ವಿಶ್ವದ 50 ಅತ್ಯುತ್ತಮ ಉದ್ಯಮಾಡಳಿತ ಪ್ರೊಫೆಸರ್ ಪಟ್ಟಿಯಲ್ಲಿ ಕನ್ನಡಿಗ ಡಾ. ಅಮಿತಾಬ್ ಆನಂದ್

Update: 2018-11-18 15:11 GMT

ಹೊಸದಿಲ್ಲಿ, ನ.18: ಅಮೆರಿಕ ಮೂಲದ ವೆಬ್ ಆಧಾರಿತ ಸಂಪರ್ಕ ಸಂಸ್ಥೆ ‘ಪೋಯೆಟ್ಸ್ ಆ್ಯಂಡ್ ಖ್ವಾಂಟ್ಸ್’ ಆಯ್ಕೆ ಮಾಡಿರುವ ವಿಶ್ವದ 50 ಅತ್ಯುತ್ತಮ ಪದವಿಪೂರ್ವ ಉದ್ಯಮಾಡಳಿತ ಪ್ರೊಫೆಸರ್‌ಗಳ ಪಟ್ಟಿಯಲ್ಲಿ ಕನ್ನಡ ಮೂಲದ ವ್ಯಕ್ತಿಯೊಬ್ಬರು ಸ್ಥಾನ ಪಡೆದಿದ್ದಾರೆ.

ಕರ್ನಾಟಕ ಮೂಲದ, ಈಗ ಫ್ರಾನ್ಸ್‌ನ ಕೋಟ್ ಡಿ’ಅಝೂರ್ ವಿವಿಯ ಎಸ್‌ಕೆಇಎಂಎ ಉದ್ಯಮಾಡಳಿತ ಶಾಲೆಯಲ್ಲಿ ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥನಾಗಿರುವ ಡಾ ಅಮಿತಾಬ್ ಆನಂದ್ ವಿಶ್ವದ ಅಗ್ರ ಪದವಿಪೂರ್ವ ಉದ್ಯಮಾಡಳಿತ ಪ್ರೊಫೆಸರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ವರ್ಚಸ್ವೀ ನಾಯಕತ್ವ, ಸೃಜನಶೀಲತೆಯ ಮೂಲಕ ವಿದ್ಯಾರ್ಥಿಗಳಲ್ಲಿ ಅಧ್ಯಯನಶೀಲತೆಗೆ ಸ್ಫೂರ್ತಿ ತುಂಬುವ ಪ್ರೊಫೆಸರ್‌ಗಳನ್ನು ವಿಶ್ವದಾದ್ಯಂತ ಪ್ರತೀ ವರ್ಷ ಆಯ್ಕೆ ಮಾಡಲಾಗುತ್ತದೆ. ಈ ವರ್ಷದ ಪಟ್ಟಿಯಲ್ಲಿ ಬಹುತೇಕ ಅಮೆರಿಕನ್ನರೇ ಕಾಣಿಸಿಕೊಂಡಿದ್ದು ಡಾ ಅಮಿತಾಬ್ ಯುರೋಪ್‌ನ ಏಕೈಕ ಪ್ರತಿನಿಧಿಯಾಗಿ ಪಟ್ಟಿಯಲ್ಲಿ ಸ್ಥಾನ ಪಡೆದ ಸಾಧನೆ ತೋರಿದ್ದಾರೆ.

ಕೇವಲ ಪಠ್ಯಪುಸ್ತಕದಲ್ಲಿ ಇರುವುದನ್ನು ಮಾತ್ರ ಬೋಧಿಸದೆ, ಉದ್ಯಮಾಡಳಿತ ಕ್ಷೇತ್ರದ ಖ್ಯಾತನಾಮರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ಒದಗಿಸಿಕೊಡುತ್ತಿದ್ದಾರೆ. ಎಸ್‌ಕೆಇಎಂಎ ಉದ್ಯಮಾಡಳಿತ ಶಾಲೆ ಯುರೋಪ್‌ನಲ್ಲಿ ಅಗ್ರಗಣ್ಯ ಉದ್ಯಮಾಡಳಿತ ಶಾಲೆಯಾಗಿ ಮಾನ್ಯತೆ ಗಳಿಸಿದೆ. ಪ್ರಶಸ್ತಿಗೆ ವಿಶ್ವದಾದ್ಯಂತ ಅತ್ಯಧಿಕ ನಾಮನಿರ್ದೇಶನ ಪಡೆದ ಮೂವರಲ್ಲಿ ಅಮಿತಾಬ್ ಓರ್ವರಾಗಿದ್ದಾರೆ ಎಂದು ‘ಪೋಯೆಟ್ಸ್ ಆ್ಯಂಡ್ ಖ್ವಾಂಟ್ಸ್’ ತಿಳಿಸಿದೆ. ನವೆಂಬರ್ 13ರಂದು ಅಂತಿಮ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಡಾ ಅಮಿತಾಬ್ ಸ್ವೀಡನ್‌ನ ಸ್ಟಾಕ್‌ಹೋಮ್ ವಿವಿಯಿಂದ ಎಂಬಿಎ ಪದವಿ, ಪ್ಯಾರಿಸ್‌ನ ‘ನಿಯೋಮಾ’ ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News