ಅಮೆರಿಕದಲ್ಲಿ ಅಸಾಂಜ್ ವಿರುದ್ಧ ಗುಪ್ತ ಮೊಕದ್ದಮೆ: ಅನಿರೀಕ್ಷಿತವಾಗಿ ಬಹಿರಂಗ

Update: 2018-11-16 16:42 GMT

ವಾಶಿಂಗ್ಟನ್, ನ. 16: ಅಮೆರಿಕದ ಕಾನೂನು ಇಲಾಖೆಯು ನ್ಯಾಯಾಲಯದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ತಪ್ಪಾಗಿ ಜೂಲಿಯನ್ ಅಸಾಂಜ್‌ರ ಹೆಸರನ್ನು ಉಲ್ಲೇಖಿಸಿದೆ. ಅಮೆರಿಕದ ಪ್ರಾಸಿಕ್ಯೂಟರ್‌ಗಳು ವಿಕಿಲೀಕ್ಸ್ ಸ್ಥಾಪಕನ ವಿರುದ್ಧ ಗುಪ್ತವಾಗಿ ಪ್ರಕರಣ ದಾಖಲಿಸಿರುವುದು ಈ ಮೂಲಕ ಬೆಳಕಿಗೆ ಬಂದಿದೆ.

ವರ್ಜೀನಿಯದ ಫೆಡರಲ್ ಪ್ರಾಸಿಕ್ಯೂಟರ್ ಆಗಸ್ಟ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಅಸಾಂಜ್ ಹೆಸರು ಎರಡು ಬಾರಿ ಪ್ರಸ್ತಾಪವಾಗಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಪೀಡನೆ ನೀಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಗುಪ್ತವಾಗಿ ಮೊಕದ್ದಮೆ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಅದಲು ಬದಲಾಗಿ ಪ್ರಾಸಿಕ್ಯೂಟರ್ ಅಸಾಂಜ್‌ಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದರು.

ಅಸಾಂಜ್ ವಿರುದ್ಧ ನಿಜವಾಗಿಯೂ ಮೊಕದ್ದಮೆ ದಾಖಲಿಸಲಾಗಿದೆ ಎಂಬುದಾಗಿ ‘ವಾಶಿಂಗ್ಟನ್ ಪೋಸ್ಟ್’ ಗುರುವಾರ ವರದಿ ಮಾಡಿದೆ.

ಆದರೆ, ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿರುವ ಅಸಾಂಜ್ ವಿರುದ್ಧ ಯಾವ ಮೊಕದ್ದಮೆ ದಾಖಲಿಸಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ.

ಅಸಾಂಜ್ ಬಂಧನವು 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆಯೇ ಎಂಬ ಬಗ್ಗೆ ವಿಶೇಷ ವಕೀಲ ರಾಬರ್ಟ್ ಮಲ್ಲರ್ ನಡೆಸುತ್ತಿರುವ ತನಿಖೆಗೆ ವಿಶೇಷ ತಿರುವನ್ನು ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News