ಸುಳ್ಳು ಸುದ್ದಿಗಳ ಹಿಂದಿನ ಸತ್ಯ ಹೇಳಿದ್ದಕ್ಕೆ ಗರಂ

Update: 2018-11-18 07:36 GMT

ಹೊಸದಿಲ್ಲಿ,ನ.18: ನವೆಂಬರ್ 12ರಂದು ನಡೆದ 'ಬಿಯಾಂಡ್ ಫೇಕ್ ನ್ಯೂಸ್' ಎಂಬ ಸಮ್ಮೇಳನದಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಧಾನ ಭಾಷಣ ಮಾಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರ ಭಾಷಣ ರದ್ದಾಯಿತು. ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಸಮಾರಂಭಕ್ಕೆ ಗೈರುಹಾಜರಾದರು.

ಸಂಪುಟ ಸಹೋದ್ಯೋಗಿ ಅನಂತಕುಮಾರ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಲುವಾಗಿ ರವಿಶಂಕರ್ ಪ್ರಸಾದ್ ಸಮ್ಮೇಳನದಿಂದ ದೂರ ಉಳಿದಿದ್ದಾರೆ ಎನ್ನುವುದು ಹಲವರ ಅನಿಸಿಕೆ. ಆದರೆ ಬಿಬಿಸಿಯಲ್ಲಿ ಪ್ರಕಟವಾದ ಒಂದು ಸುದ್ದಿಯಿಂದ ಗರಂ ಆದ ಸಚಿವರು ಕಾರ್ಯಕ್ರಮದಿಂದ ದೂರ ಉಳಿದರು ಎನ್ನುವ ಅಂಶ ತಿಳಿದುಬಂದಿದೆ. "ರೈಸಿಂಗ್ ಟೈಡ್ ಆಫ್ ನ್ಯಾಷನಲಿಸಂ ಇನ್ ಇಂಡಿಯಾ ಈಸ್ ಡ್ರೈವಿಂಗ್ ಆರ್ಡಿನರಿ ಸಿಟಿಜನ್ಸ್ ಟೂ ಸ್ಪ್ರೆಡ್ ಫೇಕ್ ನ್ಯೂಸ್" ಎಂಬ ಸುದ್ದಿಯನ್ನು ಬಿಬಿಸಿ ಸಂಶೋಧನಾ ತಂಡ ಪ್ರಕಟಿಸಿತ್ತು. ರಾಷ್ಟ್ರೀಯವಾದಿ ಸುಳ್ಳುಸುದ್ದಿಗಳನ್ನು ಹರಡುವಲ್ಲಿ ಬಲಪಂಥೀಯ ಜಾಲ ಎಡಪಕ್ಷಗಳಿಗಿಂತ ಮುಂದಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಇದರಿಂದ ಗರಂ ಆದ ಸಚಿವರು ಹಾಗೂ ಅವರ ಬೆಂಬಲಿಗರು ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎಂದು ಬಿಬಿಸಿ ಸ್ಪಷ್ಟಪಡಿಸಿದೆ. ಈ ಗುಂಪು ಚರ್ಚೆಯಲ್ಲಿ ಭಾಗವಹಿಸಬೇಕಿದ್ದ ಆಮ್ ಆದ್ಮಿ ಪಕ್ಷದ ಅಂಕಿತ್‍ಲಾಲ್ ಹಾಗೂ ಕಾಂಗ್ರೆಸ್‍ನ ದಿವ್ಯಸ್ಪಂದನ ಕೂಡಾ ಕೊನೆಕ್ಷಣದಲ್ಲಿ ಹೊರಗುಳಿದರು.

ಡಿಜಿಟಲ್ ಮಾರ್ಗದ ಮೂಲಕ ಸುಳ್ಳುಸುದ್ದಿ ಹಬ್ಬಿಸುವ ಘಟನೆಗಳನ್ನು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಸಿ ದೇಶಾದ್ಯಂತ ಇಂಥ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರಾಜಕೀಯ, ಶೈಕ್ಷಣಿಕ ಮತ್ತು ನಾಗರಿಕ ಸಮಾಜದ ಗಣ್ಯರನ್ನು ಕರೆಸಿ, ಈ ಬಗ್ಗೆ ಚರ್ಚೆ ನಡೆಸಿ, ಸಂಭಾವ್ಯ ಪರಿಹಾರಕ್ಕೆ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News