ಹೃದಯಾಘಾತದ ಕುರಿತು ನಿಮಗೆಷ್ಟು ಗೊತ್ತು.....?

Update: 2018-11-19 10:48 GMT

ಹೃದಯಾಘಾತವು ವಿಶ್ವಾದ್ಯಂತ ಜನರ ಸಾವಿಗೆ ನಂ.1 ಕಾರಣವಾಗಿದೆ. ಹೃದಯಕ್ಕೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಹೃದಯಾಘಾತ ಸಂಭವಿಸುತ್ತದೆ. ಬೊಜ್ಜು,ಮಧುಮೇಹ,ಧೂಮ್ರಪಾನ ಮತ್ತು ಮದ್ಯಪಾನ ಇವು ಹೃದಯಾಘಾತದ ಅಪಾಯಗಳನು ಹೆಚ್ಚಿಸುತ್ತವೆ. ಹೃದಯಾಘಾತದ ಕುರಿತು ನಿಮಗೆ ತಿಳಿದಿರಬೇಕಾದ ಕೆಲವು ಮಾಹಿತಿಗಳು ಇಲ್ಲಿವೆ.....

  ನಾವು ಒಟ್ಟಾರೆಯಾಗಿ ಆರೋಗ್ಯವಂತರಾಗಿರುವಲ್ಲಿ ಹೃದಯದ ಪಾತ್ರ ಎಷ್ಟು ಮುಖ್ಯ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಹೃದಯಾಘಾತವು ಒಂದು ವಿಧದ ಹೃದಯರಕ್ತನಾಳ ವೈಕಲ್ಯವಾಗಿದ್ದು,ಈ ಸ್ಥಿತಿಯಲ್ಲಿ ಹೃದಯಕ್ಕೆ ರಕ್ತದ ಪೂರೈಕೆ ಸ್ಥಗಿತಗೊಳ್ಳುತ್ತದೆ. ಎದೆನೋವು,ವಾಕರಿಕೆ,ಎದೆಯುರಿ,ದಣಿವು,ತಲೆ ಹಗುರವಾಗುವಿಕೆ ಮತ್ತು ದಿಢೀರ್ ತಲೆ ಸುತ್ತುವಿಕೆ ಇವು ಹೃದಯಾಘಾತದ ಸಾಮಾನ್ಯ ಲಕ್ಷಣಗಳಾಗಿವೆ.

ಹೃದಯ-ಅದೊಂದು ವಿಶೇಷ ಸ್ನಾಯು

 ನಮ್ಮ ಹೃದಯವು ನಮ್ಮ ಮುಷ್ಟಿಯಷ್ಟು ಗಾತ್ರವನ್ನು ಹೊಂದಿರುತ್ತದೆ. ಅದು ವಿಶೇಷ ಸ್ನಾಯುವಾಗಿದ್ದು,ನಿರಂತರವಾಗಿ ಸಂಕುಚನಗೊಳ್ಳುತ್ತಿರುತ್ತದೆ ಮತ್ತು ನಮ್ಮ ಇಡೀ ಶರೀರಕ್ಕೆ ಹಾಗೂ ಶ್ವಾಸಕೋಶಗಳಿಗೆ ರಕ್ತವನ್ನು ಪಂಪ್ ಮಾಡುತ್ತಿರುತ್ತದೆ. ನಮ್ಮ ಹೃದಯದ ಮೂಲಕ ನಿರಂತರ ವಿದ್ಯುತ್ ಹರಿವು ಈ ಪಂಪಿಂಗ್ ಕ್ರಿಯೆಗೆ ಕಾರಣವಾಗಿರುತ್ತದೆ. ಈ ವಿದ್ಯುತ್ ಚಟುವಟಿಕೆಗೆ ವ್ಯತ್ಯಯವುಂಟಾದರೆ ಅದು ರಕ್ತವನ್ನು ಸರಿಯಾಗಿ ಪಂಪ್ ಮಾಡುವ ಹೃದಯದ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಎರ್ರಿತ್ಮಿಯಾಕ್ಕೆ ಕಾರಣವಾಗುತ್ತದೆ.

ಹೃದಯದಲ್ಲಿ ವಿದ್ಯುತ್ ಚಟುವಟಿಕೆ ವ್ಯತ್ಯಯಗೊಳ್ಳಲು ಕಾರಣವೇನು?

