ಚೆನ್ನೈ: ಸಮುದ್ರದಲ್ಲಿ ಭಾರೀ ತೈಲ ಸೋರಿಕೆ

Update: 2018-11-19 04:07 GMT

ಚೆನ್ನೈ, ನ.19: ಚೆನ್ನೈ ಬಂದರಿನ ಉತ್ತರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿದ್ದು, ಸುಮಾರು ಎರಡು ಟನ್ ತೈಲ ಸಮುದ್ರ ಪಾಲಾಗಿದೆ. ಕಳೆದ ವರ್ಷದ ಘಟನಾವಳಿಯನ್ನು ಇದು ನೆನಪಿಸಿದ್ದು, ಕಳೆದ ವರ್ಷ ಇಂಥದ್ದೇ ಸೋರಿಕೆ ಉಂಟಾಗಿ ಅದನ್ನು ಸ್ವಚ್ಛಗೊಳಿಸಲು ಮತ್ತು ಪರಿಸರಕ್ಕೆ ಆದ ಹಾನಿಯನ್ನು ತಡೆಯಲು ಹರಸಾಹಸ ಮಾಡಲಾಗಿತ್ತು.

ಚೆನ್ನೈನಿಂದ ಸುಮಾರು 20 ಕಿಲೋಮೀಟರ್ ದೂರದ ಎನ್ನೋರ್‌ನ ಕಾಮರಾಜರ್ ಬಂದರಿನಲ್ಲಿ ಈ ಘಟನೆ ನಡೆದಿದೆ. ಎರಡು ಸರಕು ಸಾಗಾಟ ಹಡಗುಗಳು ಪರಸ್ಪರ ಢಿಕ್ಕಿ ಹೊಡೆದು ಇದೇ ಪ್ರದೇಶದಲ್ಲಿ 2017ರ ಜನವರಿಯಲ್ಲಿ ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿತ್ತು.

ತೈಲ ವರ್ಗಾವಣೆಯ ಪೈಪ್ ಒಡೆದ ಹಿನ್ನೆಲೆಯಲ್ಲಿ ರವಿವಾರ ಈ ದುರಂತ ಸಂಭವಿಸಿದ್ದು, ಸಮುದ್ರಪಾಲಾಗಿರುವ ತೈಲ ಸ್ವಚ್ಛಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ನಾಳೆಯ ವೇಳೆಗೆ ಇದು ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಂಟಿ ಕೊರಲ್ ಸ್ಟಾರ್ಸ್‌ ಎಂಬ ಟ್ಯಾಂಕರ್‌ನಿಂದ ಈ ತೈಲ ಸೋರಿಕೆಯಾಗಿದೆ ಎಂದು ಮೂಲಗಳು ಹೇಳಿವೆ.

ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಮರ್ಕೆಂಟೈಲ್ ಮೆರೈನ್ ವಿಭಾಗಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿವೆ. ರವಿವಾರ ಟ್ಯಾಂಕರ್‌ನಿಂದ ತೈಲವನ್ನು ವರ್ಗಾವಣೆ ಮಾಡುತ್ತಿದ್ದಾಗ ಪೈಪ್ ಒಡೆದು, ತೈಲ ಸೋರಿಕೆಯಾಗಿದೆ ಎಂದು ಬಂದರಿನ ಅಧ್ಯಕ್ಷ ಮತ್ತು ಆಡಳಿತ ಇರ್ದೇಶಕ ಪಿ.ರವೀಂದ್ರನ್ ಹೇಳಿದ್ದಾರೆ. ನೀರಿನಲ್ಲಿ ಸೇರಿರುವ ತೈಲ ಸಂಗ್ರಹಿಸಲು ಸ್ಕಿಮ್ಮರ್ ಬಳಸಲಾಗುತ್ತಿದೆ. ಸೋರಿಕೆಯಾದ ತೈಲದಲ್ಲಿ ಶೇಕಡ 80ರಷ್ಟು ಟ್ಯಾಂಕರ್‌ನ ಸುತ್ತಲೂ ಇದೆ. ಇನ್ನೂ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News