ಕಾಂಗ್ರೆಸ್‌ಗೆ ಹೊಸ ಸವಾಲು ಹಾಕಿದ ಪ್ರಧಾನಿ ಮೋದಿ

Update: 2018-11-16 15:54 GMT

ಅಂಬಿಕಾಪುರ (ಛತ್ತೀಸ್‌ಗಡ),ನ.16: ‘‘ನೆಹರೂ ಅವರಿಂದಾಗಿಯೇ ಚಾಯ್‌ವಾಲಾ ಕೂಡ ಈ ದೇಶದ ಪ್ರಧಾನಿಯಾಗಲು ಸಾಧ್ಯವಾಗಿದೆ’’ ಎಂಬ ಕಾಂಗ್ರೆಸ್ ಟೀಕೆಗೆ ಶುಕ್ರವಾರ ಇಲ್ಲಿ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು,ಗಾಂಧಿ ಕುಟುಂಬಕ್ಕೆ ಸೇರಿರದ ಯಾರನ್ನಾದರೂ ನಿಮ್ಮ ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದರೆ ನೆಹರು ಅವರು ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಿದ್ದರು ಎಂದು ತಾನು ನಂಬುತ್ತೇನೆ ಎಂದು ಸವಾಲೊಡ್ಡಿದರು.

ಬಡತಾಯಿಯ ಮಗನೋರ್ವ ಈ ದೇಶದ ಪ್ರಧಾನಿಯಾಗಿದ್ದನ್ನು ಅರಗಿಸಿಕೊಳ್ಳಲು ಗಾಂಧಿ ಕುಟುಂಬಕ್ಕೆ ಇನ್ನೂ ಸಾಧ್ಯವಾಗುತ್ತಿಲ್ಲ ಎಂದೂ ಅವರು ಆರೋಪಿಸಿದರು.

ನೆಹರು ಅವರು ಸೃಷ್ಟಿಸಿದ್ದ ಸಾಂಸ್ಥಿಕ ಸ್ವರೂಪದಿಂದಾಗಿಯೇ ಓರ್ವ ಚಾಯ್‌ವಾಲಾ ಕೂಡ ಈ ದೇಶದ ಪ್ರಧಾನಿಯಾಗಲು ಸಾಧ್ಯವಾಗಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದರೆ, ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಸಂರಕ್ಷಿಸಿದ್ದರಿಂದಲೇ ಓರ್ವ ಚಾಯ್‌ವಾಲಾ ಕೂಡ ಪ್ರಧಾನಿಯಾಗುವಂತಾಗಿದೆ ಎಂದು ಅವರ ಸಹೋದ್ಯೋಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.

ನಿಮಗೆ ಪ್ರಜಾಪ್ರಭುತ್ವದ ಬಗ್ಗೆ ಅಷ್ಟೊಂದು ಗೌರವವಿದ್ದರೆ ಒಂದು ಸಣ್ಣ ಕೆಲಸವನ್ನು ಮಾಡಿ. ಕೇವಲ ಐದು ವರ್ಷಗಳ ಅವಧಿಗೆ ಗಾಂಧಿ ಕುಟುಂಬದ ಹೊರಗಿನ ಯಾರಾದರೂ ಒಳ್ಳೆಯ ವ್ಯಕ್ತಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿ. ನೀವು ಹಾಗೆ ಮಾಡಿದರೆ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯೂ ಕಾಂಗ್ರೆಸ್ ಅಧ್ಯಕ್ಷರಾಗಲು ಸಾಧ್ಯವಾಗುವ ಪ್ರಜಾಪಭುತ್ವ ವ್ಯವಸ್ಥೆಯನ್ನು ನೆಹರು ಸೃಷ್ಟಿಸಿದ್ದರು ಎನ್ನುವುದನ್ನು ತಾನು ಒಪ್ಪಿಕೊಳ್ಳುತ್ತೇನೆ ಎಂದ ಮೋದಿ,ಗಾಂಧಿ ಕುಟುಂಬದ ನಾಲ್ಕು ತಲೆಮಾರುಗಳು ದೇಶಕ್ಕೇನು ಕೊಟ್ಟಿವೆ ಎನ್ನುವುದರ ಲೆಕ್ಕ ನೀಡಿ ಎಂದು ಕಾಂಗ್ರೆಸ್‌ನ್ನು ತಿವಿದರು.

ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಕಟುವಾಗಿ ಟೀಕಿಸಿದ ಅವರು,ಬಡವರು ಎದುರಿಸುತ್ತಿರುವ ಕಷ್ಟಗಳು ನಿಮಗೆ ಅರ್ಥವಾಗುವುದಿಲ್ಲ,ಆದರೆ ಓರ್ವ ಚಾಯ್‌ ವಾಲಾಗೆ ಅರ್ಥವಾಗುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News