ಎಲ್ಗಾರ್ ಪರಿಷದ್: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ದೂರವಾಣಿ ಸಂಖ್ಯೆಯಿದ್ದ ಪತ್ರ ವಶ

Update: 2018-11-19 14:19 GMT

ಪುಣೆ,ನ.19: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷದ್‌ಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸ್ ತಂಡ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಸಂಖ್ಯೆಯಿರುವ ಪತ್ರವೊಂದನ್ನು ವಶಪಡಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ತನಿಖಾ ಅಧಿಕಾರಿಗಳು ದೇಶವ್ಯಾಪಿ ನಡೆಸಿದ ದಾಳಿಗಳ ಸಮಯದಲ್ಲಿ ಈ ಪತ್ರ ಪೊಲೀಸರ ಕೈಗೆ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಗಾರ್ ಪರಿಷದ್ ಮತ್ತು ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಹತ್ತು ಹೋರಾಟಗಾರರನ್ನು ಬಂಧಿಸಿದ್ದರು. ಹಕ್ಕುಗಳ ಹೋರಾಟಗಾರರಾದ ಸುರೇಂದ್ರ ಗಡ್ಲಿಂಗ್, ಶೋಮಾ ಸೇನ್, ಮಹೇಶ್ ರಾವತ್, ರೋನಾ ವಿಲ್ಸನ್ ಮತ್ತು ಸುಧೀರ್ ಧವಲೆಯನ್ನು ಜೂನ್‌ನಲ್ಲಿ ಬಂಧಿಸಿ ದೋಷಾರೋಪ ಸಲ್ಲಿಸಲಾಗಿತ್ತು. ಸದ್ಯ ಪೊಲೀಸರ ಕೈಸೇರಿರುವ ಪತ್ರವನ್ನು ಸೆಪ್ಟಂಬರ್25,2017ರಲ್ಲಿ ಸುರೇಂದ್ರ (ಪೊಲೀಸರ ಪ್ರಕಾರ ಸುರೇಂದ್ರ ಗಡ್ಲಿಂಗ್) ಎಂಬವರಿಗೆ ಕಾಮ್ರೆಡ್ ಪ್ರಕಾಶ್ ಎಂಬವರು ಬರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಈ ಪತ್ರದಲ್ಲಿ, ನಾವು ವಿದ್ಯಾರ್ಥಿಗಳನ್ನು ಬಳಸಿಕೊಂಡು ನಮ್ಮ ಹೋರಾಟವನ್ನು ದೇಶಾದ್ಯಂತ ಹರಡಬೇಕು. ವಿದ್ಯಾರ್ಥಿಗಳ ವಿರುದ್ಧ ಸರಕಾರ ಮೃದು ಧೋರಣೆ ಅನುಸರಿಸುತ್ತದೆ ಮತ್ತು ಇದು ನಮ್ಮ ವಿರುದ್ಧದ ಹೋರಾಟದಲ್ಲಿ ಸರಕಾರಕ್ಕೆ ಹಿನ್ನಡೆಯುಂಟು ಮಾಡಲಿದೆ. ಈ ಕಾರ್ಯದಲ್ಲಿ ನಮ್ಮನ್ನು ಬೆಂಬಲಿಸಲು ಕಾಂಗ್ರೆಸ್ ನಾಯಕರು ಸಿದ್ಧರಿದ್ದಾರೆ ಮತ್ತು ಮುಂದಿನ ಹೋರಾಟಕ್ಕೆ ಹಣವನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನೀವು ನಮ್ಮ ಗೆಳೆಯ (ದಿಗ್ವಿಜಯ್ ಸಿಂಗ್ ಅವರ ದೋರವಾಣಿ ಸಂಖ್ಯೆ ನೀಡಲಾಗಿದೆ).

ಕಾಂಗ್ರೆಸ್‌ನ ಜಾಲತಾಣದಲ್ಲೂ ಈ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಪ್ರಕರಣದಲ್ಲಿ ಹಲವು ದೂರವಾಣಿ ಸಂಖ್ಯೆಗಳು ಪತ್ತೆಯಾಗಿದ್ದು ಅಗತ್ಯಬಿದ್ದಲ್ಲಿ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News