ಪಟೇಲ್ ಪ್ರತಿಮೆಯ ಸ್ಥಳಕ್ಕೆ ಶೀಘ್ರ ರೈಲು, ವಿಮಾನ ಸಂಪರ್ಕ ವ್ಯವಸ್ಥೆ

Update: 2018-11-17 16:05 GMT

ಅಹ್ಮದಾಬಾದ್, ನ.17: ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಏಕತೆಯ ಪ್ರತಿಮೆ (ಪಟೇಲ್ ಪ್ರತಿಮೆ)ಯ ಸ್ಥಳಕ್ಕೆ ಶೀಘ್ರವೇ ರೈಲು ಮತ್ತು ವಿಮಾನ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಗುಜರಾತ್ ಸರಕಾರ ಘೋಷಿಸಿದೆ.

ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮತ್ತು ರೈಲ್ವೇ ಮಂಡಳಿಯ ಅಧಿಕಾರಿಗಳ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಸರಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನರ್ಮದಾ ಜಿಲ್ಲೆಯ ರಾಜ್‌ಪಿಪ್ಲ ಗ್ರಾಮದಲ್ಲಿ ವಿಮಾನ ನಿಲ್ದಾಣ ಆರಂಭಿಸಲಾಗುವುದು ಎಂದು ಎಎಐ ಅಧ್ಯಕ್ಷರ ಜೊತೆಗಿನ ಸಭೆಯ ಬಳಿಕ ಮುಖ್ಯಮಂತ್ರಿ ರೂಪಾನಿ ತಿಳಿಸಿದ್ದಾರೆ. ರಾಜ್‌ಪಿಪ್ಲ ನಗರ ಕೆವಾಡಿಯಾ ನಗರದ 23 ಕಿ.ಮೀ. ದೂರದಲ್ಲಿದೆ. ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವನಿ ಲೊಹಾನಿ ಜೊತೆ ನಡೆಸಿದ ಮಾತುಕತೆ ಸಂದರ್ಭ ಕೆವಾಡಿಯಾ ಗ್ರಾಮದವರೆಗೆ ರೈಲು ಹಳಿ ನಿರ್ಮಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಈ ಕಾರ್ಯವನ್ನು ಶೀಘ್ರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News