ಎರ್ರಿತ್ಮಿಯಾಕ್ಕೆ ಹಲವಾರು ಕಾರಣಗಳಿವೆ. ಪ್ರಮುಖವಾಗಿ ಒಂದೇ ಬಗೆಯ ಜೀವನಶೈಲಿಯು ಇದಕ್ಕೆ ಕಾರಣವಾಗುತ್ತದೆ. ಮಧುಮೇಹ, ಬೊಜ್ಜು, ಧೂಮ್ರಪಾನ,ಮದ್ಯಪಾನ,ಕೊಬ್ಬು ಅಧಿಕವಾಗಿರುವ ಆಹಾರ ಮತ್ತು ಕರಿದ ಖಾದ್ಯಗಳ ಸೇವನೆ ಇತ್ಯಾದಿಗಳು ಇತರ ಕಾರಣಗಳಾಗಿವೆ. ಕೆಲವು ಪ್ರಕರಣಗಳಲ್ಲಿ ವಂಶವಾಹಿಯೂ ಕಾರಣವಾಗಿರುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆ ಪಡೆಯುವುದೊಂದೇ ಮಾರ್ಗವಾಗಿರುತ್ತದೆ. ಸಾಮಾನ್ಯವಾಗಿ ಕಾರಣಗಳೇನೇ ಇರಲಿ,ವೈದ್ಯರು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸಲಹೆಯನ್ನು ನೀಡುತ್ತಾರೆ.

ಹೃದಯಾಘಾತದಲ್ಲಿ ನಿಖರವಾಗಿ ಏನು ಸಂಭವಿಸುತ್ತದೆ?

ಹೃದಯಾಘಾತ ಮತ್ತು ಮಿದುಳಿನ ಆಘಾತ ಅಪಧಮನಿಗಳಲ್ಲಿ ಕರಣೆ ಗಟ್ಟುವುದರಿಂದ ಉಂಟಾಗುವ ಹೃದಯ ಕಾಯಿಲೆಯ ಲಕ್ಷಣಗಳಾಗಿವೆ. ಹಾಗೆಂದು ಅಪಧಮನಿಗಳಲ್ಲಿ ರಾತ್ರಿ ಬೆಳಗಾಗುವುದರಲ್ಲಿ ತಡೆಗಳು ನಿರ್ಮಾಣಗೊಳ್ಳುವುದಿಲ್ಲ, ಅವು ಕ್ರಮೇಣ ಉಂಟಾಗುತ್ತವೆ. ಅಪಧಮನಿಗಳಲ್ಲಿಯ ತಡೆಗಳು ಅವುಗಳನ್ನು ಕುಗ್ಗಿಸುತ್ತವೆ ಮತ್ತು ಇದರಿಂದ ಹೃದಯಕ್ಕೆ ರಕ್ತಪೂರೈಕೆ ಸರಿಯಾಗಿ ಆಗುವುದಿಲ್ಲ. ಇದು ಜೀವಕ್ಕೆ ಅಪಾಯವನ್ನುಂಟು ಮಾಡುವ ಸ್ಥಿತಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಲಕ್ಷಣಗಳು ಸುಪ್ತವಾಗಿರುತ್ತವೆ ಮತ್ತು ಹೃದಯ ರಕ್ತನಾಳಕ್ಕೆ ಸಂಪೂರ್ಣ ಹಾನಿಯುಂಟಾದಾಗಲೇ ಪ್ರಕಟಗೊಳ್ಳುತ್ತವೆ. ಸಾಮಾನ್ಯವಾಗಿ ವ್ಯಕ್ತಿಗೆ ಹೃದಯಾಘಾತವುಂಟಾದಾಗ ಆತನ ಹೃದಯ ರಕ್ತನಾಳದ ವ್ಯಾಸ ಶೇ.70 ರಿಂದ ಶೇ.100ರಷ್ಟು ಕಡಿಮೆಯಾಗಿರುತ್ತದೆ. ಅಪಧಮನಿಯು ಹಠಾತ್ ಸಂಕುಚಿತಗೊಂಡರೆ ಅಥವಾ ಚರ್ಮದ ಮೇಲಿನ ಗುಳ್ಳೆಯಂತೆ ಒಡೆದರೆ ಹೃದಯದ ಬಡಿತವು ತಾಳ ತಪ್ಪುತ್ತದೆ ಮತ್ತು ದಿಢೀರ್ ಹೃದಯಾಘಾತ ಸಂಭವಿಸುತ್ತದೆ.

ಸದ್ಯೋಭವಿಷ್ಯದಲ್ಲಿ ಹೃದಯಾಘಾತದ ಸಾಧ್ಯತೆಯನ್ನು ಮೊದಲೇ ಕಂಡುಕೊಳ್ಳಲು ಸಾಧ್ಯವೇ?

