ವಸುಂಧರಾ ರಾಜೆ ವಿರುದ್ಧ ಮಾಜಿ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಪುತ್ರನನ್ನು ಕಣಕ್ಕಿಳಿಸಿದ ಕಾಂಗ್ರೆಸ್

Update: 2018-11-17 10:37 GMT

ಜೈಪುರ್,ನ.17 : ಕಳೆದ ತಿಂಗಳಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಸಿಂಗ್ ಅವರನ್ನು ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ವಿರುದ್ಧ ಝಲ್ರಪಟನ್ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

"ಇದು ಪಕ್ಷದ ನಿರ್ಧಾರ, ನಾನು ಸಿದ್ಧವಾಗಿದ್ದೇನೆ,'' ಎಂದು ಮನ್ವೇಂದ್ರ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ  32 ಹೆಸರುಗಳಿರುವ ಎರಡನೇ ಪಟ್ಟಿಯನ್ನು ಇಂದು ಅಪರಾಹ್ನ ಬಿಡುಗಡೆಗೊಳಿಸಿದಾಗ ಅದರಲ್ಲಿ ಮನ್ವೇಂದ್ರ ಅವರ ಹೆಸರೂ ಇತ್ತು. ಮನ್ವೇಂದ್ರ ಅವರು ಶಿಯೋ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.

ಈ ಹಿಂದೆ ಬಿಜೆಪಿ ಸೇರಿದ್ದು ತನ್ನ ದೊಡ್ಡ ತಪ್ಪೆಂದು ಹೇಳಿದ್ದ ಮನ್ವೇಂದ್ರ, ತಮ್ಮ ತಂದೆ ಜಸ್ವಂತ್ ಸಿಂಗ್ ಅವರಿಗೆ 2014ರ ಚುನಾವಣೆಯಲ್ಲಿ ಬಾರ್ಮೆರ್-ಜೈಸಲ್ಮೇರ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡದೇ ಇದ್ದುದರಿಂದ ರಜಪೂತರು ಬಿಜೆಪಿ ವಿರುದ್ಧ ಆಕ್ರೋಶ ಹೊಂದಿದ್ದಾರೆಂದು ಮನ್ವೇಂದ್ರ ಹೇಳಿದ್ದಾರೆ.

ಆಗಸ್ಟ್ ತಿಂಗಳ ಗೌರವ್ ಯಾತ್ರ ಸಂದರ್ಭ ಮನ್ವೇಂದ್ರ ಅವರ ಕ್ಷೇತ್ರದಲ್ಲಿ ಮಾತ್ರ ಮುಖ್ಯಮಂತ್ರಿ ರಾಜೆ ಸಂಚರಿಸಿರಲಿಲ್ಲ,  ಈ ಬೆಳವಣಿಗೆಯ ನಂತರ ಬಿಜೆಪಿ ತೊರೆದು ಮನ್ವೇಂದ್ರ ಸ್ವಾಭಿಮಾನ್ ರ್ಯಾಲಿ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News