ್ರೂಪ್ ಸಿಇಓ ಬಿನ್ನಿ ಬನ್ಸಾಲ್ ಅಧೀನದಲ್ಲಿದ್ದರು. ಕೃಷ್ಣಮೂರ್ತಿ ಹಾಗೂ ನಾರಾಯಣ್ ನಡುವೆ ಉತ್ತಮ ಬಾಂಧವ್ಯ ಇಲ್ಲದಿರುವುದೇ ನಾರಾಯಣ್ ರಾಜೀನಾಮೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಮೈಂತ್ರಾದಲ್ಲಿ ಗಣನೀಯ ಪ್ರಮಾಣದಲ್ಲಿ ಸಿಬ್ಬಂದಿ ಕಡಿತ ಪ್ರಕ್ರಿಯೆ ನಡೆಯುತ್ತಿದೆ ಎಂದೂ ಹೇಳಲಾಗಿದೆ. ಮುಂದಿನ ಒಂದೆರಡು ತಿಂಗಳಲ್ಲಿ 100 ರಿಂದ 500ರಷ್ಟು ಹುದ್ದೆ ಕಡಿತಗೊಳಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.

ನಾರಾಯಣ್ ಮೂರು ವರ್ಷಗಳಿಂದ ಮೈಂತ್ರಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ಕ್ಷೇತ್ರಗಳಿಗೆ ಲಗ್ಗೆ ಇಟ್ಟು ಕಂಪೆನಿಯ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸೌಂದರ್ಯವರ್ಧಕ ಮತ್ತು ಇತರ ಉತ್ಪನ್ನಗಳನ್ನೂ ತಮ್ಮ ಜಾಲಕ್ಕೆ ಸೇರಿಸಿದ್ದರು. ಇದೀಗ ಅವರ ದಿಢೀರ್ ನಿರ್ಗಮನದಿಂದಾಗಿ ಹೊಸ ವ್ಯವಹಾರಕ್ಕೆ ಹಿನ್ನಡೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News