ಜೊಕೊವಿಕ್‌ಗೆ ಶಾಕ್ ನೀಡಿದ ಝ್ವೆರೆವ್‌ಗೆ ಎಟಿಪಿ ಫೈನಲ್ಸ್ ಪ್ರಶಸ್ತಿ

Update: 2018-11-19 09:08 GMT

ಲಂಡನ್, ನ.19: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್‌ರನ್ನು ನೇರ ಸೆಟ್‌ಗಳಿಂದ ಸೋಲಿಸಿ ಶಾಕ್ ನೀಡಿದ ಜರ್ಮನಿಯ ಕಿರಿಯ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಎಟಿಪಿ ಫೈನಲ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ.

ಇಲ್ಲಿ ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 21ರ ಹರೆಯದ ಝ್ವೆರೆವ್ ಸರ್ಬಿಯದ ಆಟಗಾರ ಜೊಕೊವಿಕ್‌ರನ್ನು 6-4, 6-3 ನೇರ ಸೆಟ್‌ಗಳಿಂದ ಮಣಿಸಿದರು. ಎರಡನೇ ಬಾರಿ ವರ್ಷಾಂತ್ಯದ ಟೂರ್ನಿಯಲ್ಲಿ ಭಾಗವಹಿಸಿದ್ದ ಝ್ವೆರೆವ್ ಪ್ರಶಸ್ತಿ ತನ್ನದಾಗಿಸಿಕೊಂಡರು.

 ಝ್ವೆರೆವ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಆರು ಬಾರಿಯ ಚಾಂಪಿಯನ್ ರೋಜರ್ ಫೆಡರರ್‌ರನ್ನು ಸೋಲಿಸಿ ಗಮನ ಸೆಳೆದಿದ್ದರು.

‘‘ನಿಜವಾಗಿಯೂ ನನಗೆ ಸಂಭ್ರಮವನ್ನು ಬಣ್ಣಿಸಲು ಸಾಧ್ಯವಾಗುತ್ತಿಲ್ಲ. ನನ್ನ ವೃತ್ತಿಜೀವನದ ಅತ್ಯಂತ ದೊಡ್ಡ ಪ್ರಶಸ್ತಿ ಇದಾಗಿದೆ. ಮೊದಲಿಗೆ ನಾನು ನೊವಾಕ್‌ಗೆ ಅಭಿನಂದನೆ ಸಲ್ಲಿಸಲು ಬಯಸುವೆ. ಕಳೆದ ಕೆಲವು ತಿಂಗಳುಗಳಿಂದ ಅವರು ಆಡಿದ್ದ ಟೆನಿಸ್‌ನ್ನು ನಾವು ಈತನಕ ನೋಡಿರಲಿಲ್ಲ. ಅವರು ಪಂದ್ಯ ಸೋಲುವುದೇ ಅಪರೂಪ. ಇದೀಗ ನನಗಾಗಿ ಸೋತಿದ್ದಕ್ಕೆ ಧನ್ಯವಾದ’’ ಎಂದು ಝ್ವೆರೆವ್ ಹೇಳಿದ್ದಾರೆ.

31ರ ಹರೆಯದ ಜೊಕೊವಿಕ್ ಆರನೇ ಬಾರಿ ಎಟಿಪಿ ಫೈನಲ್ಸ್ ಪ್ರಶಸ್ತಿ ಜಯಿಸುವ ಮೂಲಕ ಫೆಡರರ್‌ಗೆ ಪ್ರಶಸ್ತಿ ದಾಖಲೆ ಸರಿಗಟ್ಟುವ ವಿಶ್ವಾಸದಲ್ಲಿದ್ದರು. ಬುಧವಾರ ನಡೆದ ರೌಂಡ್ ರಾಬಿನ್ ಪಂದ್ಯದಲ್ಲಿ ಜೊಕೊವಿಕ್ ಅವರು ಝ್ವೆರೆವ್‌ರನ್ನು 6-4, 6-1 ಅಂತರದಿಂದ ಮಣಿಸಿದ್ದರು. ಆದರೆ, ರವಿವಾರ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ಅದೇ ಪ್ರದರ್ಶನ ಪುನರಾವರ್ತಿಸಲು ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News