ಇದು ಇಡೀ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಬಹುದಾದ ಪ್ರಶ್ನೆ. ಈ ಬಗ್ಗೆ ಕೇವಲ ಊಹಾಪೋಹಗಳಿದ್ದು,ಉತ್ತರ ಕಂಡುಕೊಳ್ಳಲು ವ್ಯಾಪಕ ಸಂಶೋಧನೆಗಳು ನಡೆಯುತ್ತಿವೆ. ಉದಾಹರಣೆಗೆ ಹೃದಯದ ಸಿಟಿ ಸ್ಕಾನ್ ಪ್ರಮುಖವಾಗಿ ಪರಿಧಮನಿಯ ಭಿತ್ತಿಗಳಲ್ಲಿರುವ ಕ್ಯಾಲ್ಸಿಯಂ ಪ್ರಮಾಣವನ್ನು ಲೆಕ್ಕ ಹಾಕುತ್ತದೆ. ಈ ವಿಧದ ಸಿಟಿ ಸ್ಕಾನ್‌ನ್ನು ಕೊರೊನರಿ ಕ್ಯಾಲ್ಸಿಯಂ ಸ್ಕಾನ್ ಎನ್ನಲಾಗುತ್ತದೆ. ಆದರೆ ಇದಕ್ಕೆ ಅಪಾಯಕಾರಿ ಮುಖವೂ ಇದೆ. ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಅದು ಕ್ಯಾನ್ಸರ್‌ಗೆ ಕಾರಣವಾಗಬಹುದು, ಮಹಿಳೆಯರಲ್ಲಿ ವಿಧೇಷವಾಗಿ ಸ್ತನ ಕ್ಯಾನ್ಸರ್ ಉಂಟಾಗಬಹುದು. ನಮಗಿರುವ ಇನ್ನೊಂದು ಆಯ್ಕೆಯೆಂದರೆ ಡೋಪ್ಲರ್ ಸೋನೊಗ್ರಫಿ. ಇದು ಕೊಬ್ಬು ಸಂಗ್ರಹವನ್ನು ಪತ್ತೆ ಹಚ್ಚುತ್ತದೆ.

ವೈದ್ಯರು ಹೆಚ್ಚೆಂದರೆ ಅಪಾಯದ ಸಾಧ್ಯತೆಯನ್ನು ಲೆಕ್ಕ ಹಾಕಬಹುದು,ಆದರೆ ಅಪಾಯವು ನಿಖರವಾಗಿ ಯಾವಾಗ ಸಂಭವಿಸುತ್ತದೆ ಎನ್ನುವುದು ಅವರಿಗೂ ಗೊತ್ತಾಗುವುದಿಲ್ಲ. ಹೆಚ್ಚೆಂದರೆ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಅವರು ರೋಗಿಗಳಿಗೆ ಸಲಹೆ ನೀಡಬಹುದು. ಎದೆಯಲ್ಲಿ ಸಣ್ಣ ತೊಂದರೆ ಕಂಡುಬಂದರೂ ಅದು ಜೀವಕ್ಕೆ ಅಪಾಯವನ್ನು ತರಬಹುದು ಎನ್ನುವುದನ್ನು ಜನರು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹೃದಯದ ಬಗ್ಗೆ ಸರಿಯಾದ ತಿಳುವಳಿಕೆಯಿದ್ದರೆ ಅದರ ಆರೋಗ್ಯಕ್ಕೆ ಯಾವುದು ಒಳ್ಳೆಯದು,ಯಾವುದು ಕೆಟ್ಟದ್ದು ಎನ್ನುವುದನ್ನು ಗುರುತಿಸಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಹೃದಯರಕ್ತನಾಳ ಕಾಯಿಲೆಗಳ ಇತಿಹಾಸವನ್ನು ಹೊಂದಿರುವವರು ನಿಯಮಿತವಾಗಿ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ.

ಯಾವ ಆಹಾರ ಸೂಕ್ತ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳೇನು?

  ಕಾರ್ಬೊಹೈಡ್ರೇಟ್‌ಗಳ ಬದಲು ಪ್ರೋಟಿನ್ ಮತ್ತು ಮೊನೊಸ್ಯಾಚ್ಯುರೇಟೆಡ್ ಫ್ಯಾಟ್ ಒಳಗೊಂಡಿರುವ ಆಹಾರ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ಅಧಿಕ ರಕ್ತದೊತ್ತಡವನ್ನು ತಗ್ಗಿಸಬಹುದು. ಜೀವನ ಕ್ರಿಯಾಶೀಲವಾಗಿರಬೇಕು ಮತ್ತು ವ್ಯಾಯಾಮ ಅತ್ಯಂತ ಮುಖ್ಯವಾಗಿದೆ. ವ್ಯಾಯಾಮವೆಂದರೆ ಜಿಮ್‌ಗೇ ಹೋಗಬೇಕೆಂದೇನಿಲ್ಲ. ಬೆಳಿಗ್ಗೆ ಅಥವಾ ಸಂಜೆಯ ವೇಳೆಗೆ ಬಿರುಸಿನ ವಾಕಿಂಗ್ ಮಾಡುವ ಮೂಲಕ ಶರೀರವನ್ನು ಆರೋಗ್ಯಯುತವಾಗಿ ಇರಿಸಿಕೊಳ್ಳಬಹುದು. ತನ್ಮೂಲಕ ರೋಗಗಳಿಂದ ಮುಕ್ತವಾದ,ವಿಶೇಷವಾಗಿ ಆರೋಗ್ಯಯುತ ಹೃದಯದೊಂದಿಗೆ ಸುಖವಾಗಿ ಬದುಕಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News